ವರ್ಷದ ಹಿಂದೆಯೇ ತನ್ನ ಗುರಿ ಬಗ್ಗೆ ಹೇಳಿದ್ದ ಶ್ರೇಯಾಂಕ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದು ದುರಾದೃಷ್ಟಕರ
Shreyanka Patil injury: ಶ್ರೇಯಾಂಕ ಪಾಟೀಲ್ ಮತ್ತೆ ಗಾಯಕ್ಕೆ ತುತ್ತಾಗಿ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಕ್ರಿಕೆಟ್ ತ್ಯಜಿಸುವ ಕುರಿತು ಮಾತನಾಡಿದ ಕೇವಲ ಎರಡು ದಿನಗಳ ನಂತರ ಈ ಆಘಾತಕಾರಿ ಸುದ್ದಿ ಬಂದಿದೆ. ಗಾಯಗಳಿಂದ ಹಿಂದೆ ಖಿನ್ನತೆ ಅನುಭವಿಸಿದ್ದ ಅವರು, ಕ್ರೀಡೆಗೆ ಮರಳಲು ದೃಢ ಸಂಕಲ್ಪ ಮಾಡಿದ್ದರು. ಪಾಕಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ, ಮತ್ತೆ ಗಾಯಗೊಂಡಿರುವುದು ಅವರ ವಿಶ್ವಕಪ್ ಕನಸನ್ನು ಕಮರಿಸಿದೆ.

2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women’s T20 World Cup 2026) ಸತತ ಎರಡು ಪಂದ್ಯಗಳನ್ನು ಗೆದ್ದು ಶುಭಾರಂಭ ಮಾಡಿದ್ದ ಭಾರತ ವನಿತಾ ಪಡೆಗೆ ತಂಡದ ಸ್ಟಾರ್ ಆಟಗಾರ್ತಿ ಶ್ರೇಯಾಂಕ ಪಾಟೀಲ್ (Shreyanka Patil) ಅವರ ಇಂಜುರಿ ಸಮಸ್ಯೆ ಬರ ಸಿಡಿಲಿನಂತೆ ಬಂದೆರಗಿದೆ. ಹೆಡಿಂಗ್ಲಿಯಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ವೇಳೆ ಶ್ರೇಯಾಂಕ ಪಾಟೀಲ್ ಪಾದದ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಅವರು ಟಿ20 ವಿಶ್ವಕಪ್‌ನಿಂದಲೇ ಹೊರಗುಳಿದಿದ್ದಾರೆ. ಅವರ ಬದಲಿಯಾಗಿ ಪ್ರೇಮಾ ರಾವತ್ ತಂಡಕ್ಕೆ ಆಯ್ಕೆಯಾಗಿದ್ದರೂ, ಶ್ರೇಯಾಂಕ ಅವರ ಸ್ಥಾನವನ್ನು ತುಂಬುವುದು ಕಷ್ಟಕರ. ಏಕೆಂದರೆ ತಂಡದ ಪ್ರಮುಖ ಸ್ಪಿನ್ನರ್ಗಳಲ್ಲಿ ಒಬ್ಬರಾಗಿದ್ದ ಶ್ರೇಯಾಂಕ ಕೆಳಕ್ರಮಾಂಕದಲ್ಲಿ ಬ್ಯಾಟ ಬಲವನ್ನು ಹೆಚ್ಚಿಸುತ್ತಿದ್ದರು. ಹೀಗಾಗಿ ಅವರ ಅಲಭ್ಯತೆ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.
ದುರಾದೃಷ್ಟಕರ ಸಂಗತಿಯೆಂದರೆ ಶ್ರೇಯಾಂಕ ಪಾಟೀಲ್ ಈ ಹಿಂದಿನ ಗಾಯಗಳಿಂದಾಗಿ ಕ್ರಿಕೆಟ್ ತೊರೆಯುವ ಬಗ್ಗೆ ಮಾತನಾಡಿ ಎರಡು ದಿನಗಳು ಕಳೆಯುವ ಮುನ್ನವೇ ಅವರು ಮತ್ತೆ ಗಾಯಕ್ಕೆ ತುತ್ತಾಗಿ ಪ್ರಮುಖ ಪಂದ್ಯಾವಳಿಯಿಂದಲೇ ಹೊರಬಿದಿದ್ದಾರೆ. ವಾಸ್ತವವಾಗಿ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದ ಶ್ರೇಯಾಂಕ, ಈ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದಿದ್ದರೂ, 3 ಓವರ್ಗಳಲ್ಲಿ ಕೇವಲ 17 ರನ್ ಬಿಟ್ಟುಕೊಟ್ಟು ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದರು.
ಶ್ರೇಯಾಂಕ ಪಾಟೀಲ್ಗೆ ಗಂಭೀರ ಗಾಯ..! ಕಣ್ಣೀರಿಡುತ್ತ ಮೈದಾನ ತೊರೆದ ಕನ್ನಡತಿ
ಕ್ರಿಕೆಟ್ ಬಿಡಲು ಚಿಂತಿಸಿದ್ದ
ಈ ಪಂದ್ಯದ ಬಳಿಕ ಜಿಯೋಸ್ಟಾರ್‌ನ ಅಡಿಡಾಸ್ ಮ್ಯಾಚ್ ಸೆಂಟರ್ ಲೈವ್ ಕಾರ್ಯಕ್ರಮದಲ್ಲಿ ಗಾಯಗಳಿಂದಾಗಿ ದೀರ್ಘಕಾಲದವರೆಗೆ ಆಟದಿಂದ ಹೊರಗುಳಿದಿದ್ದ ಬಗ್ಗೆ ಮಾತನಾಡಿದ್ದ ಶ್ರೇಯಾಂಕ ಪಾಟೀಲ್, ‘ಪದೇ ಪದೇ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದಾಗ ನಾನು ಖಿನ್ನತೆಗೆ ಒಳಗಾಗಿಲ್ಲ ಅಥವಾ ಕ್ರಿಕೆಟ್ ಅನ್ನು ತ್ಯಜಿಸುವ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದರೆ ಅದು ನಾನು ಸುಳ್ಳು ಹೇಳುತ್ತಿದ್ದೇನೆ ಎಂದಾಗುತ್ತದೆ. ಗಾಯಕ್ಕೆ ತುತ್ತಾದಾಗ ನಾನು ಆರಂಭದಲ್ಲಿ ಕ್ರಿಕೆಟ್ನಿಂದ ದೂರ ಉಳಿಯುವ ಬಗ್ಗೆ ಚಿಂತಿಸಿದ್ದೆ. ಆದರೆ ನನ್ನೊಳಗೆ ಒಂದು ಧ್ವನಿ ಇತ್ತು, ಆ ಧ್ವನಿ, ಏನೇ ಆಗಲಿ, ಇದು ನನ್ನಿಷ್ಟದ ಕ್ರೀಡೆ, ಈ ಕ್ರೀಡೆಯನ್ನು ಆಡಲು ಇಷ್ಟವಿರುವ ಕಾರಣದಿಂದಲೇ ನಾನು ಇಲ್ಲಿರುವುದು ಎಂಬುದನ್ನು ಪದೇ ಪದೇ ಹೇಳುತಿತ್ತು. ಹಾಗಾಗಿ, ನಾನು ಇಷ್ಟಪಡುವ ಕೆಲಸವನ್ನು ಬಿಟ್ಟುಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಧೃಡ ಸಂಕಲ್ಪ ಮಾಡಿದೆ. ಆ ಸಮಯದಲ್ಲಿ ನನ್ನ ತಂದೆ ಮತ್ತು ನನ್ನ ಕುಟುಂಬ ನನ್ನ ಬೆಂಬಲಕ್ಕೆ ನಿಂತಿತು. ಹೀಗಾಗಿ ನಾನು ಗಾಯಗಳಿಂದ ಚೇತರಿಸಿಕೊಂಡು ಇಲ್ಲಿದ್ದೇನೆ’ ಎಂದಿದ್ದರು.
View this post on Instagram
ವರ್ಷದ ಹಿಂದೆಯೇ ತನ್ನ ಗುರಿ ಬಗ್ಗೆ ಹೇಳಿದ್ದ ಶ್ರೇಯಾಂಕ
ಆದರೆ ಶ್ರೇಯಾಂಕ ಈ ರೀತಿಯ ಹೇಳಿಕೆ ನೀಡಿದ ಕೇವಲ ಎರಡು ದಿನಗಳ ನಂತರ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ. ಈ ಗಾಯದಿಂದಾಗಿ ಅವರು ಇಡೀ ವಿಶ್ವಕಪ್‌ನಿಂದಲೇ ಹೊರಬಿದಿದ್ದಾರೆ. ಬೇಸರದ ಸಂಗತಿಯೆಂದರೆ ಇದೇ ಶ್ರೇಯಾಂಕ ಕಳೆದ ವರ್ಷ ಲಾರ್ಡ್ಸ್ ಅಂಗಳದಲ್ಲಿ ನಿಂತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು, ‘ಬಹುಶಃ ಇಲ್ಲಿಂದ ಸರಿಯಾಗಿ ಒಂದು ವರ್ಷದ ನಂತರ ನಾನು ಇದೇ ಲಾರ್ಡ್ಸ್ ಕ್ರೀಡಾಂಗಣದ ಬಾಲ್ಕನಿಯಲ್ಲಿ ಟಿ20 ವಿಶ್ವಕಪ್ ಹಿಡಿದು ನಿಂತಿರುತ್ತೇನೆ’ ಎಂದು ಬರೆದುಕೊಂಡಿದ್ದರು. ಆದರೆ ಶ್ರೇಯಾಂಕರ ಈ ಕನಸು ಆರಂಭದಲ್ಲೇ ಕಮರಿ ಹೋಗಿದೆ. ಆದಾಗ್ಯೂ ಶ್ರೇಯಾಂಕ ತಂಡದಿಂದ ಹೊರಗುಳಿದಿದ್ದರೂ, ಭಾರತ ವನಿತಾ ಪಡೆ ಟಿ20 ವಿಶ್ವಕಪ್ ಗೆದ್ದು ಶ್ರೇಯಾಂಕರ ಕನಸನ್ನು ನನಸು ಮಾಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:49 pm, Fri, 19 June 26




