ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯ ನವೆಂಬರ್ 22 ರಿಂದ ಪರ್ತ್‌ನಲ್ಲಿ ಆರಂಭವಾಗಲಿದೆ. ಈ ಸರಣಿ ಭಾರತ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಈ ಸರಣಿಗಾಗಿ ಭಾರತ ತಂಡ ಮುಂದಿನ 50 ದಿನಗಳ ಕಾಲ ಆಸ್ಟ್ರೇಲಿಯಾದಲ್ಲಿ ಉಳಿಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಂ ಇಂಡಿಯಾ ಫೈನಲ್ ಆಡುತ್ತಾ ಅಥವಾ ಇಲ್ಲವಾ ಎಂಬುದು ಈ ಸರಣಿಯಿಂದ ನಿರ್ಧಾರವಾಗಲಿದೆ. ಹೀಗಾಗಿಯೇ ಟೀಂ ಇಂಡಿಯಾ ಆಟಗಾರರು ನೆಟ್ಸ್ನಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಇದೀಗ ಭಾರತ ತಂಡ ಡಬ್ಲ್ಯುಎಸಿಎ ಮೈದಾನದಲ್ಲಿ ತಾಲೀಮು ಮುಗಿಸಿದ್ದು, ಮಂಗಳವಾರದಿಂದ (ನವೆಂಬರ್ 19) ಪಂದ್ಯದ ಕಸರತ್ತಿಗೆ ಆಟಗಾರರು ಆಪ್ಟಸ್ ಕ್ರೀಡಾಂಗಣಕ್ಕೆ ತೆರಳಲಿದ್ದಾರೆ. ಏತನ್ಮಧ್ಯೆ, ಭಾರತದ 8 ಆಟಗಾರರು ತವರಿಗೆ ವಾಪಸ್ಸಾಗುತ್ತಿದ್ದಾರೆ.
ವಾಸ್ತವವಾಗಿ ಭಾರತೀಯ ಹಿರಿಯ ಕ್ರಿಕೆಟ್ ತಂಡಕ್ಕಿಂತ ಆಸ್ಟ್ರೇಲಿಯಾಕ್ಕೆ ಹೋಗವು ಮೊದಲು, ಭಾರತ ಎ ತಂಡ ಆಸ್ಟ್ರೇಲಿಯಾಕ್ಕೆ ಹೋಗಿತ್ತು. ಅಲ್ಲಿ ಭಾರತ ಎ ತಂಡವು, ಆಸ್ಟ್ರೇಲಿಯಾ ಎ ವಿರುದ್ಧ 2 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ಭಾರತ ತಂಡ 2-0 ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು. ಹೀಗಾಗಿ ಕಳೆದ 20 ದಿನಗಳಿಂದ ಆಸ್ಟ್ರೇಲಿಯಾದಲ್ಲಿದ್ದ ಭಾರತ ಎ ತಂಡದ ಕೆಲವು ಆಟಗಾರರು ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ. ವಾಸ್ತವವಾಗಿ ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಗಾಗಿ ಭಾರತ ಎ ತಂಡದಲ್ಲಿ 15 ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಈ 15 ಆಟಗಾರರಲ್ಲಿ ಕೆಲವು ಆಟಗಾರರು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಆಡಲಿರುವ ಭಾರತ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರನ್ನು ಹೊರತುಪಡಿಸಿ, ಉಳಿದ 8 ಆಟಗಾರರು ಮಾತ್ರ ಭಾರತಕ್ಕೆ ಮರಳುತ್ತಾರೆ.
ಭಾರತಕ್ಕೆ ವಾಪಸ್ಸಾಗುತ್ತಿರುವ ಆಟಗಾರರ ಪೈಕಿ, ಭಾರತ ಎ ತಂಡದ ನಾಯಕ ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ರಿಕಿ ಭುಯಿ, ಬಾಬಾ ಇಂದರ್‌ಜಿತ್, ಇಶಾನ್ ಕಿಶನ್, ಅಭಿಷೇಕ್ ಪೊರೆಲ್, ಮಾನವ್ ಸುತಾರ್ ಮತ್ತು ತನುಷ್ ಕೋಟ್ಯಾನ್ ಸೇರಿದ್ದಾರೆ. ಉಳಿದಂತೆ ಅಭಿಮನ್ಯು ಈಶ್ವರನ್, ನಿತೀಶ್ ಕುಮಾರ್ ರೆಡ್ಡಿ, ದೇವದತ್ ಪಡಿಕ್ಕಲ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಕೆಎಲ್ ರಾಹುಲ್ ಮತ್ತು ಧ್ರುವ್ ಜುರೆಲ್ ಆಸ್ಟ್ರೇಲಿಯಾದಲ್ಲಿ ಉಳಿಯಲಿದ್ದಾರೆ. ಏಕೆಂದರೆ ಈ ಎಲ್ಲಾ ಆಟಗಾರರು ಬಾರ್ಡರ್ ಗವಾಸ್ಕರ್ ಟ್ರೋಫಿಗೆ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಇವರಲ್ಲಿ, ದೇವದತ್ ಪಡಿಕ್ಕಲ್ ಈ ಮೊದಲು ಈ ಟೆಸ್ಟ್ ಸರಣಿಗೆ ತಂಡದಲ್ಲಿ ಆಯ್ಕೆಯಾಗಿರಲಿಲ್ಲ. ಆದರೆ ಶುಭ್ಮನ್ ಗಿಲ್ ಇಂಜುರಿಯಿಂದಾಗಿ ಪಡಿಕ್ಕಲ್ ಅವರನ್ನು ಆಸ್ಟ್ರೇಲಿಯಾದಲ್ಲೇ ಉಳಿಸಿಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ.
ಮೀಸಲು ಆಟಗಾರರು: ಖಲೀಲ್ ಅಹ್ಮದ್, ಮುಖೇಶ್ ಕುಮಾರ್ ಮತ್ತು ನವದೀಪ್ ಸೈನಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ