
ಕ್ರಿಕೆಟ್ನಲ್ಲಿ ಪ್ರತಿ ಎಸೆತವೂ ಮುಖ್ಯ ಮತ್ತು ಪ್ರತಿ ಕ್ಷಣದ ಏಕಾಗ್ರತೆಯೂ ಅಷ್ಟೇ ನಿರ್ಣಾಯಕ. ಆದರೆ ಇಲ್ಲೊಬ್ಬ ಬ್ಯಾಟರ್ ಪಂದ್ಯದ ಎಸೆತವೊಂದು ಇನ್ನು ಚಾಲ್ತಿಯಲ್ಲಿರುವಾಗಲೇ , ಮೈಮರೆತು ಶ್ಯಾಡೋ ಬ್ಯಾಟಿಂಗ್ ಮಾಡಲು ಹೋಗಿ ವಿಚಿತ್ರವಾಗಿ ರನೌಟ್ ಆಗಿದ್ದಾರೆ! ಇಂತಹದ್ದೊಂದು ಅಪರೂಪದ ರನೌಟ್ಗೆ ಪಂಜಾಬ್ನಲ್ಲಿ ನಡೆಯುತ್ತಿರುವ ‘ಶೇರ್-ಎ-ಪಂಜಾಬ್ ಟಿ20 ಲೀಗ್’ ಸಾಕ್ಷಿಯಾಗಿದೆ.
ಶೇರ್-ಎ-ಪಂಜಾಬ್ ಟಿ20 ಲೀಗ್ನಲ್ಲಿ ಬಾಥಿಂಡಾ ರಾಯಲ್ಸ್ ತಂಡದ ಪರ ಆಡುತ್ತಿದ್ದ ಪಂಜಾಬ್ನ ವಿಕೆಟ್ಕೀಪರ್-ಬ್ಯಾಟರ್ ನೂರ್ವೀರ್ ಸಿಂಗ್ ಈ ವಿಚಿತ್ರ ರನ್ ಔಟ್ಗೆ ಬಲಿಯಾದ ದುರದೃಷ್ಟಕರ ಆಟಗಾರ.
ಬಾಥಿಂಡಾ ರಾಯಲ್ಸ್ ತಂಡವು ನೀಡಿದ 206 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿದ್ದಾಗ, 14ನೇ ಓವರ್ನ ಕೊನೆಯ ಎಸೆತದಲ್ಲಿ ಈ ಘಟನೆ ನಡೆಯಿತು. ಆ ಓವರ್ನ ಕೊನೆಯ ಬಾಲ್ ಆಡಿದ ನಂತರ, ನೂರ್ವೀರ್ ಸಂಪೂರ್ಣವಾಗಿ ಮರೆತಿದ್ದರು.
ಇದನ್ನೂ ಓದಿ: ಡಾಕ್ಟರ್ ಸರ್ಟಿಫಿಕೇಟ್ ಇದ್ದರೆ ಸಾಕಾ? ಸುಂದರ್ ಆಯ್ಕೆ ವಿರುದ್ಧ ಶ್ರೀಕಾಂತ್ ಕಿಡಿ
ಓವರ್ ಮುಗಿಯಿತು ಅಥವಾ ಪ್ಲೇ ಮುಕ್ತಾಯಗೊಂಡಿದೆ ಎಂಬ ಭ್ರಮೆಯಲ್ಲಿದ್ದ ಅವರು, ಕ್ರೀಸ್ನಿಂದ ಮುಂದೆ ಬಂದು ತಮ್ಮ ಬ್ಯಾಟಿಂಗ್ ಶೈಲಿಯನ್ನು ಸುಧಾರಿಸಿಕೊಳ್ಳಲು ‘ಶ್ಯಾಡೋ ಬ್ಯಾಟಿಂಗ್’ (ನೆರಳಿನಲ್ಲಿ ಬ್ಯಾಟಿಂಗ್ ಪ್ರ್ಯಾಕ್ಟೀಸ್) ಮಾಡಲು ಮುಂದಾದರು.
ನೂರ್ವೀರ್ ಸಿಂಗ್ ತಮ್ಮ ಬ್ಯಾಟಿಂಗ್ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಸಂಪೂರ್ಣವಾಗಿ ಕ್ರೀಸ್ನಿಂದ ಹೊರಗೆ ಬಂದು ನಿಂತಿದ್ದರು. ಇದನ್ನೇ ಕಾಯುತ್ತಿದ್ದ ಎದುರಾಳಿ ತಂಡದ ಬೌಲರ್, ಚೆಂಡನ್ನು ನೇರವಾಗಿ ಸ್ಟಂಪ್ಸ್ಗೆ ಎಸೆದರು. ಬೇಲ್ಸ್ ಕೆಳಗೆ ಬಿದ್ದಾಗಲೂ ನೂರ್ವೀರ್ಗೆ ತಾನು ಕ್ರೀಸ್ನಿಂದ ಹೊರಗಿದ್ದೇನೆ ಮತ್ತು ಚೆಂಡು ಇನ್ನು ಡೆಡ್ ಆಗಿಲ್ಲ ಎಂಬ ಅರಿವೇ ಇರಲಿಲ್ಲ. ಅಂತಿಮವಾಗಿ ಅಂಪೈರ್ ಅವರನ್ನು ರನೌಟ್ ಎಂದು ಘೋಷಿಸಿದಾಗ ನೂರ್ವೀರ್ಗೆ ತಾನು ಮಾಡಿದ ತಪ್ಪು ಮನವರಿಕೆಯಾಯಿತು.
ಈ ವಿಚಿತ್ರ ರನೌಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು ಆಟಗಾರನ ಬೇಜವಾಬ್ದಾರಿತನ ಎಂದರೆ, ಇನ್ನು ಕೆಲವರು ಇದನ್ನು ಕ್ರಿಕೆಟ್ ಇತಿಹಾಸದ ಅತ್ಯಂತ ವಿಚಿತ್ರ ‘ಬ್ರೈನ್ ಫೇಡ್’ ಕ್ಷಣ ಎಂದು ಕರೆಯುತ್ತಿದ್ದಾರೆ.