ಏಷ್ಯಾಕಪ್ನಲ್ಲಿ ಸೂಪರ್-4 ಹಂತಕ್ಕೇರಿರುವ ಬಾಂಗ್ಲಾದೇಶ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ನಜ್ಮುಲ್ ಹೊಸೈನ್ ಶಾಂಟೊ ಅವರು ಮಂಡಿರಜ್ಜು ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇತ್ತ ಬಾಂಗ್ಲಾದೇಶ್ ತಂಡವು ಸೂಪರ್-4 ಹಂತಕ್ಕೇರಲು ಮುಖ್ಯ ಕಾರಣ ನಜ್ಮುಲ್ ಅವರ ಉತ್ತಮ ಪ್ರದರ್ಶನ.
ಏಕೆಂದರೆ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಕ್ರಮವಾಗಿ 89 ಮತ್ತು 104 ರನ್ ಬಾರಿಸಿ ಮಿಂಚಿದ್ದರು. ಆದರೆ ಅಫ್ಘಾನ್ ವಿರುದ್ಧದ ಪಂದ್ಯದ ವೇಳೆ ನಜ್ಮುಲ್ ಎಡ ಮಂಡಿ ನೋವಿಗೆ ಒಳಗಾಗಿದ್ದರು. ಹೀಗಾಗಿ ಫೀಲ್ಡಿಂಗ್ನಿಂದ ಹಿಂದೆ ಸರಿದಿದ್ದರು.
ಇದೀಗ ಶಾಂಟೊ ಅವರ ಎಂಆರ್ಐ ಸ್ಕ್ಯಾನ್ ವರದಿ ಬಂದಿದ್ದು, ಅವರ ಸ್ನಾಯುಗಳಲ್ಲಿ ಸಮಸ್ಯೆಯಿರುವುದು ದೃಢಪಟ್ಟಿದೆ ಎಂದು ತಂಡದ ಫಿಸಿಯೋ ಬೈಜೆದುಲ್ ಇಸ್ಲಾಂ ಖಾನ್ ಹೇಳಿದ್ದಾರೆ. ಅಲ್ಲದೆ ಮುನ್ನೆಚ್ಚರಿಕೆಯಾಗಿ, ಶಾಂಟೊ ಅವರು ಏಷ್ಯಾಕಪ್ನಲ್ಲಿ ಕಣಕ್ಕಿಳಿಯುವುದಿಲ್ಲ. ಬದಲಾಗಿ ಏಕದಿನ ವಿಶ್ವಕಪ್ಗೂ ಮುನ್ನ ಸಂಪೂರ್ಣ ಫಿಟ್ನೆಸ್ ಸಾಧಿಸುವತ್ತ ಗಮನ ಹರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಅಂದರೆ ಇದೀಗ ಬಾಂಗ್ಲಾದೇಶ್ ನಿರ್ಣಾಯಕ ಹಂತಕ್ಕೇರಿದರೂ ಎಡಗೈ ದಾಂಡಿಗ ನಜ್ಮುಲ್ ಹೊಸೈನ್ ಹೊರಗುಳಿಯುತ್ತಿರುವುದು ಬಾಂಗ್ಲಾ ತಂಡ ಪಾಲಿಗೆ ಹಿನ್ನಡೆಯನ್ನುಂಟು ಮಾಡಲಿದೆ.
ಏಕೆಂದರೆ ನಜ್ಮುಲ್ 2023 ರಲ್ಲಿ ಬಾಂಗ್ಲಾದೇಶ್ ಪರ ಎಲ್ಲಾ ಸ್ವರೂಪಗಳಲ್ಲಿ ನಾಲ್ಕು ಶತಕಗಳು ಮತ್ತು ಐದು ಅರ್ಧಶತಕಗಳನ್ನು ಬಾರಿಸಿದ ಆಟಗಾರ. ಅಷ್ಟೇ ಅಲ್ಲದೆ ಈ ವರ್ಷ ಒಟ್ಟು 1,078 ರನ್ ಕಲೆಹಾಕುವ ಮೂಲಕ ಬಾಂಗ್ಲಾದೇಶ್ ತಂಡ ಟಾಪ್ ಸ್ಕೋರರ್ ಎನಿಸಿಕೊಂಡಿದ್ದಾರೆ.
ಇದೀಗ ಏಷ್ಯಾಕಪ್ ಸೂಪರ್-4 ಹಂತದ ಪಂದ್ಯಗಳಿಂದ ಅವರು ಹೊರಗುಳಿದಿದ್ದು, ಇದಾಗ್ಯೂ ಲಾಹೋರ್ನಲ್ಲಿ ಬುಧವಾರ ಪಾಕಿಸ್ತಾನ್ ವಿರುದ್ಧ ನಡೆಯಲಿರುವ ಮೊದಲ ಸೂಪರ್ ಫೋರ್ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಪಡೆ ಗೆಲುವು ದಾಖಲಿಸಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
Published On - 6:57 pm, Tue, 5 September 23