ENG vs AUS: ಇಂಗ್ಲೆಂಡ್​ನ ಬಗ್ಗು ಬಡಿದ ಆಸೀಸ್ ಪಡೆ

|

Updated on: Sep 12, 2024 | 8:21 AM

Australia vs England: 180 ರನ್​ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ವಿಲ್ ಜಾಕ್ಸ್ ಕೇವಲ 6 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಚೊಚ್ಚಲ ಪಂದ್ಯವಾಡಿದ ಜೋರ್ಡನ್ ಕಾಕ್ಸ್ ಅವರ ಇನಿಂಗ್ಸ್ 17 ರನ್​ಗಳಿಗೆ ಸೀಮಿತವಾಗಿತ್ತು. ಹಾಗೆಯೇ ನಾಯಕ ಫಿಲ್ ಸಾಲ್ಟ್ 20 ರನ್​ಗಳೊಂದಿಗೆ ಪೆವಿಲಿಯನ್​ಗೆ ಮರಳಿದ್ದರು.

ENG vs AUS: ಇಂಗ್ಲೆಂಡ್​ನ ಬಗ್ಗು ಬಡಿದ ಆಸೀಸ್ ಪಡೆ
ENG vs AUS
Follow us on

ಸೌಥಾಂಪ್ಟನ್​ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆದ ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಫಿಲ್ ಸಾಲ್ಟ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಮ್ಯಾಥ್ಯೂ ಶಾರ್ಟ್ ಹಾಗೂ ಟ್ರಾವಿಸ್ ಹೆಡ್ ಸ್ಪೋಟಕ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್​ಗೆ 86 ರನ್ ಪೇರಿಸಿದ ಬಳಿಕ ಪವರ್​ಪ್ಲೇನ ಕೊನೆಯ ಎಸೆತದಲ್ಲಿ ಟ್ರಾವಿಸ್ ಹೆಡ್ ಔಟಾದರು. ಔಟಾಗುವ ಮುನ್ನ ಹೆಡ್ ಕೇವಲ 23 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 53 ರನ್​ ಚಚ್ಚಿದ್ದರು. ಆ ಬಳಿಕ ಬಂದ ನಾಯಕ ಮಿಚೆಲ್ ಮಾರ್ಷ್ ಕೇವಲ 2 ರನ್ ಗಳಿಸಿ ನಿರ್ಗಮಿಸಿದರೆ, ಇದರ ಬೆನ್ನಲ್ಲೇ ಮ್ಯಾಥ್ಯೂ ಶಾರ್ಟ್ (41) ಕೂಡ ವಿಕೆಟ್ ಒಪ್ಪಿಸಿದರು.

ಆದರೆ ಅದಾಗಲೇ 10.2 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 118 ರನ್ ಪೇರಿಸಿ ಸುಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ ತಂಡವು ದಿಢೀರ್ ಕುಸಿತಕ್ಕೊಳಗಾಯಿತು. ಪರಿಣಾಮ 17ನೇ ಓವರ್​ ವೇಳೆಗೆ ಆಸೀಸ್ ಪಡೆಯು 6 ವಿಕೆಟ್ ಕಳೆದುಕೊಂಡಿತು. ಇದರ ನಡುವೆ ಜೋಶ್ ಇಂಗ್ಲಿಸ್ 37 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 19.3 ಓವರ್​ಗಳಲ್ಲಿ 179 ರನ್ ಕಲೆಹಾಕಿ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಲಿಯಾಮ್ ಲಿವಿಂಗ್​ಸ್ಟೋನ್ 3 ವಿಕೆಟ್ ಕಬಳಿಸಿದರೆ, ಜೋಫ್ರಾ ಆರ್ಚರ್ ಹಾಗೂ ಸಾಕಿಬ್ ಮಹಮೂದ್ ತಲಾ 2 ವಿಕೆಟ್ ಪಡೆದರು.

180 ರನ್​ಗಳ ಗುರಿ:

180 ರನ್​ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ವಿಲ್ ಜಾಕ್ಸ್ ಕೇವಲ 6 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಚೊಚ್ಚಲ ಪಂದ್ಯವಾಡಿದ ಜೋರ್ಡನ್ ಕಾಕ್ಸ್ ಅವರ ಇನಿಂಗ್ಸ್ 17 ರನ್​ಗಳಿಗೆ ಸೀಮಿತವಾಗಿತ್ತು. ಹಾಗೆಯೇ ನಾಯಕ ಫಿಲ್ ಸಾಲ್ಟ್ 20 ರನ್​ಗಳೊಂದಿಗೆ ಪೆವಿಲಿಯನ್​ಗೆ ಮರಳಿದ್ದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್​ಸ್ಟೋನ್ (37) ಒಂದಷ್ಟು ಹೊತ್ತು ಅಬ್ಬರಿಸಿದರೂ, ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ 19.2 ಓವರ್​ಗಳಲ್ಲಿ 151 ರನ್​ಗಳಿಸಿ ಇಂಗ್ಲೆಂಡ್ ತಂಡವು ಆಲೌಟ್ ಆಗಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡವು ಮೊದಲ ಪಂದ್ಯದಲ್ಲಿ 28 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇನ್ನು ಆಸೀಸ್ ಪಡೆ ಶಾನ್ ಅಬಾಟ್ 3 ವಿಕೆಟ್ ಕಬಳಿಸಿ ಮಿಂಚಿದರೆ, ಆ್ಯಡಂ ಝಂಪಾ ಹಾಗೂ ಜೋಶ್ ಹ್ಯಾಝಲ್​ವುಡ್ ತಲಾ 2 ವಿಕೆಟ್ ಪಡೆದರು.

ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ (ನಾಯಕ) , ವಿಲ್ ಜ್ಯಾಕ್ಸ್ , ಜೋರ್ಡನ್ ಕಾಕ್ಸ್ , ಲಿಯಾಮ್ ಲಿವಿಂಗ್​ಸ್ಟೋನ್ , ಜೆಕೋಬ್ ಬೆಥೆಲ್ , ಸ್ಯಾಮ್ ಕರನ್ , ಜೇಮೀ ಓವರ್ಟನ್ , ಜೋಫ್ರಾ ಆರ್ಚರ್ , ಆದಿಲ್ ರಶೀದ್ , ಸಾಕಿಬ್ ಮಹಮೂದ್ , ರೀಸ್ ಟೋಪ್ಲಿ.

ಇದನ್ನೂ ಓದಿ: CSK ಪರ ಆಡಬೇಕು… RCB ಆಟಗಾರನ ಹೇಳಿಕೆ..!

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಮ್ಯಾಥ್ಯೂ ಶಾರ್ಟ್ , ಮಿಚೆಲ್ ಮಾರ್ಷ್ (ನಾಯಕ) , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಮಾರ್ಕಸ್ ಸ್ಟೊಯಿನಿಸ್ , ಟಿಮ್ ಡೇವಿಡ್ , ಕ್ಯಾಮೆರೋನ್ ಗ್ರೀನ್ , ಶಾನ್ ಅಬಾಟ್ , ಕ್ಸೇವಿಯರ್ ಬಾರ್ಟ್ಲೆಟ್ , ಆ್ಯಡಂ ಝಂಪಾ , ಜೋಶ್ ಹ್ಯಾಝಲ್​ವುಡ್.