ಐಪಿಎಲ್ (IPL) ಮಹಾ ಯಶಸ್ಸಿನ ಬಳಿಕ ಇತರ ದೇಶಗಳು ಕೂಡ ಐಪಿಎಲ್ ರೀತಿಯ ಲೀಗ್ಗಳನ್ನು ಆರಂಭಿಸಲು ಮುಂದಾಗಿವೆ. ಇದರ ಪ್ರಯುಕ್ತ ಸೌತ್ ಆಫ್ರಿಕಾ ಹಾಗೂ ಯುಎಇ ದೇಶಗಳು ಕೂಡ ಟಿ20 ಲೀಗ್ಗಳನ್ನು ಆರಂಭಿಸಿದ್ದವು. ಈ ದೇಶಗಳಲ್ಲೂ ಐಪಿಎಲ್ ತಂಡಗಳ ಒಡೆತನ ಹೊಂದಿರುವ ಫ್ರಾಂಚೈಸಿಗಳೇ ತಂಡಗಳನ್ನು ಖರೀದಿಸಿದ್ದವು. ಜೊತೆಗೆ ಭಾರತದ ಹಿರಿಯ ಆಟಗಾರರನ್ನು ಈ ಲೀಗ್‌ಗಳಲ್ಲಿ ಬಳಸಿಕೊಳ್ಳಲು ಮುಂದಾಗಿದ್ದವು. ಆದರೆ ಈಗ ಫ್ರಾಂಚೈಸಿಗಳ ಇಂತಹ ಯೋಚನೆಗೆ ಬಿಸಿಸಿಐ (BCCI) ಬ್ರೇಕ್ ಹಾಕಿದೆ.
ಆಟಗಾರರಿಗೆ ಖಡಕ್ ಸಂದೇಶ ನೀಡಿರುವ ಬಿಸಿಸಿಐ, ಟೀಂ ಇಂಡಿಯಾದಲ್ಲಿ ಆಡಿ ನಿವೃತ್ತಿಯಾಗಿರುವ ಆಟಗಾರರು ಒಂದು ವೇಳೆ ಐಪಿಎಲ್ ಆಡುತ್ತಿದ್ದರೆ ಅಂತಹ ಆಟಗಾರರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ಲೀಗ್ ಮತ್ತು ಯುಎಇಯಲ್ಲಿ ನಡೆಯಲಿರುವ ಟಿ20 ಲೀಗ್‌ನಲ್ಲಿ ಭಾಗವಹಿಸುವಂತಿಲ್ಲ ಎಂಬ ಆದೇಶವನ್ನು ಬಿಸಿಸಿಐ ಹೊರಡಿಸಿದೆ. ಇದರಿಂದ ಐಪಿಎಲ್‌ನಲ್ಲಿ ಆಡುವ ಆಟಗಾರರು ಸಹ ಈ ವಿದೇಶಿ ಲೀಗ್‌ಗಳಲ್ಲಿ ಮೆಂಟರ್ ಪಾತ್ರವನ್ನು ವಹಿಸಲು ಸಾಧ್ಯವಾಗುವುದಿಲ್ಲ.
ಬಿಸಿಸಿಐನ ಈ ನಿರ್ಧಾರಕ್ಕೆ ಪ್ರಮುಖ ಕಾರಣವೆಂದರೆ, ಆಫ್ರಿಕಾ ದೇಶದಲ್ಲಿ ನಡೆಯುವ ಟಿ20 ಲೀಗ್‌ನಲ್ಲಿ ತಂಡವನ್ನು ಖರೀದಿಸಿರುವ ಸಿಎಸ್ಕೆ ಫ್ರಾಂಚೈಸಿ, ತನ್ನ ತಂಡದ ಐಕಾನ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ದಕ್ಷಿಣ ಆಫ್ರಿಕಾದ ಟಿ 20 ಲೀಗ್‌ನಲ್ಲಿ ಮಾರ್ಗದರ್ಶಕರಾಗಿ ಬಳಸಲು ನಿರ್ಧರಿಸಿತ್ತು. ಏಕೆಂದರೆ ಧೋನಿ ಐಪಿಎಲ್‌ನಲ್ಲಿ ಚೆನ್ನೈ ಪರ ಆಡುತ್ತಿದ್ದು, ಇದರ ಲಾಭ ಪಡೆಯಲು ಮುಂದಾಗಿತ್ತು. ಆದರೀಗ ಬಿಸಿಸಿಐನ ಈ ಮಹತ್ವದ ನಿರ್ಧಾರದಿಂದಾಗಿ ಚೆನ್ನೈ ಕನಸಿಗೆ ಬೆಂಕಿ ಬಿದ್ದಿದೆ.
ನಿವೃತ್ತಿ ಹೊಂದಿದರೆ ಮಾತ್ರ ಅವಕಾಶ
ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ದೇಶೀಯ ಕ್ರಿಕೆಟಿಗರು ಸೇರಿದಂತೆ ಯಾವುದೇ ಟೀಂ ಇಂಡಿಯಾ ಆಟಗಾರ ಅವನು / ಅವಳು ಎಲ್ಲಾ ರೀತಿಯ ಆಟದಿಂದ ನಿವೃತ್ತಿಯಾಗುವವರೆಗೆ ಇತರ ಲೀಗ್‌ಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಒಬ್ಬ ಆಟಗಾರ ಮುಂಬರುವ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಬಯಸಿದರೆ, ಅವನು ಬಿಸಿಸಿಐ ಜೊತೆಗಿನ ಒಪ್ಪಂದವನ್ನು ಸಂಪೂರ್ಣವಾಗಿ ರದ್ದುಗೊಳಿಸಿದರೆ ಮಾತ್ರ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸುವ ಅವಕಾಶವಿದೆ ಎಂದಿದ್ದಾರೆ.
ಧೋನಿಯಂತಹ ಆಟಗಾರರು ಈ ಲೀಗ್‌ಗಳಲ್ಲಿ ಮೆಂಟರ್ ಅಥವಾ ಕೋಚ್ ಆಗಿ ಪಾಲ್ಗೊಳ್ಳಬಹುದೇ ಎಂದು ಕೇಳಿದಾಗ? ಇದಕ್ಕೆ ಉತ್ತರಿಸಿದ ಬಿಸಿಸಿಐ ಅಧಿಕಾರಿ, “ಹಾಗಾದರೆ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡಲು ಸಾಧ್ಯವಿಲ್ಲ. ವಿದೇಶಿ ಲೀಗ್‌ಗಳಲ್ಲಿ ಕಾಣಿಸಿಕೊಳ್ಳಬೇಕೆಂದರೆ ಅವರು ಮೊದಲು ಐಪಿಎಲ್ನಿಂದ ನಿವೃತ್ತಿ ಹೊಂದಬೇಕು ಎಂದಿದ್ದಾರೆ.
ತಂಡ ಖರೀದಿಸಿದ ಐಪಿಎಲ್ ಮಾಲೀಕರು
ದಕ್ಷಿಣ ಆಫ್ರಿಕಾ ತನ್ನದೇ ಆದ ಟಿ 20 ಲೀಗ್ ಆರಂಭಿಸುವುದರೊಂದಿಗೆ ದೇಶದಲ್ಲಿ ಕ್ರಿಕೆಟ್ ಬೆಳೆಸಲು ಮುಂದಾಗಿದೆ. ಈ ಲೀಗ್ಗಳಲ್ಲಿರುವ 6 ತಂಡಗಳ ಒಡೆತನವನ್ನು ಐಪಿಎಲ್‌ನಲ್ಲಿ ತಂಡ ಖರೀದಿಸಿರುವ ಫ್ರಾಂಚೈಸಿಗಳು ಹೊಂದಿವೆ. ಮುಂಬೈ, ಲಕ್ನೋ, ಹೈದರಾಬಾದ್, ಚೆನ್ನೈ, ರಾಜಸ್ಥಾನ ಮತ್ತು ದೆಹಲಿ ಫ್ರಾಂಚೈಸಿಗಳು ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ತಂಡಗಳನ್ನು ಖರೀದಿಸಿವೆ. ಅದೇ ರೀತಿ ಯುಎಇಯಲ್ಲಿ ನಡೆಯಲಿರುವ ಟಿ20 ಲೀಗ್‌ನಲ್ಲಿ ಆರು ಫ್ರಾಂಚೈಸಿಗಳ ಪೈಕಿ ಐದು ಫ್ರಾಂಚೈಸಿಗಳು ಭಾರತದ ಪಾಲಾಗಿವೆ. ಇವುಗಳಲ್ಲಿ ಮೂರು ತಂಡಗಳು ಐಪಿಎಲ್‌ನಲ್ಲಿ ತಂಡಗಳನ್ನು ಹೊಂದಿವೆ.
ಕಠಿಣವಾದ ಬಿಸಿಸಿಐ ನಿಯಮಗಳು
ವಿದೇಶಿ ಟಿ20 ಲೀಗ್‌ಗಳಲ್ಲಿ ಭಾರತೀಯ ಆಟಗಾರರು ಭಾಗವಹಿಸಲು ಬಿಸಿಸಿಐ ಅತ್ಯಂತ ಕಠಿಣ ನಿಯಮಗಳನ್ನು ಮಾಡಿದೆ. ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ತಂಡಗಳನ್ನು ಖರೀದಿಸಿದೆ. 2019 ರಲ್ಲಿ, ಕೋಲ್ಕತ್ತಾ ಫ್ರಾಂಚೈಸ್‌ನ ಭಾಗವಾಗಿರುವ ದಿನೇಶ್ ಕಾರ್ತಿಕ್, ಸಿಪಿಎಲ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ತಂಡದ ಜೆರ್ಸಿಯಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದರು. ಇದಾದ ನಂತರ, ಬಿಸಿಸಿಐ ಕಾರ್ತಿಕ್ ಮೇಲೆ ಅಸಮಾಧಾನ ವ್ಯಕ್ತಪಡಿಸಿತು. ಬಳಿಕ ಕಾರ್ತಿಕ್ ಲಿಖಿತವಾಗಿ ಕ್ಷಮೆಯಾಚಿಸಬೇಕಾಯಿತು. ಕೆಕೆಆರ್‌ನ ಹೊಸ ಕೋಚ್ ಬ್ರೆಂಡನ್ ಮೆಕಲಮ್ ಅವರ ಮನವಿಯ ಮೇರೆಗೆ ಡ್ರೆಸ್ಸಿಂಗ್ ಕೋಣೆಗೆ ಹೋಗಿದ್ದೆ ಎಂದು ಕಾರ್ತಿಕ್ ತಮ್ಮ ಕ್ಷಮೆಯಾಚನೆಯಲ್ಲಿ ತಿಳಿಸಿದ್ದರು.