6,6,6,6,6,6.. ಆರ್​ಸಿಬಿ ಆಟಗಾರನ ಅಬ್ಬರಕ್ಕೆ ಥಂಡಾ ಹೊಡೆದ ಥಂಡರ್; ವಿಡಿಯೋ

|

Updated on: Jan 10, 2025 | 6:56 PM

Tim David's Explosive Innings: ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡವು ಸಿಡ್ನಿ ಥಂಡರ್ ವಿರುದ್ಧ ಗೆಲುವು ಸಾಧಿಸಿದೆ. ಟಿಮ್ ಡೇವಿಡ್ ಅವರ ಅದ್ಭುತ 68 ರನ್‌ಗಳ ಅಜೇಯ ಇನ್ನಿಂಗ್ಸ್‌ನಿಂದಾಗಿ ಈ ಗೆಲುವು ಸಾಧ್ಯವಾಗಿದೆ. ಡೇವಿಡ್ 38 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಸಿಡಿಸಿದರು. ಡೇವಿಡ್‌ರ ಅದ್ಭುತ ಫಾರ್ಮ್ ಆರ್‌ಸಿಬಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಏಕೆಂದರೆ ಬರುವ ಐಪಿಎಲ್​ನಲ್ಲಿ ಟಿಮ್ ಡೇವಿಡ್ ಆರ್​ಸಿಬಿ ಪರ ಆಡಲಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್​ ಬ್ಯಾಷ್​ ಲೀಗ್​ನಲ್ಲಿ ಹೋಬಾರ್ಟ್ ಹರಿಕೇನ್ಸ್‌ ತಂಡದ ಪರ ಆಡುತ್ತಿರುವ ಟಿಮ್ ಡೇವಿಡ್ ಸ್ಫೋಟಕ ಇನ್ನಿಂಗ್ಸ್ ಕಟ್ಟುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಡೇವಿಡ್, ಸಿಡ್ನಿ ಥಂಡರ್ ವಿರುದ್ಧ 38 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು. ಡೇವಿಡ್ ಅವರ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್‌ ಹಾಗೂ 4 ಬೌಂಡರಿಗಳು ಸೇರಿದ್ದವು. ಮೊದಲು ಬ್ಯಾಟ್ ಮಾಡಿದ ಸಿಡ್ನಿ ಥಂಡರ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 164 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಹೋಬರ್ಟ್ ಹರಿಕೇನ್ಸ್ ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ಡೇವಿಡ್ ತಂಡವನ್ನು ಗೆಲುವಿನ ದಡ ಮುಟ್ಟಿಸಿ ಅಜೇಯರಾಗಿ ಮರಳಿದರು.

ಡೇವಿಡ್‌ ಆಟಕ್ಕೆ ಥಂಡಾ ಹೊಡೆದ ಥಂಡರ್‌

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಥಂಡರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 164 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಹೋಬರ್ಟ್ ಹರಿಕೇನ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಹೋಬರ್ಟ್ ಆರಂಭಿಕರಾದ ಮಿಚೆಲ್ ಓವನ್ ಮತ್ತು ಮ್ಯಾಥ್ಯೂ ವೇಡ್ ಮೂರನೇ ಓವರ್‌ನಲ್ಲಿಯೇ ಔಟಾದರು. ಚಾರ್ಲಿ ವಾಕಿಮ್ ಕೂಡ 16 ರನ್​ಗಳಿಗೆ ಪತನವಾಯಿತು. ಈ ನಂತರ ಕ್ರೀಸ್​ಗೆ ಬಂದ ಟಿಮ್ ಡೇವಿಡ್ ಬಂದ ತಕ್ಷಣ ಬಿರುಸಿನ ಬ್ಯಾಟಿಂಗ್ ಮಾಡಿ ಎದುರಾಳಿ ಬೌಲರ್​ಗಳನ್ನು ಬ್ಯಾಕ್ ಫೂಟ್​ಗೆ ತಳ್ಳಿದರು. ಡೇವಿಡ್ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು ಗೆಲ್ಲಿಸಿದ ನಂತರವೇ ಮರಳಿದರು.

ಟಿಮ್ ಡೇವಿಡ್ ಅದ್ಭುತ ಫಾರ್ಮ್‌

ಟಿಮ್ ಡೇವಿಡ್ ಅವರ ಫಾರ್ಮ್ ಅದ್ಭುತವಾಗಿದೆ. ಬಿಗ್ ಬ್ಯಾಷ್ ಲೀಗ್‌ನ ಪ್ರಸಕ್ತ ಸೀಸನ್​ನಲ್ಲಿ ಈ ಆಟಗಾರ 55 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 167 ರನ್ ಗಳಿಸಿದ್ದಾರೆ. ಡೇವಿಡ್ ಅವರ ಬ್ಯಾಟ್‌ನಿಂದ ಒಟ್ಟು 14 ಸಿಕ್ಸರ್‌ಗಳು ಸಿಡಿದಿದ್ದು, ಅವರು 11 ಬೌಂಡರಿಗಳನ್ನು ಸಹ ಹೊಡೆದಿದ್ದಾರೆ. ಟಿಮ್ ಡೇವಿಡ್ ಅವರ ಸ್ಟ್ರೈಕ್ ರೇಟ್ 185 ಕ್ಕಿಂತ ಹೆಚ್ಚಿದೆ. ಟಿಮ್ ಡೇವಿಡ್ ಅವರ ಈ ರೀತಿಯ ಬ್ಯಾಟಿಂಗ್ ನೋಡಿ ಆರ್​ಸಿಬಿ ಅಭಿಮಾನಿಗಳು ಕೂಡ ತುಂಬಾ ಖುಷಿಯಾಗಿದ್ದಾರೆ. ಏಕೆಂದರೆ ಡೇವಿಡ್ ಮುಂದಿನ ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡಲಿದ್ದಾರೆ. ಅವರನ್ನು ಆರ್​ಸಿಬಿ 3 ಕೋಟಿಗೆ ಖರೀದಿಸಿದೆ.

ಪಾಯಿಂಟ್ ಪಟ್ಟಿ ಹೀಗಿದೆ

ಇನ್ನು ಬಿಗ್ ಬ್ಯಾಷ್ ಲೀಗ್‌ನ ಪಾಯಿಂಟ್ಸ್ ಟೇಬಲ್ ಬಗ್ಗೆ ಹೇಳುವುದಾದರೆ.. ಹೋಬರ್ಟ್ ಹರಿಕೇನ್ಸ್ 7 ಪಂದ್ಯಗಳಲ್ಲಿ 5 ರಲ್ಲಿ ಗೆದ್ದು ಮೊದಲ ಸ್ಥಾನದಲ್ಲಿದ್ದರೆ, ಸಿಡ್ನಿ ಸಿಕ್ಸರ್ಸ್ 4 ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಸಿಡ್ನಿ ಥಂಡರ್ 8 ಪಂದ್ಯಗಳಲ್ಲಿ 4 ಗೆದ್ದು ಮೂರನೇ ಸ್ಥಾನದಲ್ಲಿದ್ದರೆ, ಬ್ರಿಸ್ಬೇನ್ ಹೀಟ್ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ