ಪಾಕ್ ಪಲ್ಟಿ… ಟೀಮ್ ಇಂಡಿಯಾ ‘ಚಿನ್ನದ’ ಚಾಂಪಿಯನ್ಸ್​

ಏಷ್ಯನ್ ಗೇಮ್ಸ್​ ಟಿ20 ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. 10 ತಂಡಗಳು ಕಣಕ್ಕಿಳಿದಿದ್ದ ಈ ಟೂರ್ನಿಯ ಫೈನಲ್​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಿತ್ತು. ಫೈನಲ್​ನಲ್ಲಿ ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ಟೀಮ್ ಇಂಡಿಯಾ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಇನ್ನು ಪಾಕ್ ತಂಡ ಬೆಳ್ಳಿ ಪದಕ ಪಡೆದರೆ, ಶ್ರೀಲಂಕಾ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದೆ.

ಪಾಕ್ ಪಲ್ಟಿ... ಟೀಮ್ ಇಂಡಿಯಾ ಚಿನ್ನದ ಚಾಂಪಿಯನ್ಸ್​
Team India
Image Credit source: BCCI

Updated on: Oct 03, 2026 | 1:40 PM

ಏಷ್ಯನ್ ಗೇಮ್ಸ್​ನ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಚಿನ್ನದ ಪದಕ ಪಡೆದುಕೊಂಡರೆ, ಸೋತ ಪಾಕಿಸ್ತಾನ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಜಪಾನ್​ನ ನಿಶ್ಶಿನ್‌ನಲ್ಲಿರುವ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿಯು ಮೊದಲ ವಿಕೆಟ್​ಗೆ 2 ಓವರ್​ಗಳಲ್ಲಿ 28 ರನ್ ಕಲೆಹಾಕಿತು. ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ವೈಭವ್ (15) ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು.

ಆ ಬಳಿಕ ಬಂದ ಸಂಜು ಸ್ಯಾಮ್ಸನ್ ಕೇವಲ 2 ರನ್​ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ಅಭಿಷೇಕ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಅದರಲ್ಲೂ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದ ಅಭಿಷೇಕ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್​ಗಳನ್ನು ಬಾರಿಸಿ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಅರ್ಧಶತಕದ ಬಳಿಕ ಕೂಡ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 3 ಫೋರ್​ಗಳೊಂದಿಗೆ 61 ರನ್ ಬಾರಿಸಿ ಔಟಾದರು. ಇದರ ಬೆನ್ನಲ್ಲೇ ಇಶಾನ್ ಕಿಶನ್ (20) ಹಾಗೂ ಶ್ರೇಯಸ್ ಅಯ್ಯರ್ (21) ಕೂಡ ವಿಕೆಟ್ ಕೈಚೆಲ್ಲಿದರು. ಪರಿಣಾಮ ಟೀಮ್ ಇಂಡಿಯಾ 150 ರನ್​ ಪೂರೈಸಲು 16.4 ಓವರ್​ಗಳನ್ನು ತೆಗೆದುಕೊಂಡಿತು.

ಇನ್ನು ಅಂತಿಮ ಓವರ್​ಗಳ ವೇಳೆ ಅಬ್ಬರಿಸಿದ ತಿಲಕ್ ವರ್ಮಾ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಹಾಫ್ ಸೆಂಚುರಿ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 211 ರನ್​ ಕಲೆಹಾಕಿತು.

212 ರನ್​ಗಳ ಕಠಿಣ ಗುರಿ:

20 ಓವರ್​ಗಳಲ್ಲಿ 212 ರನ್​ಗಳ ಗುರಿ ಪಡೆದ ಪಾಕಿಸ್ತಾನ್ ತಂಡಕ್ಕೆ ಮಾಝ್ ಸದಾಕತ್ ಹಾಗೂ ಸಾಹಿಬ್​ಝಾದ ಫರ್ಹಾನ್ ಉತ್ತಮ ಆರಂಭ ಒದಗಿಸಿದ್ದರು. ಅದರಂತೆ 3.3 ಓವರ್​ಗಳಲ್ಲಿ 33 ರನ್​ ಕಲೆಹಾಕಿದ್ದರು. ಈ ಹಂತದಲ್ಲಿ ದಾಳಿಗಿಳಿದ ವಾಷಿಂಗ್ಟನ್ ಸುಂದರ್, ಸಾಹಿಬ್​ಝಾದ ಫರ್ಹಾನ್ (10) ವಿಕೆಟ್ ಕಬಳಿಸಿ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಉಸ್ಮಾನ್ ಖಾನ್ (3) ವಿಕೆಟ್ ಪಡೆಯುವಲ್ಲಿ ಅಕ್ಷರ್ ಪಟೇಲ್ ಯಶಸ್ವಿಯಾದರು.

ಇದರ ಬೆನ್ನಲ್ಲೇ ಮಾಝ್ ಸದಾಕತ್ (24) ವಾಷಿಂಗ್ಟನ್ ಸುಂದರ್ ಹಿಡಿದ ಅತ್ಯುತ್ತಮ ಕ್ಯಾಚ್​ಗೆ ಬಲಿಯಾದರು. ಈ ಹಂತದಲ್ಲಿ ಕಣಕ್ಕಿಳಿದ ಹಸನ್ ನವಾಝ್ ಸ್ಫೋಟಕ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದರು. ಈ ಮೂಲಕ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.

ಇದಾಗ್ಯೂ ಪಾಕಿಸ್ತಾನ್ ತಂಡಕ್ಕೆ ಕೊನೆಯ 6 ಓವರ್​ಗಳಲ್ಲಿ 86 ರನ್​ಗಳು ಬೇಕಿದ್ದವು. ಈ ಹಂತದಲ್ಲೂ ಏಕಾಂಗಿ ಹೋರಾಟ ಮುಂದುವರೆಸಿದ ಹಸನ್ ನವಾಝ್ 51 ಎಸೆತಗಳಲ್ಲಿ 96 ರನ್ ಬಾರಿಸಿದರು. ಆದರೆ ಕೊನೆಯ ಓವರ್​ನಲ್ಲಿ 33 ರನ್​ಗಳ ಗುರಿ ಪಡೆದ ಪಾಕಿಸ್ತಾನ್ ತಂಡವು ಕೇವಲ 13 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 19 ರನ್​ಗಳ ಭರ್ಜರಿ ಜಯ ಸಾಧಿಸಿ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ.

  • ಭಾರತ– 211/6 (20)

  • ಪಾಕಿಸ್ತಾನ್–  192/6 (20)

ಭಾರತ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಜಸ್​ಪ್ರೀತ್ ಬುಮ್ರಾ.

ಇದನ್ನೂ ಓದಿ: ಕೆನಡಾ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ

ಪಾಕಿಸ್ತಾನ್ (ಪ್ಲೇಯಿಂಗ್ XI): ಸಾಹಿಬ್​ಝಾದ ಫರ್ಹಾನ್ (ನಾಯಕ), ಮಾಝ್ ಸದಾಕತ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಸೈಮ್ ಅಯ್ಯೂಬ್, ಹಸನ್ ನವಾಝ್, ಅಬ್ದುಲ್ ಸಮದ್, ಅರಾಫತ್ ಮಿನ್ಹಾಸ್, ಅಹ್ಮದ್ ದಾನಿಯಾಲ್, ಸಾದ್ ಮಸೂದ್, ಅಬ್ರಾರ್ ಅಹ್ಮದ್, ಸುಫ್ಯಾನ್ ಮುಖೀಮ್.

Published On - 1:31 pm, Sat, 3 October 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us