ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್ 18ರ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಮೆಗಾ ಹರಾಜಿಗಾಗಿ ರೂಪುರೇಷೆಗಳನ್ನು ರೂಪಿಸಲಾಗಿದೆ. ಅದರಂತೆ ಮುಂದಿನ ಸೀಸನ್ಗೂ ಮುನ್ನ ಪ್ರತಿ ತಂಡಗಳಿಂದ ಬಹುತೇಕ ಆಟಗಾರರು ಹೊರಬೀಳಲಿದ್ದಾರೆ. ಅಂದರೆ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ 4 ರಿಂದ 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಬಹುತೇಕ ಆಟಗಾರರು ರಿಲೀಸ್ ಆಗುವುದು ಖಚಿತ. ಅದರಲ್ಲೂ 2022 ರಿಂದ ಆರ್ಸಿಬಿ ತಂಡದಲ್ಲಿರುವ ವಿಕೆಟ್ ಕೀಪರ್ ಬ್ಯಾಟರ್ ಅನೂಜ್ ರಾವತ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ. ಏಕೆಂದರೆ ಕಳೆದ ಮೂರು ಸೀಸನ್ಗಳಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿರುವ ರಾವತ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ಈ ಬಾರಿ ಅನೂಜ್ ರಾವತ್ ರಾಯಲ್ ಬಳಗದಿಂದ ಹೊರಬೀಳುವುದು ಬಹುತೇಕ ಖಚಿತ.
ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಿಟೈನ್ ಮಾಡಿಕೊಳ್ಳದಿದ್ದರೆ ಮುಂದೇನು ಎಂಬ ಪ್ರಶ್ನೆಯೊಂದನ್ನು ಸ್ಪೋರ್ಟ್ಸ್ ಯಾರಿ ಚಾನೆಲ್ ಅನೂಜ್ ರಾವತ್ ಅವರ ಮುಂದಿಟ್ಟಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಆರ್ಸಿಬಿ ಬ್ಯಾಟರ್, ನನಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಬೇಕೆಂಬ ಆಸೆಯಿದೆ ಎಂದು ತಿಳಿಸಿದ್ದಾರೆ.
ಆರ್ಸಿಬಿ ಇಲ್ಲದಿದ್ದರೆ, ನಾನು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಬಯಸುತ್ತೇನೆ. ಏಕೆಂದರೆ ಸಿಎಸ್ಕೆ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ಅವರು ವಿಭಿನ್ನ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅಲ್ಲದೆ ಎಲ್ಲಾ ಆಟಗಾರರು ಅವರ ಬಗ್ಗೆ ಮಾತನಾಡುತ್ತಿರುತ್ತಾರೆ. ಹೀಗಾಗಿ ನನಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಬೇಕೆಂಬ ಆಸೆಯಿದೆ ಎಂದು ಅನೂಜ್ ರಾವತ್ ಹೇಳಿದ್ದಾರೆ. ಈ ಮೂಲಕ ಸಿಎಸ್ಕೆ ಪರ ಕಣಕ್ಕಿಳಿಯಬೇಕೆಂಬ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, 2022 ರಲ್ಲಿ ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಅನೂಜ್ ರಾವತ್ ಒಟ್ಟು 22 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 1 ಅರ್ಧಶತಕದೊಂದಿಗೆ ಒಟ್ಟು 318 ರನ್ ಕಲೆಹಾಕಿದ್ದಾರೆ. ಅಂದರೆ ಅವರು ಆರ್ಸಿಬಿ ಪರ ಕೇವಲ 19.88ರ ಸರಾಸರಿಯಲ್ಲಿ ಮಾತ್ರ ರನ್ ಗಳಿಸಿದ್ದಾರೆ. ಹೀಗಾಗಿಯೇ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ತಂಡದಿಂದ ಅನೂಜ್ ರಾವತ್ಗೆ ಗೇಟ್ ಪಾಸ್ ಸಿಗಲಿದೆ ಎನ್ನಬಹುದು.
Published On - 9:21 am, Tue, 10 September 24