- TV9 Kannada Photo gallery 2026 Commonwealth Games: India Wins 2 Medals! Lovepreet Silver, Seema Bronze in Discus
CWG 2026: ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದ ಸೀಮಾ ಕಲಿರಾಮನ್
Commonwealth Games 2026: 2026ರ ಕಾಮನ್‌ವೆಲ್ತ್ ಗೇಮ್ಸ್‌ನ 8ನೇ ದಿನ ಭಾರತಕ್ಕೆ 2 ಪದಕಗಳು ಲಭಿಸಿದವು. ಲವ್‌ಪ್ರೀತ್ ಸಿಂಗ್ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದರೆ, ಸೀಮಾ ಕಲಿರಾಮನ್ ಡಿಸ್ಕಸ್ ಥ್ರೋದಲ್ಲಿ ಚೊಚ್ಚಲ ಕಂಚು ಪಡೆದರು. ಇದು ಭಾರತದ ಒಟ್ಟು ಪದಕಗಳ ಸಂಖ್ಯೆಯನ್ನು 17ಕ್ಕೆ ಹೆಚ್ಚಿಸಿತು. ಸೀಮಾ 58.65 ಮೀಟರ್ ಎಸೆದು ಸಾಧನೆ ಮಾಡಿದರು, ಅವರ ಪತಿ ರವೀಂದರ್ ಅವರೇ ತರಬೇತುದಾರರಾಗಿದ್ದಾರೆ.
Updated on: Jul 31, 2026 | 4:26 PM

2026ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ 8ನೇ ದಿನದಂದು ಭಾರತಕ್ಕೆ 2 ಪದಕಗಳು ಲಭಿಸಿದವು. ಮೊದಲನೆಯದ್ದಾಗಿ ವೇಟ್‌ಲಿಫ್ಟಿಂಗ್‌ನಲ್ಲಿ ಲವ್‌ಪ್ರೀತ್ ಸಿಂಗ್ ಬೆಳ್ಳಿ ಗೆದ್ದರೆ, ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸೀಮಾ ಕಲಿರಾಮನ್ ಕಂಚಿನ ಪದಕ ಗೆದ್ದರು.

ಇದು ಭಾರತದ ಒಟ್ಟು ಪದಕಗಳ ಸಂಖ್ಯೆಯನ್ನು 17 ಕ್ಕೆ ಏರಿಸಿದರೆ ಅಥ್ಲೆಟಿಕ್ಸ್‌ನಲ್ಲಿ ಭಾರತದ ಎಂಟನೇ ಪದಕವಾಗಿತ್ತು. ಸೀಮಾ ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ 58.65 ಮೀಟರ್ ದೂರ ಎಸೆಯುವ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚೊಚ್ಚಲ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. ಹಾಗೆಯೇ ಭಾರತದವರೇ ಆದ ನಿಧಿ ರಾಣಿ ಅದೇ ಸ್ಪರ್ಧೆಯಲ್ಲಿ 57.10 ಮೀಟರ್ ದೂರ ಎಸೆಯುವ ಮೂಲಕ ನಾಲ್ಕನೇ ಸ್ಥಾನ ಪಡೆದರು.

ಆದಾಗ್ಯೂ ಈ ಪ್ರಶಸ್ತಿ ಪಂದ್ಯದಲ್ಲಿ ಸೀಮಾ ಕಲಿರಾಮನ್ ಎಸೆದ ಆರು ಎಸೆತಗಳಲ್ಲಿ ನಾಲ್ಕು ಫೌಲ್ ಆಗಿದ್ದವು. ಹೀಗಾಗಿ ಅವರು ಉಳಿದ ಎರಡು ಯಶಸ್ವಿ ಎಸೆತಗಳಲ್ಲಿ ಒಂದನ್ನು 57.32 ಮೀಟರ್ ದೂರ ಎಸೆದರೆ, ತಮ್ಮ ಮೂರನೇ ಪ್ರಯತ್ನದಲ್ಲಿ 58.65 ಮೀಟರ್ ದೂರ ಎಸೆಯುವ ಮೂಲಕ ತಮ್ಮ ಚೊಚ್ಚಲ ಕಾಮನ್ವೆಲ್ತ್ ಪದಕ ಗೆದ್ದರು.

ಸೀಮಾ ಕಲಿರಾಮನ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಸ್ವತಃ ಅವರ ಪತಿ ರವೀಂದರ್ ಅವರೇ ಸೀಮಾ ಅವರಿಗೆ ತರಬೇತುದಾರರಾಗಿದ್ದಾರೆ. ಹರಿಯಾಣದ ಮೂಲದವರಾಗಿರುವ ಇವರಿಬ್ಬ ಭೇಟಿಗೆ ಕಾರಣವಾಗಿದ್ದೆ ಡಿಸ್ಕಸ್ ಥ್ರೋ. ಏಕೆಂದರೆ ರವೀಂದರ್ ಕೂಡ ಕ್ರೀಡೆಯಲ್ಲಿ ಸಕ್ರಿಯರಾಗಿದ್ದರು. ಅವರು ಜೂನಿಯರ್ ಮತ್ತು ಸಬ್-ಜೂನಿಯರ್ ಮಟ್ಟದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಆದರೆ ಗಾಯಗಳಿಂದಾಗಿ ಅವರ ವೃತ್ತಿಜೀವನವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಆದಾಗ್ಯೂ ತಮ್ಮ ಮಡದಿಗೆ ಬೆಂಬಲವಾಗಿ ನಿಂತು ದೇಶಕ್ಕೆ ಪದಕ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇನ್ನು ಸೀಮಾ ಪ್ರಸ್ತುತ ಭಾರತದ ನಂಬರ್ 1 ಡಿಸ್ಕಸ್ ಎಸೆತಗಾರ್ತಿಯಾಗಿದ್ದು, ಕಳೆದ ತಿಂಗಳು ನಡೆದ ಅಂತರ-ರಾಜ್ಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅವರು 59.73 ಮೀಟರ್ ದೂರ ಎಸೆದು ವೈಯಕ್ತಿಕ ದಾಖಲೆ ನಿರ್ಮಿಸುವುದರ ಜೊತೆಗೆ ಪ್ರಶಸ್ತಿಯನ್ನು ಗೆದ್ದಿದ್ದರು.




