ಐಸಿಸಿ ಏಕದಿನ ವಿಶ್ವಕಪ್ (ICC ODI World Cup) 13ನೇ ಆವೃತ್ತಿಯಲ್ಲಿ ಇಂದು ಮಹತ್ವದ ಪಂದ್ಯ ನಡೆಯುತ್ತಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ಮುಖಾಮುಖಿ ಆಗುತ್ತಿದೆ. ಈಗಾಗಲೇ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಉಭಯ ತಂಡಗಳಿಗೂ ಇದು ಮೊದಲ ಪಂದ್ಯ ಆಗಿರುವುದರಿಂದ ಗೆಲುವಿನ ಮೂಲಕ ಯಾರು ಅಭಿಯಾನ ಆರಂಭಿಸುತ್ತಾರೆ ಎಂಬುದು ನೋಡಬೇಕಿದೆ.
ಭಾರತ ತಂಡದ ಸ್ಟಾರ್ ಓಪನರ್ ಶುಭ್ಮನ್ ಗಿಲ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಇಂದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ಇವರ ಅಲಭ್ಯತೆಯಲ್ಲಿ ಭಾರತ ಕಣಕ್ಕಿಳಿಯುತ್ತಿದೆ. ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್ ಆರಂಭಿಕರಾಗಿ ಆಡಲಿದ್ದಾರೆ. ಇನ್ಫಾರ್ಮ್ ಬ್ಯಾಟರ್ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದರೆ, ನಾಲ್ಕನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳಲಿದ್ದಾರೆ. ವಿಕೆಟ್ ಕೀಪರ್ ಜವಾಬ್ದಾರಿ ಕೆಎಲ್ ರಾಹುಲ್ ಹೊರಲಿದ್ದಾರೆ.
SA vs SL ICC World Cup 2023: ಶ್ರೀಲಂಕಾ ವಿರುದ್ಧ ಸೌತ್ ಆಫ್ರಿಕಾಗೆ ಭರ್ಜರಿ ಜಯ
ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಇದ್ದು, ರವಿಚಂದ್ರನ್ ಅಶ್ವಿನ್ ಕೂಡ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ ಭಾರತ ಒಟ್ಟು ಮೂವರು ಸ್ಪಿನ್ನರ್ಗಳನ್ನು ಆಡಿಸುತ್ತಿದೆ. ಎಂಎ ಚಿದಂಬರಂ ಕ್ರೀಡಾಂಗಣದ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗುತ್ತದೆ. ಇಲ್ಲಿನ ಮೇಲ್ಮೈ ನಿಧಾನಗತಿಯ ಬೌಲರ್‌ಗಳಿಗೆ ಹೆಚ್ಚು ಸಹಕಾರಿ ಆಗಿದೆ. ಆದ್ದರಿಂದ ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಅಶ್ವಿನ್ ಅವರನ್ನು ಇಂದಿನ ಪಂದ್ಯದಲ್ಲಿ ಭಾರತ ಆಡಿಸುತ್ತಿದೆ.
ರವಿಚಂದ್ರನ್ ಅಶ್ವಿನ್ ಈ ವಿಶ್ವಕಪ್ನಲ್ಲಿ ಭಾರತ ಪರ ಮಹತ್ವದ ಪಾತ್ರವಹಿಸಲಿದ್ದಾರೆ. ಅಕ್ಷರ್ ಪಟೇಲ್ ಬದಲು ಸ್ಥಾನ ಪಡೆದುಕೊಂಡಿರುವ ಇವರು 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮೂಲಕವೂ ಕೊಡುಗೆ ನೀಡಲಿದ್ದಾರೆ. ಕಳೆದ ಕೆಲವು ವಾರಗಳಿಂದ ಅಶ್ವಿನ್ ಬೌಲಿಂಗ್ ಜೊತೆಗೆ ಸತತವಾಗಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಕೂಡ ಮಾಡುತ್ತಿದ್ದಾರೆ. ವೇಗಿಗಳಾಗಿ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಕಾಣಿಸಿಕೊಂಡಿದ್ದಾರೆ.
ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ, ಜೋಶ್ ಹ್ಯಾಜಲ್‌ವುಡ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Sun, 8 October 23