ಬಿಸಿಸಿಐ ಇಂದು ತನ್ನ ಕೇಂದ್ರ ಒಪ್ಪಂದ (BCCI Central Contracts) ಪಟ್ಟಿವನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಹಲವು ಯುವ ಆಟಗಾರರು ಮೊದಲ ಬಾರಿಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna), ರಿಂಕು ಸಿಂಗ್, ತಿಲಕ್ ವರ್ಮಾ ಸೇರಿದಂತೆ 11 ಆಟಗಾರರು ಮೊದಲ ಬಾರಿಗೆ ಕೇಂದ್ರ ಒಪ್ಪಂದದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಲ್ಲದೇ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ರಜತ್ ಪಾಟಿದಾರ್ (Rajat Patidar) ಕೂಡ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಚ್ಚರಿಯ ಸಂಗತಿಯೆಂದರೆ ತಂಡದ ಮಧ್ಯಮ ಕ್ರಮಾಂದಕ ಅನುಭವಿ ಬ್ಯಾಟರ್ ಶ್ರೇಯಸ್ ಅಯ್ಯರ್ ಹಾಗೂ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ರನ್ನು ಕೇಂದ್ರ ಗುತ್ತಿಗೆಯಿಂದ ಹೊರಗಿಡಲಾಗಿದೆ.
ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ರಿಂಕು ಸಿಂಗ್ ಮೊದಲ ಬಾರಿಗೆ ಈ ಕೇಂದ್ರ ಒಪ್ಪಂದಕ್ಕೆ ಸೇರ್ಪಡೆಗೊಂಡಿದ್ದಾರೆ. ಇತ್ತೀಚೆಗೆ ನಡೆದ ಆಸ್ಟ್ರೇಲಿಯ ಮತ್ತು ಅಫ್ಘಾನಿಸ್ತಾನ ವಿರುದ್ಧದ ಚುಟುಕು ಮಾದರಿಯ ಸರಣಿಯಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದ ರಿಂಕು ಅವರನ್ನು 2023-24 ರ ಕೇಂದ್ರ ಒಪ್ಪಂದದಲ್ಲಿ ಗ್ರೇಡ್ ಸಿ ಗೆ ಸೇರಿಸಲಾಗಿದೆ. ರಿಂಕು ಸಿಂಗ್ ಹೊರತಾಗಿ ರಜತ್ ಪಾಟಿದಾರ್ ಕೂಡ ಸಿ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಹೀಗಾಗಿ ಪಾಟಿದರ್ಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತ್ತು. ಆದರೆ, ಟೆಸ್ಟ್‌ನಲ್ಲಿ ಪಾಟಿದರ್ಗೆ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಅದಾಗ್ಯೂ ಪಾಟಿದರ್ ಬಿಸಿಸಿಐನ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದಾರೆ.
ಬಿಸಿಸಿಐ ವಾರ್ಷಿಕ ಒಪ್ಪಂದ ಪ್ರಕಟ; ರಾಹುಲ್‌ಗೆ ಎ ಗ್ರೇಡ್, ಶ್ರೇಯಸ್-ಕಿಶನ್ ಕಿಕ್ ಔಟ್..!
2023-24ರ ಕೇಂದ್ರ ಒಪ್ಪಂದದಲ್ಲಿ ತಿಲಕ್ ವರ್ಮಾ ಕೂಡ ಸ್ಥಾನ ಪಡೆದಿದ್ದಾರೆ. ಟಿ20 ಮಾದರಿಯಲ್ಲಿ ತಂಡದ ಮಧ್ಯಮ ಕ್ರಮಾಂದವನ್ನು ಪ್ರತಿನಿಧಿಸುತ್ತಿರುವ ತಿಲಕ್ ವರ್ಮಾ ಅವರನ್ನು ಸಿ ಗ್ರೇಡ್‌ಗೆ ಸೇರಿಸಲಾಗಿದೆ. ತಿಲಕ್ ವರ್ಮಾ ಅಲ್ಲದೆ ರುತುರಾಜ್ ಗಾಯಕ್‌ವಾಡ್ ಕೂಡ ಸಿ ಗ್ರೇಡ್‌ಗೆ ಸೇರ್ಪಡೆಯಾಗಿದ್ದಾರೆ. ಹಾಗೆಯೇ ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಕೂಡ ಸಿ ಗ್ರೇಡ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
2023-24ನೇ ಸಾಲಿಗೆ ಬಿಸಿಸಿಐ ಬಿಡುಗಡೆ ಮಾಡಿರುವ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದ 11 ಆಟಗಾರರ ಪೈಕಿ ಯಶಸ್ವಿ ಜೈಸ್ವಾಲ್ ಬಿ ಗ್ರೇಡ್‌ಗೆ ಸೇರ್ಪಡೆಯಾಗಿದ್ದಾರೆ. ಸಿ ಗ್ರೇಡ್‌ನಲ್ಲಿ ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ರಜತ್ ಪಾಟಿದಾರ್ ಸ್ಥಾನ ಪಡೆದಿದ್ದಾರೆ. ಈ ಎಲ್ಲಾ ಆಟಗಾರರು ಕಳೆದ ಒಂದು ವರ್ಷದಲ್ಲಿ ಯಾವುದಾದರೊಂದು ಮಾದರಿಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದು, ತಂಡದ ಗೆಲುವಿಗೆ ಕೊಡುಗೆ ನೀಡಿದ್ದಾರೆ.
ಕಳೆದ ಬಾರಿ ಕೇಂದ್ರ ಗುತ್ತಿಗೆ ಪಟ್ಟಿ ಬಿಡುಗಡೆಯಾದಾಗ ಚೇತೇಶ್ವರ್ ಪೂಜಾರ, ಶ್ರೇಯಸ್ ಅಯ್ಯರ್, ಉಮೇಶ್ ಯಾದವ್, ಶಿಖರ್ ಧವನ್, ಇಶಾನ್ ಕಿಶನ್, ದೀಪಕ್ ಹೂಡಾ, ಯುಜ್ವೇಂದ್ರ ಚಾಹಲ್ ವಿವಿದ ಗ್ರೇಡ್‌ಗಳಲ್ಲಿ ಸ್ಥಾನ ಪಡೆದಿದ್ದರು. ಆದರೆ ಇದೀಗ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಈ ಆಟಗಾರನನ್ನು ಒಪ್ಪಂದದಿಂದ ಹೊರಗಿಡಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ