ಪಾಕ್ ಆಟಗಾರನೊಂದಿಗೆ ಕಣಕ್ಕಿಳಿಯಲಿದ್ದಾರೆ ರವಿಚಂದ್ರನ್ ಅಶ್ವಿನ್

Ravichandran Ashwin: ರವಿಚಂದ್ರನ್ ಅಶ್ವಿನ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದಾರೆ. ಈ ವೇಳೆ ಒಟ್ಟು 221 ಪಂದ್ಯಗಳನ್ನಾಡಿರುವ ಅವರು 187 ವಿಕೆಟ್ ಕಬಳಿಸಿದ್ದಾರೆ.

ಪಾಕ್ ಆಟಗಾರನೊಂದಿಗೆ ಕಣಕ್ಕಿಳಿಯಲಿದ್ದಾರೆ ರವಿಚಂದ್ರನ್ ಅಶ್ವಿನ್
Ravichandran Ashwin

Updated on: Sep 24, 2025 | 2:24 PM

ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿದೇಶಿ ಲೀಗ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈಗಾಗಲೇ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಗೆ ಹೆಸರು ನೋಂದಾಯಿಸಿಕೊಂಡಿರುವ ಅಶ್ವಿನ್ ಇದೀಗ ಬಿಗ್ ಬ್ಯಾಷ್ ಲೀಗ್​ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಈ ಒಪ್ಪಂದದಂತೆ ರವಿಚಂದ್ರನ್ ಅಶ್ವಿನ್ ಅವರು ಮುಂಬರುವ ಬಿಬಿಎಲ್​​ನಲ್ಲಿ ಸಿಡ್ನಿ ಥಂಡರ್ ಪರ ಕಣಕ್ಕಿಳಿಯಲಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಷ್ ಲೀಗ್​ 2025-26 ಡಿಸೆಂಬರ್ 14 ರಿಂದ ಶುರುವಾಗಲಿದ್ದು, ಈ ಟೂರ್ನಿಯ ಮೂಲಕ ರವಿಚಂದ್ರನ್ ಅಶ್ವಿನ್ ಹೊಸ ಇನಿಂಗ್ಸ್ ಆರಂಭಿಸಲಿರುವುದನ್ನು ನಿರೀಕ್ಷಿಸಬಹುದು. ಇನ್ನು ಸಿಡ್ನಿ ಥಂಡರ್ ತಂಡದಲ್ಲಿ ಪಾಕಿಸ್ತಾನದ ಆಲ್​ರೌಂಡರ್ ಶಾದಾಬ್ ಖಾನ್ ಕೂಡ ಸ್ಥಾನ ಪಡೆದಿದ್ದಾರೆ.

ಹೀಗಾಗಿ ಬಿಗ್ ಬ್ಯಾಷ್​ ಲೀಗ್​ನಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕ್ ಆಟಗಾರ ಜೊತೆಯಾಗಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಅಶ್ವಿನ್ ಐಪಿಎಲ್ ಕೆರಿಯರ್:

2009 ರಲ್ಲಿ ಐಪಿಎಲ್ ಕೆರಿಯರ್ ಆರಂಭಿಸಿದ್ದ ರವಿಚಂದ್ರನ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದರು. ಅಲ್ಲದೆ ಕಳೆದ ಸೀಸನ್​ ಮೂಲಕ ಸಿಎಸ್​ಕೆ ತಂಡಕ್ಕೆ ಮರಳಿದ್ದರು. ಆದರೆ ಈ ಬಾರಿಯ ಟೂರ್ನಿ ಮುಕ್ತಾಯದೊಂದಿಗೆ ರವಿಚಂದ್ರನ್ ಅಶ್ವಿನ್ ಐಪಿಎಲ್​ಗೆ ಗುಡ್ ಬೈ ಹೇಳಿದ್ದಾರೆ.

ರವಿಚಂದ್ರನ್ ಅಶ್ವಿನ್ ಐಪಿಎಲ್​ನಲ್ಲಿ ಈವರೆಗೆ 221 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 4710 ಎಸೆತಗಳನ್ನು ಎಸೆದಿರುವ ಅವರು  ಒಟ್ಟು 187 ವಿಕೆಟ್ ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ ಬ್ಯಾಟಿಂಗ್ ಮೂಲಕ 833 ರನ್​ಗಳ ಕೊಡುಗೆ ನೀಡಿದ್ದಾರೆ. ಇದೀಗ 17 ವರ್ಷಗಳ ತಮ್ಮ ಸುದೀರ್ಘ ಐಪಿಎಲ್ ಕೆರಿಯರ್ ಅನ್ನು ಅಂತ್ಯಗೊಳಿಸಿ, ವಿದೇಶಿ ಟಿ20 ಲೀಗ್​ಗಳತ್ತ ಮುಖ ಮಾಡಿದ್ದಾರೆ.

ಇಂಟರ್​ನ್ಯಾಷನಲ್ ಟಿ20 ಲೀಗ್​ಗೂ ಅಶ್ವಿನ್ ಎಂಟ್ರಿ:

ಯುಎಇ ಕ್ರಿಕೆಟ್ ಬೋರ್ಡ್ ಆಯೋಜಿಸುವ ಇಂಟರ್ನ್ಯಾಷನಲ್ ಲೀಗ್‌ ಟಿ20 ಟೂರ್ನಿಗಾಗಿ ರವಿಚಂದ್ರನ್ ಅಶ್ವಿನ್ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದು ಸಹ 120,000 ಯುಎಸ್ ಡಾಲರ್ ಮೂಲ ಬೆಲೆಯೊಂದಿಗೆ. ಅಂದರೆ ಅಶ್ವಿನ್ ಅವರ ಆರಂಭಿಕ ಹರಾಜು‌ ಮೊತ್ತ ಬರೋಬ್ಬರಿ 1.06 ಕೋಟಿ ರೂ.

ಇದನ್ನೂ ಓದಿ: ಬಾಂಗ್ಲಾದೇಶ್ ಸೋತರೆ, ಭಾರತ vs ಪಾಕಿಸ್ತಾನ್ ನಡುವೆ ಫೈನಲ್

1.06 ಕೋಟಿ ರೂ. ಮೂಲ ಬೆಲೆಯೊಂದಿಗೆ ಅಶ್ವಿನ್ ಯುಎಇ ಟಿ20 ಲೀಗ್‌ಗೆ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದು, ಈ ಮೂಲಕ ಐಎಲ್​ಟಿ20 ಲೀಗ್​ನಲ್ಲೂ ಇನಿಂಗ್ಸ್ ಆರಂಭಿಸಲು ನಿರ್ಧರಿಸಿದ್ದಾರೆ. ಅದರಂತೆ ಅಕ್ಟೋಬರ್ 1 ರಂದು ನಡೆಯಲಿರುವ ಹರಾಜಿನಲ್ಲಿ ಗರಿಷ್ಠ ಮೂಲ ಬೆಲೆಯೊಂದಿಗೆ ಅಶ್ವಿನ್ ಹೆಸರು ಸಹ ಕಾಣಿಸಿಕೊಳ್ಳಲಿದೆ.