
2025 ರ ಏಷ್ಯಾಕಪ್ (Asia Cup 2025) ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 28 ರವರೆಗೆ ನಡೆಯಲಿದೆ. ಈ ಟೂರ್ನಿಯನ್ನು ಬಿಸಿಸಿಐ (BCCI) ಆತಿಥ್ಯದಲ್ಲಿ ಯುಎಇಯ ಎರಡು ನಗರಗಳಾದ ದುಬೈ ಮತ್ತು ಅಬುಧಾಬಿಯಲ್ಲಿ ಆಯೋಜಿಸಲಾಗುವುದು. ಇದು ಈ ಪಂದ್ಯಾವಳಿಯ 17 ನೇ ಆವೃತ್ತಿಯಾಗಿದ್ದು, ಈ ಬಾರಿ ಟಿ20 ಸ್ವರೂಪದಲ್ಲಿ ಆಡಲಾಗುವುದು. ವಾಸ್ತವವಾಗಿ ಏಷ್ಯಾಕಪ್ ಅನ್ನು ಟಿ20 ಸ್ವರೂಪದಲ್ಲಿ ಆಯೋಜಿಸಲಾಗುತ್ತಿರುವುದು ಇದು ಮೂರನೇ ಬಾರಿ. ಉಳಿದ 14 ಬಾರಿ ಈ ಪಂದ್ಯಾವಳಿಯನ್ನು ಏಕದಿನ ಸ್ವರೂಪದಲ್ಲಿ ನಡೆಸಲಾಗಿದೆ. ಅಂದಹಾಗೆ ಏಷ್ಯಾಕಪ್ ಪಂದ್ಯಾವಳಿಯನ್ನು ಮೊದಲ ಬಾರಿಗೆ ಯಾವಾಗ ಆಡಲಾಯಿತು? ಈ ಟೂರ್ನಿಯಲ್ಲಿ ಯಾವ ತಂಡ ಎಷ್ಟು ಬಾರಿ ಟ್ರೋಫಿಯನ್ನು ಗೆದ್ದಿದೆ ಎಂಬ ಸ್ವಾರಸ್ಯಕರ ಸಂಗತಿಗಳನ್ನು ನಾವು ನಿಮಗೆ ಹೇಳಲಿದ್ದೇವೆ.
ಏಷ್ಯಾಕಪ್ ಏಷ್ಯಾದ ಅತಿದೊಡ್ಡ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಇದನ್ನು 1984 ರಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಾರಂಭಿಸಿತು. 2016 ರಿಂದ, ಇದನ್ನು ಐಸಿಸಿಯ ಪ್ರಮುಖ ಪಂದ್ಯಾವಳಿಗಳ ಸ್ವರೂಪಕ್ಕೆ ಅನುಗುಣವಾಗಿ ಅಂದರೆ ಏಕದಿನ ಸ್ವರೂಪ ಅಥವಾ 20-ಓವರ್ ಸ್ವರೂಪದಲ್ಲಿ ನಡೆಸಲಾಗುತ್ತಿದೆ.
ಇಲ್ಲಿಯವರೆಗೆ, ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ಪ್ರಾಬಲ್ಯ ಸಾಧಿಸಿವೆ. ಏಷ್ಯಾಕಪ್ ಯಾವಾಗಲೂ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ರೋಮಾಂಚಕ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಭಾರತ ಅತಿ ಹೆಚ್ಚು ಅಂದರೆ 8 ಬಾರಿ (1984, 1988, 1991, 1995, 2010, 2016, 2018, 2023) ಪ್ರಶಸ್ತಿಯನ್ನು ಗೆದ್ದಿದ್ದರೆ, ಶ್ರೀಲಂಕಾ 6 ಬಾರಿ (1986, 1997, 2004, 2008, 2014, 2022) ಚಾಂಪಿಯನ್ ಆಗಿದೆ. ಉಳಿದಂತೆ ಪಾಕಿಸ್ತಾನ ಕೂಡ 2 ಬಾರಿ (2000, 2012) ಟ್ರೋಫಿಯನ್ನು ಗೆದ್ದಿದೆ. ಬಾಂಗ್ಲಾದೇಶ ಕೂಡ 3 ಬಾರಿ ಫೈನಲ್ ತಲುಪಿದೆಯಾದರೂ ಇಲ್ಲಿಯವರೆಗೆ ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲವಾಗಿದೆ.
2025 ರ ಏಷ್ಯಾಕಪ್ ಸೆಪ್ಟೆಂಬರ್ 9 ರಂದು ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಈ ಬಾರಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಇವುಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡವು ತನ್ನ ಗುಂಪಿನ ಇತರ ಮೂರು ತಂಡಗಳ ವಿರುದ್ಧ ಪಂದ್ಯಗಳನ್ನು ಆಡಬೇಕಾಗುತ್ತದೆ. ಕಳೆದ ಬಾರಿಯ ವಿಜೇತ ಭಾರತ ತಂಡವು ಸೆಪ್ಟೆಂಬರ್ 10 ರಂದು ಆತಿಥೇಯ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
Asia Cup 2025: ಏಷ್ಯಾಕಪ್ಗೂ ಮುನ್ನ ಹೊರಬಿತ್ತು ಸೂರ್ಯಕುಮಾರ್ ಫಿಟ್ನೆಸ್ ಫಲಿತಾಂಶ
ಪ್ರಸ್ತುತ ಪ್ರಕಟವಾಗಿರುವ ಏಷ್ಯಾಕಪ್ ವೇಳಾಪಟ್ಟಿಯ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಇದರರ್ಥ ಲೀಗ್ ಹಂತದಲ್ಲಿ ಉಭಯ ತಂಡಗಳ ನಡುವೆ ಒಂದು ಪಂದ್ಯ ನಡೆಯಲಿದೆ. ಆ ಬಳಿಕ ಈ ಎರಡೂ ತಂಡಗಳು ಸೂಪರ್ ಫೋರ್ ಸುತ್ತಿಗೆ ಎಂಟ್ರಿಕೊಟ್ಟರೆ ಅಲ್ಲೂ ಸಹ ಎದುರುಬದುರಾಗಲಿವೆ. ಆ ಬಳಿಕ ಫೈನಲ್ಗೇರಿದರೆ, ಅಲ್ಲಿ ಪ್ರಶಸ್ತಿಗಾಗಿಯೇ ಸೆಣಸಾಡಲಿವೆ. ಅಂದರೆ ಈ ಟೂರ್ನಿಯಲ್ಲಿ ಭಾರತ- ಪಾಕ್ ನಡುವೆ ಮೂರು ಪಂದ್ಯಗಳು ನಡೆಯುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ