
ಮುಂದಿನ ತಿಂಗಳಿನಿಂದ ಅಂದರೆ ಅಕ್ಟೋಬರ್ 5 ರಿಂದ ಭಾರತದಲ್ಲಿ ಏಕದಿನ ವಿಶ್ವಕಪ್ (ICC ODI World Cup 2023) ಆರಂಭವಾಗುತ್ತಿದೆ. ಕ್ರಿಕೆಟ್ನ ಈ ಮಹಾ ಸಂಭ್ರಮಕ್ಕೆ ಬಿಸಿಸಿಐ (BCCI) ಎಲ್ಲಾ ರೀತಿಯ ತಯಾರಿಯಲ್ಲಿ ನಿರತವಾಗಿದೆ. ಈ ವಿಶ್ವ ಸಮರ ಭಾರತದ 10 ಸ್ಥಳಗಳಲ್ಲಿ ನಡೆಯಲ್ಲಿದ್ದು, ಈ ಐಸಿಸಿ ಈವೆಂಟ್ನಲ್ಲಿ 10 ತಂಡಗಳು ಮುಖಾಮುಖಿಯಾಗುತ್ತಿವೆ. ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಏಕಾಂಗಿಯಾಗಿ ಈ ವಿಶ್ವಕಪ್ಗೆ ಆತಿಥ್ಯವಹಿಸುತ್ತಿದೆ. ಹೀಗಾಗಿ ಈ ಪಂದ್ಯಾವಳಿಯನ್ನು ಸ್ಮರಣೀಯಗೊಳಿಸುವ ಸಲುವಾಗಿ ಬಿಸಿಸಿಐ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಅದರಲ್ಲಿ ಗೋಲ್ಡನ್ ಟಿಕೆಟ್ ಫಾರ್ ಇಂಡಿಯಾ ಐಕಾನ್ಸ್ ಯೋಜನೆಯೂ ಒಂದಾಗಿದ್ದು, ಈ ಯೋಜನೆಯಡಿಯಲ್ಲಿ ಭಾರತದ ಹಲವು ಸಾಧಕರಿಗೆ ಈ ವಿಶೇಷ ಆಹ್ವಾನವನ್ನು ನೀಡಲಾಗುತ್ತಿದೆ. ಕೆಲವು ದಿನಗಳ ಹಿಂದೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan ) ಅವರಿಗೆ ಈ ಗೋಲ್ಡನ್ ಟಿಕೆಟ್ ನೀಡಿದ್ದ ಬಿಸಿಸಿಐ, ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರಿಗೆ ಗೋಲ್ಡನ್ ಟಿಕೆಟ್ ನೀಡಿ ವಿಶ್ವಕಪ್ಗೆ ಆಹ್ವಾನ ನೀಡಿದೆ.
ಈ ಮಾಹಿತಿಯನ್ನು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತೀಯ ಕ್ರಿಕೆಟ್ ಐಕಾನ್ಗೆ ವಿಶೇಷ ಟಿಕೆಟ್ ನೀಡಿ ವಿಶ್ವಕಪ್ಗೆ ಆಹ್ವಾನ ನೀಡಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಸಚಿನ್ ತೆಂಡೂಲ್ಕರ್ ಅವರಿಗೆ ವಿಶ್ವಕಪ್ ಗೋಲ್ಡನ್ ಟಿಕೆಟ್ ನೀಡಿರುವ ಫೋಟೋವನ್ನು ಬಿಸಿಸಿಐ ಹಂಚಿಕೊಂಡಿದೆ. ಈ ವಾರದ ಆರಂಭದಲ್ಲಿ ಬಿಸಿಸಿಐ, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಗೋಲ್ಡನ್ ಟಿಕೆಟ್ ನೀಡಿ ಪಂದ್ಯಾವಳಿಗೆ ಆಹ್ವಾನ ನೀಡಿತ್ತು.
ಇನ್ನು 2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ಸಚಿನ್ ತೆಂಡೂಲ್ಕರ್ ಅವರು 2015 ರ ವಿಶ್ವಕಪ್ನ ರಾಯಭಾರಿ ಕೂಡ ಆಗಿದ್ದರು. ಹಾಗೆಯೇ ನಾಲ್ಕು ವರ್ಷಗಳ ನಂತರ ನಡೆದ 2019 ರ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ತೆಂಡೂಲ್ಕರ್, ಆ ಆವೃತ್ತಿಯ ರನ್ನರ್ ಅಪ್ ತಂಡವಾಗಿದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ಗೆ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ನೀಡಿದ್ದರು.
ಸಚಿನ್ ತೆಂಡೂಲ್ಕರ್ ಮನೆಯ ಮುಂದೆ ಶಾಸಕರಿಂದ ಪ್ರತಿಭಟನೆ! ಕಾರಣವೇನು ಗೊತ್ತಾ?
ಈ ಬಾರಿಯ ವಿಶ್ವಕಪ್ ಅಕ್ಟೋಬರ್ 5 ರಂದು ಅಹಮದಾಬಾದ್ನಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಕಳೆದ ಬಾರಿಯ ರನ್ನರ್ ಅಪ್ ತಂಡವಾಗಿದ್ದ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯಾವಳಿಯು ರೌಂಡ್-ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಲೀಗ್ ಹಂತದಲ್ಲಿ ಎಲ್ಲಾ 10 ತಂಡಗಳು ಒಮ್ಮೆ ಮುಖಾಮುಖಿಯಾಗಲಿವೆ. ಲೀಗ್ ಹಂತದಲ್ಲಿ ಅಗ್ರ ನಾಲ್ಕು ಸ್ಥಾನ ಪಡೆದ ತಂಡಗಳು ಸೆಮಿಫೈನಲ್ಗೇರಲಿವೆ. ಸೆಮಿಫೈನಲ್ನಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ನವೆಂಬರ್ 19 ರಂದು ಅಹಮದಾಬಾದ್ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹೋರಾಡಲಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:12 pm, Fri, 8 September 23