ಮೆಕಲಂ ತಲೆದಂಡಕ್ಕೆ ನಾನೇ ಕಾರಣ: ಬೆನ್ ಸ್ಟೋಕ್ಸ್!

'ಬಾಝ್​ಬಾಲ್' ಆಟದೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಸಂಚಲನ ಸೃಷ್ಟಿಸಿದ್ದ ಇಂಗ್ಲೆಂಡ್​ನ ಮುಖ್ಯ ತರಬೇತುದಾರ ಬ್ರೆಂಡನ್ ಮೆಕಲಂ ಅವರ ವಜಾ ಮತ್ತು ನಾಯಕ ಬೆನ್ ಸ್ಟೋಕ್ಸ್ ಅವರ ಹಠಾತ್ ನಿವೃತ್ತಿ ಕ್ರಿಕೆಟ್ ವಲಯದಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಆದರೆ, ಈಗ ಸ್ವತಃ ಸ್ಟೋಕ್ಸ್ ಅವರೇ ಮೌನ ಮುರಿದಿದ್ದು, "ಮೆಕಲಮ್ ಅವರ ವಜಾಕ್ಕೆ ಬೇರೆ ಯಾರೂ ಅಲ್ಲ, ನಾನೇ ನೇರ ಕಾರಣ!" ಎಂದು ಒಪ್ಪಿಕೊಂಡಿದ್ದಾರೆ.

ಮೆಕಲಂ ತಲೆದಂಡಕ್ಕೆ ನಾನೇ ಕಾರಣ: ಬೆನ್ ಸ್ಟೋಕ್ಸ್!
Ben Stokes - Brendon Mccullum
Image Credit source: Espn

Updated on: Aug 05, 2026 | 10:21 AM

ಇಂಗ್ಲೆಂಡ್ ಕ್ರಿಕೆಟ್‌ನ ಯಶಸ್ವಿ ನಾಯಕ ಬೆನ್ ಸ್ಟೋಕ್ಸ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಟೆಸ್ಟ್ ತಂಡದ ಮುಖ್ಯ ತರಬೇತುದಾರ ಹುದ್ದೆಯಿಂದ ಬ್ರೆಂಡನ್ ಮೆಕಲಂ ಅವರನ್ನು ವಜಾಗೊಳಿಸಲು ತಾನೇ ನೇರ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ಫಾರ್ ದಿ ಲವ್ ಆಫ್ ಕ್ರಿಕೆಟ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ತಮ್ಮ ದಿಢೀರ್ ನಿವೃತ್ತಿಯ ನಿರ್ಧಾರವೇ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎಂದಿದ್ದಾರೆ.

ಬೆನ್ ಸ್ಟೋಕ್ಸ್ ಹೇಳಿದ್ದೇನು?

ಸಂದರ್ಶನದಲ್ಲಿ ಸ್ಟುವರ್ಟ್ ಬ್ರಾಡ್ ಮತ್ತು ಜೋಸ್ ಬಟ್ಲರ್ ಅವರೊಂದಿಗೆ ಮಾತನಾಡುತ್ತಾ ಸ್ಟೋಕ್ಸ್ ಭಾವುಕರಾದರು. “ನಾನು ನಾಲ್ಕು ವಾರಗಳ ಹಿಂದೆ ಆ ನಿರ್ಧಾರವನ್ನು (ಅಂತರರಾಷ್ಟ್ರೀಯ ನಿವೃತ್ತಿ) ತೆಗೆದುಕೊಳ್ಳದಿದ್ದರೆ, ಬ್ರೆಂಡನ್ ಮೆಕಲಂ ಇಂದಿಗೂ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿರುತ್ತಿದ್ದರು. ಹಾಗಾಗಿ ಈ ಎಲ್ಲದಕ್ಕೂ ನಾನೇ ಕಾರಣ, ಅದೆಲ್ಲ ನನ್ನ ತಪ್ಪು!” ಎಂದು ಸ್ಟೋಕ್ಸ್ ಮುಕ್ತವಾಗಿ ಹೇಳಿದ್ದಾರೆ.

ಮೆಕಲಂ ವಜಾಕ್ಕೆ ಕಾರಣವಾದ ಅಂಶಗಳಾವುವು?

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಜುಲೈ 2026 ರಲ್ಲಿ ಬ್ರೆಂಡನ್ ಮೆಕಲಂ ಅವರನ್ನು ರೆಡ್-ಬಾಲ್ ಕೋಚ್ ಹುದ್ದೆಯಿಂದ ತೆಗೆದುಹಾಕಿತು. ಇದಕ್ಕೆ ಕಾರಣವಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ…

  • ನೈಟ್‌ಕ್ಲಬ್ ವಿವಾದ: ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮಧ್ಯದಲ್ಲಿ ಬೆನ್ ಸ್ಟೋಕ್ಸ್ ಮತ್ತು ಬೌಲರ್ ಗಸ್ ಅಟ್ಕಿನ್ಸನ್ ಕರ್ಫ್ಯೂ ನಿಯಮ ಮೀರಿ ನೈಟ್‌ಕ್ಲಬ್ ವಿವಾದದಲ್ಲಿ ಸಿಲುಕಿದ್ದರು. ಇದರ ಬೆನ್ನಲ್ಲೇ ಸ್ಟೋಕ್ಸ್ ದಿಢೀರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದರು.
  • ಬಾಝ್​ಬಾಲ್ ವೈಫಲ್ಯ: ಇಂಗ್ಲೆಂಡ್ ತಂಡದ ಆಕ್ರಮಣಕಾರಿ ಆಟದ ಶೈಲಿ ಬಾಝ್​ಬಾಲ್ ಇತ್ತೀಚಿನ ದಿನಗಳಲ್ಲಿ ಸತತ ವೈಫಲ್ಯ ಕಂಡಿತು. ಆಡಿದ ಕೊನೆಯ 10 ಟೆಸ್ಟ್‌ಗಳಲ್ಲಿ ಇಂಗ್ಲೆಂಡ್ ಗೆದ್ದಿದ್ದು ಕೇವಲ 2 ಪಂದ್ಯಗಳನ್ನು ಮಾತ್ರ. ಆ್ಶಶಸ್ ಸರಣಿಯಲ್ಲಿ 4-1 ಅಂತರದ ಸೋಲು ಮತ್ತು ನ್ಯೂಝಿಲೆಂಡ್ ವಿರುದ್ಧ ತಾಯ್ನಾಡಿನಲ್ಲೇ ಸೋತಿದ್ದು ಮೆಕಲಂ ಪಾಲಿಗೆ ಹಿನ್ನಡೆಯಾಯಿತು.

ಕೋಚ್ ಹುದ್ದೆಯಿಂದ ವಜಾಗೊಂಡಿದ್ದರೂ ಇಬ್ಬರ ನಡುವೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಈಗಲೂ ಈ ಹಿಂದಿನಂತೆ ಉತ್ತಮ ಬಾಂಧವ್ಯವಿದೆ ಎಂದು ಬೆನ್ ಸ್ಟೋಕ್ಸ್ ಸ್ಪಷ್ಟಪಡಿಸಿದ್ದಾರೆ.

ಬ್ರೆಂಡನ್ ಮೆಕಲಂ ಸದ್ಯ ಇಂಗ್ಲೆಂಡ್‌ನ ಏಕದಿನ ಮತ್ತು ಟಿ20 ತಂಡಗಳ ಮುಖ್ಯ ಕೋಚ್ ಆಗಿ ಮುಂದುವರಿದಿದ್ದಾರೆ. ಇತ್ತ 35 ವರ್ಷದ ಬೆನ್ ಸ್ಟೋಕ್ಸ್ ತಮ್ಮ ನಿವೃತ್ತಿ ಜೀವನದಿಂದ ಸಂತೋಷವಾಗಿದ್ದು, ಭವಿಷ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಕೋಚ್ ಆಗುವ ಕನಸಿನೊಂದಿಗೆ ‘ಲೆವೆಲ್ 3’ ಕೋಚಿಂಗ್ ತರಬೇತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ಹೊಸ ವಿಶ್ವ ದಾಖಲೆ ಬರೆದ ಬಾಬರ್ ಆಝಂ

ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಜೋ ರೂಟ್ ಮತ್ತೆ ನಾಯಕರಾಗಿದ್ದು, ನ್ಯೂಝಿಲೆಂಡ್‌ನ ಮಾಜಿ ಆಟಗಾರ ಸ್ಟಿಫನ್ ಫ್ಲೆಮಿಂಗ್ ಹೊಸ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

 

Loading...
Unable to load recommendations.
Follow Us