ಪಾಕಿಸ್ತಾನ್ ತಂಡದ ಸ್ಟಾರ್ ಆಟಗಾರ ಆಸಿಫ್ ಅಲಿ (Asif Ali) ನಾನಾ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡಿದ್ದ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ದುರ್ವತನೆ ತೋರುವ ಮೂಲಕ ಆಸಿಫ್ ಅಲಿ ಭಾರೀ ಟೀಕೆಗೆ ಗುರಿಯಾಗಿದ್ದರು. ಸೂಪರ್-4 ಹಂತದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಮುಖಾಮುಖಿಯಲ್ಲಿ ಅಫ್ಘಾನ್ ವೇಗಿ ಫರೀದ್ ಎಸೆತದಲ್ಲಿ ಆಸಿಫ್ ಔಟಾಗಿದ್ದರು. ಅಲ್ಲದೆ ಔಟಾಗಿ ಹಿಂತಿರುಗುವ ವೇಳೆ ಬೌಲರ್ ಜೊತೆ ವಾಗ್ವದಕ್ಕಿಳಿದ ಆಸಿಫ್ ಬೌಲರ್ಗೆ ಬ್ಯಾಟ್ನಿಂದ ಹೊಡೆಯಲು ಮುಂದಾಗಿದ್ದರು. ಇದೇ ವೇಳೆ ಇತರೆ ಆಟಗಾರರು ಮತ್ತು ಅಂಪೈರ್ ಮಧ್ಯೆ ಪ್ರವೇಶಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಮೈದಾನದಲ್ಲಿನ ಈ ದುರ್ವತನೆಗಾಗಿ ಐಸಿಸಿ ಇಬ್ಬರು ಆಟಗಾರರಿಗೆ ಪಂದ್ಯ ಶೇ.40 ರಷ್ಟು ದಂಡ ವಿಧಿಸಿತ್ತು.
ಇದಾದ ಬಳಿಕ ಏಷ್ಯಾಕಪ್ ಫೈನಲ್ ಪ್ರವೇಶಿಸಿದ್ದ ಪಾಕಿಸ್ತಾನ್ ತಂಡವು ಶ್ರೀಲಂಕಾ ವಿರುದ್ಧ 23 ರನ್ಗಳಿಂದ ಸೋಲನುಭವಿಸಿತು. ಇದೀಗ ಸೋಲಿನ ಬಳಿಕ ಪಾಕ್ ತಂಡವು ತವರಿಗೆ ಮರಳಿದೆ. ಇತ್ತ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಪಾಕ್ ಆಟಗಾರರೊಂದಿಗೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದರು.
ಇದೇ ವೇಳೆ ಆಸಿಫ್ ಅಲಿ ಆಗಮಿಸುತ್ತಿದ್ದಂತೆ ಕೆಲ ಅಭಿಮಾನಿಗಳು ಕೂಡ ಮುತ್ತಿಕ್ಕಿದ್ದಾರೆ. ಕೆಲ ಅಭಿಮಾನಿಗಳ ಸೆಲ್ಫಿಗೆ ಪೋಸ್ ನೀಡಿದ ಆಸಿಫ್ ಅಲಿ, ಕ್ಷಣಾರ್ಧದಲ್ಲೇ ಕೋಪಗೊಂಡರು. ಈ ಕೋಪಕ್ಕೆ ಕಾರಣ, ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಆಸಿಫ್ ಅಲಿ ಅವರ ಕೈ ಹಿಡಿದಿರುವುದು. ಇದರಿಂದ ಸಿಟ್ಟಿಗೊಂಡ ಪಾಕ್ ಆಟಗಾರ ಅಭಿಮಾನಿಯತ್ತ ಕೈ ಬೀಸಿ ಬೈದು ಮುಂದೆ ಸಾಗಿದ್ದಾರೆ.
ಇದೀಗ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಆಸಿಫ್ ಅಲಿ ಅವರ ನಡೆಯ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ.