AUS vs BAN: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ

Australia vs Bangladesh T20: ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶ ವಿರುದ್ಧದ T20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ. ಮೂರನೇ ಪಂದ್ಯದಲ್ಲಿ ಬಾಂಗ್ಲಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೆ, ಮಿಚೆಲ್ ಮಾರ್ಷ್ (60 ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿತು.

AUS vs BAN: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ
Aus Vs Ban

Updated on: Jun 21, 2026 | 6:59 PM

ಏಕದಿನ ಹಾಗೂ ಟಿ20 ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿದ್ದ ಆಸ್ಟ್ರೇಲಿಯಾ ತಂಡ (Australia vs Bangladesh), ಮೊದಲು ನಡೆದ ಏಕದಿನ ಸರಣಿಯನ್ನು ಹೀನಾಯವಾಗಿ ಸೋತಿತ್ತು. ಹೀಗಾಗಿ ಟಿ20 ಸರಣಿಯನ್ನು ಗೆದ್ದು ಏಕದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದ್ದ ಆಸ್ಟ್ರೇಲಿಯಾ ತಂಡ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ. ಚಟ್ಟೋಗ್ರಾಮ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು 7 ವಿಕೆಟ್​ಗಳಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಸರಣಿಯನ್ನು ವೈಟ್ ವಾಶ್ ಮಾಡಿತು.

ಬಾಂಗ್ಲಾ ತಂಡದ ಬ್ಯಾಟಿಂಗ್‌ ವೈಫಲ್ಯ

ಈ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ ಕೇವಲ 109 ರನ್‌ಗಳಿಸಲಷ್ಟೇ ಶಕ್ತವಾಯಿತು. ಆಸೀಸ್ ದಾಳಿಗೆ ಬಾಂಗ್ಲಾದೇಶದ ಅಗ್ರ ಕ್ರಮಾಂಕ ಬೇಗನೇ ಪೆವಿಲಿಯನ್ ಸೇರಿಕೊಂಡಿತು. ಆ ನಂತರ ಮಧ್ಯಮ ಕ್ರಮಾಂಕವೂ ಒತ್ತಡವನ್ನು ತಡೆದುಕೊಳ್ಳುವಲ್ಲಿ ವಿಫಲವಾಯಿತು. ಆದಾಗ್ಯೂ, ನಾಯಕ ತೌಹಿದ್ ಹೃದಯೋಯ್ ಅಜೇಯ 61 ರನ್‌ ಬಾರಿಸುವ ಮೂಲಕ ತಂಡವನ್ನು 100 ರನ್​ಗಳ ಗಡಿ ದಾಟಿಸಿದರು. ಇತ್ತ ಆಸ್ಟ್ರೇಲಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ಸ್ಪೆನ್ಸರ್ ಜಾನ್ಸನ್, ಆಡಮ್ ಜಂಪಾ ಮತ್ತು ನಾಥನ್ ಎಲ್ಲಿಸ್ ತಲಾ ಎರಡು ವಿಕೆಟ್ ಪಡೆದರೆ, ನಿಖಿಲ್ ಚೌಧರಿ ಕೂಡ ಒಂದು ವಿಕೆಟ್ ಪಡೆದರು.

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟಿಂಗ್

ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ, ಕೇವಲ 11 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 112 ರನ್ ಗಳಿಸಿ, 7 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ನಾಯಕನ ಇನ್ನಿಂಗ್ಸ್ ಆಡಿದ ಮಿಚೆಲ್ ಮಾರ್ಷ್ ಕೇವಲ 28 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡಂತೆ 60 ರನ್ ಬಾರಿಸಿದರು. ಇತ್ತ ಜೋಶ್ ಇಂಗ್ಲಿಸ್ 16 ಎಸೆತಗಳಲ್ಲಿ 17 ರನ್ ಗಳಿಸಿ ಅವರಿಗೆ ಬೆಂಬಲ ನೀಡಿದರು. ನಂತರ ಕೂಪರ್ ಕಾನೊಲಿ 13 ಎಸೆತಗಳಲ್ಲಿ 15 ರನ್ ಗಳಿಸಿದರೆ, ಕೊನೆಯಲ್ಲಿ ಟಿಮ್ ಡೇವಿಡ್ 3 ಎಸೆತಗಳಲ್ಲಿ 2 ಸಿಕ್ಸರ್‌ಗಳನ್ನು ಒಳಗೊಂಡಂತೆ 12 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಈ ಗೆಲುವಿನೊಂದಿಗೆ, ಆಸ್ಟ್ರೇಲಿಯಾ ತಂಡವು ಟಿ20 ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದ್ದು, ಮಾತ್ರವಲ್ಲದೆ, ಏಕದಿನ ಸರಣಿಯ ಸೋಲಿಗೆ ಸೇಡು ತೀರಿಸಿಕೊಂಡಿತು. ಬಾಂಗ್ಲಾದೇಶ ಏಕದಿನ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಿ ಸರಣಿಯನ್ನು 2-1 ಅಂತರದಿಂದ ಗೆದ್ದಿತ್ತಾದರೂ, ಟಿ20 ಸರಣಿಯನ್ನು ಹೀನಾಯವಾಗಿ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us