
ಕೆಲವೇ ವರ್ಷಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ನ (Pakistan Cricket) ರಾಜನಾಗಿ ಮೆರೆಯುತ್ತಿದ್ದ ಮಾಜಿ ನಾಯಕ ಬಾಬರ್ ಆಝಂಗೆ (Babar Azam) ತಂಡದಲ್ಲೇ ಸ್ಥಾನ ಇಲ್ಲದಂತಾಗಿದೆ. ಕೆಲವು ವರ್ಷಗಳಿಂದ ನಿರಂತರವಾಗಿ ಕಳಪೆ ಪ್ರದರ್ಶನದಿಂದ ಬಳಲುತ್ತಿರುವ ಬಾಬರ್, ಮೊದಲು ನಾಯಕತ್ವದಿಂದ ಕೆಳಗಿಳಿಯಬೇಕಾಯಿತು. ಇದೀಗ ಅವರಿಗೆ ತಂಡದಲ್ಲೂ ಸ್ಥಾನ ಇಲ್ಲದಂತಾಗಿದೆ. ಇದು ಮಾತ್ರವಲ್ಲದೆ ಸ್ವತಃ ಪಾಕ್ ಕ್ರಿಕೆಟ್ ಮಂಡಳಿಯೇ ಬಾಬರ್ ಅವರನ್ನು ತಂಡದಿಂದ ಹೊರಗಿಟ್ಟಿದೆ. ವಾಸ್ತವವಾಗಿ ಪಾಕ್ ಟಿ20 ತಂಡದಿಂದ ಬಾಬರ್ ಆಝಂ ಅವರನ್ನು ಹೊರಗಿಡಲಾಗಿದೆ. ಹೀಗಾಗಿ ಬದಲಾವಣೆಯತ್ತ ಹೆಜ್ಜೆ ಹಾಕಿರುವ ಬಾಬರ್ ಇದೀಗ ವಿದೇಶಿ ಟಿ20 ಲೀಗ್ನತ್ತ ಮುಖ ಮಾಡಿದ್ದಾರೆ.
ಬಿಗ್ ಬ್ಯಾಷ್ ಲೀಗ್ನ 15 ನೇ ಸೀಸನ್ನಲ್ಲಿ ಬಾಬರ್ ಆಝಂ ಹೊಸ ತಂಡದೊಂದಿಗೆ ಆಡುವುದನ್ನು ಕಾಣಬಹುದು. ಮುಂಬರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಬಾಬರ್ ಸಿಡ್ನಿ ಸಿಕ್ಸರ್ಸ್ ಪರ ಆಡಲಿದ್ದಾರೆ. ಸಿಡ್ನಿ ಸಿಕ್ಸರ್ಸ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಬಾಬರ್ ಈ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಭಾಗವಹಿಸಲಿದ್ದಾರೆ.
ಲೀಗ್ ನಿಯಮಗಳ ಪ್ರಕಾರ, ಎಲ್ಲಾ ಬಿಗ್ ಬ್ಯಾಷ್ ಲೀಗ್ ಫ್ರಾಂಚೈಸಿಗಳು ಡ್ರಾಫ್ಟ್ಗೆ ಮೊದಲು ಒಬ್ಬ ಅಂತರರಾಷ್ಟ್ರೀಯ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಆ ಪ್ರಕಾರ ಬಾಬರ್ ಆಝಂ ಹೊರತುಪಡಿಸಿ, ಸ್ಟೀವ್ ಸ್ಮಿತ್, ಜ್ಯಾಕ್ ಎಡ್ವರ್ಡ್ಸ್, ಬೆನ್ ದ್ವಾರಶುಯಿಸ್, ಸೀನ್ ಅಬಾಟ್, ಜೋಯಲ್ ಪ್ಯಾರಿಸ್, ಮೊಯಿಸಸ್ ಹೆನ್ರಿಕ್ಸ್ ಸೇರಿದಂತೆ ಅನೇಕ ಸ್ಟಾರ್ ಆಟಗಾರರು ಮುಂಬರುವ ಸೀಸನ್ನಲ್ಲಿ ಆಡುವುದನ್ನು ಕಾಣಬಹುದು.
ತಂಡ ಸೇರಿದ ಬಗ್ಗೆ ಸಂತಸ ಹಂಚಿಕೊಂಡಿರುವ ಬಾಬರ್,‘ವಿಶ್ವದ ಅತ್ಯುತ್ತಮ ಟಿ20 ಲೀಗ್ಗಳಲ್ಲಿ ಒಂದರಲ್ಲಿ ಆಡಲಿದ್ದೇನೆ ಎಂಬುದು ನನಗೆ ನಿಜವಾಗಿಯೂ ಸಂತೋಷವಾಗಿದೆ. ಇದು ಅತ್ಯಂತ ಯಶಸ್ವಿ ಮತ್ತು ಗೌರವಾನ್ವಿತ ಫ್ರಾಂಚೈಸಿ. ನನ್ನ ತಂಡದ ಯಶಸ್ಸಿಗೆ ನಾನು ಕೊಡುಗೆ ನೀಡಲು ಬಯಸುತ್ತೇನೆ. ನಾನು ಅಭಿಮಾನಿಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಬಯಸುತ್ತೇನೆ ಮತ್ತು ಈ ಅನುಭವವನ್ನು ಪಾಕಿಸ್ತಾನದಲ್ಲಿರುವ ನನ್ನ ಮನೆ, ಸ್ನೇಹಿತರು, ಕುಟುಂಬ ಮತ್ತು ಬೆಂಬಲಿಗರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ’ ಎಂದಿದ್ದಾರೆ.
ಬಾಬರ್, ರಿಜ್ವಾನ್, ಅಫ್ರಿದಿ ಸೇರಿದಂತೆ ಪಾಕ್ ಕ್ರಿಕೆಟಿಗರ ಇನ್ಸ್ಟಾಗ್ರಾಮ್ ಖಾತೆ ಭಾರತದಲ್ಲಿ ಬ್ಯಾನ್
ಬಾಬರ್ ಆಝಂ ಅವರಲ್ಲದೆ, ಶದಾಬ್ ಖಾನ್, ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಕೂಡ ಮುಂಬರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಆಡುವುದನ್ನು ಕಾಣಬಹುದು. ಆದಾಗ್ಯೂ, ಈ ಎಲ್ಲಾ ಆಟಗಾರರ ಹೆಸರುಗಳನ್ನು ಮುಂದಿನ ವಾರ ನಡೆಯಲಿರುವ ವಿದೇಶಿ ಡ್ರಾಫ್ಟ್ನಲ್ಲಿ ಸೇರಿಸಲಾಗಿದ್ದು, ಯಾವುದಾದರು ತಂಡ ಅವರನ್ನು ಆಯ್ಕೆ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:02 pm, Fri, 13 June 25