AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2026: ಪ್ಯಾರಾ-ಶಾಟ್ ಪುಟ್​ನಲ್ಲಿ ಚಿನ್ನ ಗೆದ್ದ ಸೋಮನ್, ಶುಭಮ್​ಗೆ ಬೆಳ್ಳಿ

Commonwealth Games 2026: ಕಾಮನ್‌ವೆಲ್ತ್ ಕ್ರೀಡಾಕೂಟದ 10ನೇ ದಿನ ಭಾರತ ಅಥ್ಲೆಟಿಕ್ಸ್, ಬಾಕ್ಸಿಂಗ್, ಪ್ಯಾರಾ-ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದಿದೆ. ಪ್ಯಾರಾ-ಶಾಟ್‌ಪುಟ್ F57 ನಲ್ಲಿ ಸೋಮನ್ ರಾಣಾ ಐತಿಹಾಸಿಕ ಚಿನ್ನ ಗೆದ್ದರು. ಶುಭಂ ಜುಯಾಲ್ ಬೆಳ್ಳಿ ಪಡೆದರು. ಇಬ್ಬರೂ ಭಾರತೀಯ ಸೇನೆಯ ಸೈನಿಕರು. ಸೋಮನ್ ಈ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯರಾಗಿದ್ದಾರೆ, ಅವರ ಸ್ಪೂರ್ತಿದಾಯಕ ಕಥೆ ಗಮನಾರ್ಹವಾಗಿದೆ.

CWG 2026: ಪ್ಯಾರಾ-ಶಾಟ್ ಪುಟ್​ನಲ್ಲಿ ಚಿನ್ನ ಗೆದ್ದ ಸೋಮನ್, ಶುಭಮ್​ಗೆ ಬೆಳ್ಳಿ
Soman Rana, Shubham Jayal
ಪೃಥ್ವಿಶಂಕರ
|

Updated on:Aug 01, 2026 | 7:24 PM

Share

ಕಾಮನ್‌ವೆಲ್ತ್ ಕ್ರೀಡಾಕೂಟದ (Commonwealth Games) 10ನೇ ದಿನದಂದು ಭಾರತಕ್ಕೆ ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್‌ನಲ್ಲಿ ಪದಕಗಳು ಲಭಿಸಿವೆ. ಇದರ ಜೊತೆಗೆ, ಪ್ಯಾರಾ-ಅಥ್ಲೆಟಿಕ್ಸ್‌ನಲ್ಲಿಯೂ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆಲ್ಲುವಲ್ಲಿ ಭಾರತದ ಪ್ಯಾರಾ-ಅಥ್ಲೆಟ್ಸ್​ಗಳು ಯಶಸ್ವಿಯಾಗಿದ್ದಾರೆ. ಪ್ಯಾರಾ-ಅಥ್ಲೀಟ್ ಸೋಮನ್ ರಾಣಾ ಪುರುಷರ ಪ್ಯಾರಾ-ಶಾಟ್ ಪುಟ್ F57 ( Para Shot Put F57) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರೆ, ಇನ್ನು ಇದೇ ವಿಭಾಗದಲ್ಲಿ ಮತ್ತೊಬ್ಬ ಭಾರತೀಯ ಶುಭಮ್ ಜುಯಾಲ್ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಸೋಮನ್ ರಾಣಾ 13.40 ಮೀಟರ್ ಎಸೆದು ಚಿನ್ನಕ್ಕೆ ಮುತ್ತಿಕ್ಕಿದರೆ, ಶುಭಮ್ ಜುಯಾಲ್ 13.08 ಮೀಟರ್ ಎಸೆಯುವ ಮೂಲಕ ಬೆಳ್ಳಿಗೆ ಕೊರಳೊಡ್ಡಿದರು.

ಚಿನ್ನ ಗೆದ್ದ ಮೊದಲ ಭಾರತೀಯ

ಪುರುಷರ ಪ್ಯಾರಾ-ಶಾಟ್ ಪುಟ್ F57 ಸ್ಪರ್ಧೆಯಲ್ಲಿ ಭಾರತೀಯರ ನಡುವೆಯೇ ಚಿನ್ನಕ್ಕಾಗಿ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಸೋಮನ್ ರಾಣಾ ಮತ್ತು ಶುಭಮ್ ಜುಯಾಲ್ ಚಿನ್ನದ ಪದಕ ಗೆಲ್ಲುವುದಕ್ಕಾಗಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಒಂದು ಹಂತದಲ್ಲಿ, ಶುಭಮ್ ಜುಯಾಲ್ 13.08 ಮೀಟರ್ ಎಸೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರು. ಆದರೆ ಅನುಭವಿ ಪ್ಯಾರಾ-ಅಥ್ಲೀಟ್ ಸೋಮನ್ 13.40 ಮೀಟರ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು. ಈ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ನೆಲಬಾಂಬ್ ಸ್ಫೋಟದಿಂದ ಅಂಗವೈಕಲ್ಯ

ದೇಶಕ್ಕೆ ಚಿನ್ನದ ಪದಕದ ಕಿರೀಟ ತೊಡಿಸಿದ ಸೋಮನ್ ರಾಣಾ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿದ್ದು, ಸುಮಾರು ಒಂದೂವರೆ ದಶಕಗಳಿಂದ ಪ್ಯಾರಾ-ಅಥ್ಲೆಟಿಕ್ಸ್‌ನಲ್ಲಿ ಸಕ್ರಿಯರಾಗಿದ್ದಾರೆ. ಪ್ಯಾರಾ-ಶಾಟ್‌ಪುಟ್‌ಗೆ ತಮ್ಮ ಆಟವನ್ನು ಬದಲಾಯಿಸುವ ಮೊದಲು, ಅವರು ಬಾಕ್ಸಿಂಗ್‌ನಲ್ಲಿ ಸಕ್ರಿಯರಾಗಿದ್ದರು. 2005 ರವರೆಗೆ ಬಾಕ್ಸಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಬಿಹಾರದ ಸೋಮನ್, 2005 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗಸ್ತು ತಿರುಗುತ್ತಿದ್ದಾಗ, ಅವರು ನೆಲಬಾಂಬ್ ಸ್ಫೋಟಕ್ಕೆ ತುತ್ತಾಗಿ ಒಂದು ಕಾಲು ಕಳೆದುಕೊಂಡರು.

ಇದು ಅವರ ಇಡೀ ಜೀವನವನ್ನು ಬದಲಾಯಿಸಿತು. ಅವರು ಒಂದು ಕಾಲನ್ನು ಕಳೆದುಕೊಂಡ ಕಾರಣದಿಂದಾಗಿ ತಮ್ಮ ಆಟವನ್ನು ಬದಲಾಯಿಸಬೇಕಾಯಿತು. ಆದರೆ ಎಂದು ಛಲ ಬಿಡದ ಸೋಮನ್ ಪ್ಯಾರಾ-ಶಾಟ್‌ಪುಟ್‌ಗೆ ತಮ್ಮ ಆಟವನ್ನು ಬದಲಾಯಿಸುವ ಮೂಲಕ 2022 ರಲ್ಲಿ ನಡೆದ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ನಂತರ 2025 ರಲ್ಲಿ ಪ್ಯಾರಾ-ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು.

CWG 2026: ಟ್ರಿಪಲ್ ಜಂಪ್​ನಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದ ಚಿತ್ರಾವೆಲ್, ಸೆಲ್ವ ಪ್ರಭು

ಬೆಳ್ಳಿ ಗೆದ್ದ ಶುಭಮ್

ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶುಭಮ್ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಸೋಮನ್ ಅವರಂತೆಯೇ, ಶುಭಂ ಕೂಡ ಭಾರತೀಯ ಸೇನೆಯ ಸದಸ್ಯರಾಗಿದ್ದು, ಲ್ಯಾನ್ಸ್ ನಾಯಕ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರಾಖಂಡದ ರೂರ್ಕಿಯಿಂದ ಬಂದ ಅವರು 2012 ರಲ್ಲಿ ಆರ್ಮಿ ಕೆಡೆಟ್ ಕಾಲೇಜಿನಲ್ಲಿ ಸಂದರ್ಶನಕ್ಕೆ ಹೋಗುವಾಗ ಬೈಕ್ ಅಪಘಾತದಲ್ಲಿ ಸಿಲುಕಿ ಒಂದು ಕಾಲು ಕಳೆದುಕೊಂಡರು. ನಂತರ ಸೇನೆಯು ಅವರಿಗೆ ಪ್ರಾಸ್ಥೆಟಿಕ್ ಕಾಲನ್ನು ಅಳವಡಿಸಿತು. ಆ ನಂತರ ಶುಭಮ್ ಕೂಡ ಪ್ಯಾರಾ-ಶಾಟ್ ಪುಟ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:23 pm, Sat, 1 August 26

Follow Us