
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಕೊರೋಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 19 ರನ್ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 212 ರನ್ಗಳ ಬೃಹತ್ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 192 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದು ಪಂದ್ಯದ ಸಾರಾಂಶವಾದರೆ, ಇದೇ ಪಂದ್ಯದಲ್ಲಿ ಪಾಕಿಸ್ತಾನ್ ಆಟಗಾರ ಸೈಮ್ ಅಯೂಬ್, ವೈಭವ್ ಸೂರ್ಯವಂಶಿಯನ್ನು ಅಣಕಿಸಿದ ಘಟನೆಯೂ ನಡೆಯಿತು. ಇದೀಗ ಆ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಎದುರಿಸಿದ 9 ಎಸೆತಗಳಲ್ಲಿ 2 ಸಿಕ್ಸರ್ಗಳ ಸಹಾಯದಿಂದ 15 ರನ್ ಗಳಿಸಲಷ್ಟೇ ಶಕ್ತರಾದರು. ಪಾಕ್ ಆಲ್ರೌಂಡರ್ ಸೈಮ್ ಅಯೂಬ್ ಎಸೆದ ಮೂರನೇ ಓವರ್ನ ಮೊದಲ ಎಸೆತವನ್ನು ವೈಭವ್ ರಿವರ್ಸ್ ಸ್ವೀಪ್ ಶಾಟ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಅವರ ಗ್ಲೌಸ್ಗೆ ತಗುಲಿ ವಿಕೆಟ್ ಕೀಪರ್ ಉಸ್ಮಾನ್ ಖಾನ್ ಅವರ ಕೈಗೆ ಹೋಯಿತು. ಇತ್ತ ವೈಭವ್ ವಿಕೆಟ್ ಪಡೆದ ಸೈಮ್ ಅಯೂಬ್ ತಮ್ಮ ಕೈಗಳಿಂದ ಮಗುವನ್ನು ತೂಗುವ ಸನ್ನೆಯನ್ನು ಮಾಡಿ ಸಂಭ್ರಮಿಸಿದರು. ಅಂದರೆ ವೈಭವ್ ನೀನಿನ್ನೂ ಮಗು ನನ್ನ ಮುಂದೆ ನಿನ್ನ ಆಟ ನಡೆಯಲ್ಲ ಎಂಬರ್ಥದಲ್ಲಿ ವೈಭವ್ನ ಅಣಕಿಸಿದರು. ಇದೀಗ ಅದರ ವಿಡಿಯೋ ವೈರಲ್ ಆಗುತ್ತಿದ್ದು, ಸೈಮ್ ಅಯೂಬ್ ಮುಂದಿನ ಬಾರಿ ನೀನು ವೈಭವ್ ಎದುರು ಬೌಲ್ ಮಾಡಲು ಬರಬೇಡ. ಬಂದರೆ ನಿನಗೆ ವೈಭವ್ನಿಂದ ಸರಿಯಾದ ಉತ್ತರ ಸಿಗಲಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ವೈಭವ್ ಕಾಲೆಳೆದ ಸೈಮ್ ಅಯೂಬ್ಗೆ ಅದೇ ಓವರ್ನಲ್ಲಿ ಅಭಿಷೇಕ್ ಶರ್ಮಾ ಸರಿಯಾದ ಪಾಠ ಕಲಿಸಿದರು. ಆ ಓವರ್ನ ಮುಂದಿನ ಮೂರು ಎಸೆತಗಳನ್ನು ಬೌಂಡರಿಗಟ್ಟುವ ಮೂಲಕ ಅಭಿಷೇಕ್, ಸೈಮ್ ಅಯೂಬ್ ಬಾಯಿ ಮುಚ್ಚಿಸಿದರು. ಈ ಬೌಂಡರಿಗಳ ಸಹಾಯದಿಂದ ಅಭಿಷೇಕ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಸೈಮ್ ಅಯೂಬ್ ಕಳಪೆ ಬೌಲಿಂಗ್ ಮಾಡಿದ್ದಲ್ಲದೆ ಕಳಪೆ ಫೀಲ್ಡಿಂಗ್ ಕೂಡ ಮಾಡಿದರು. ಸೈಮ್ ಅಯೂಬ್, ಅಭಿಷೇಕ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರ ಕ್ಯಾಚ್ಗಳನ್ನು ಕೈಚೆಲ್ಲಿದರು. ಇದು ಪಾಕ್ ತಂಡಕ್ಕೆ ದುಬಾರಿಯಾಯಿತು.
ಭಾರತದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 211 ರನ್ ಗಳಿಸಿತು. ತಂಡದ ಪರ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 61 ರನ್ ಬಾರಿಸಿದರೆ, ತಿಲಕ್ ವರ್ಮಾ 22 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದರು. ವೈಭವ್ ಸೂರ್ಯವಂಶಿ 9 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿದರೆ, ಕೊನೆಯಲ್ಲಿ, ಶಿವಂ ದುಬೆ 15 ಎಸೆತಗಳಲ್ಲಿ 27 ರನ್ ಗಳಿಸಿ ತಂಡವನ್ನು 200 ರನ್ಗಳ ಗಡಿ ದಾಟಿಸಲು ಸಹಾಯ ಮಾಡಿದರು.
ಈ ಗುರಿ ಬೆನ್ನಟ್ಟಿದ ಪಾಕ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಶಹಿಬಜಾದಾ ಫರ್ಹಾನ್ 11 ಎಸೆತಗಳಲ್ಲಿ 10 ರನ್ಗಳಿಗೆ ಔಟಾದರೆ, ಉಸ್ಮಾನ್ ಖಾನ್ ಕೂಡ ಕೇವಲ 3 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಮುವಾಜ್ ಸದಾಕತ್ 18 ಎಸೆತಗಳಲ್ಲಿ 23 ರನ್ ಗಳಿಸಿದರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಹಸನ್ ನವಾಜ್ 96 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೂ ಶಿವಂ ದುಬೆ ತಲಾ ಎರಡು ವಿಕೆಟ್ ಪಡೆದರು.
Published On - 3:30 pm, Sat, 3 October 26