
ಕಳೆದ 2-3 ದಶಕಗಳಲ್ಲಿ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಂತಹ ಭ್ರಷ್ಟಾಚಾರದ ಹಲವು ಪ್ರಕರಣಗಳು ಹಲವು ಬಾರಿ ಬೆಳಕಿಗೆ ಬಂದಿವೆ. ಕಳೆದ 10-15 ವರ್ಷಗಳಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ಟಿ20 ಲೀಗ್‌ಗಳ ಆಗಮನದ ನಂತರ ಈ ಮ್ಯಾಚ್ ಫಿಕ್ಸಿಂಗ್ ಸರ್ವೆ ಸಾಮ್ಯಾನವಾಗಿಬಿಟ್ಟಿದೆ. ಇತ್ತೀಚೆಗಷ್ಟೇ ನಡೆದ ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶದ ಟಿ20 ಲೀಗ್ನಲ್ಲೂ ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಹಗರಣ ಮುನ್ನೆಲೆಗೆ ಬಂದಿದೆ. ಮಾಹಿತಿಯ ಪ್ರಕಾರ, ಇತ್ತೀಚೆಗೆ ಮುಕ್ತಾಯಗೊಂಡ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಹಲವಾರು ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದ್ದು, ಇದೀಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅದರ ತನಿಖೆಯನ್ನು ಪ್ರಾರಂಭಿಸಿದೆ. ಈ ತನಿಖೆಯ ವ್ಯಾಪ್ತಿಯಲ್ಲಿ ಎಷ್ಟು ಆಟಗಾರರು, ಎಷ್ಟು ತಂಡಗಳು ಮತ್ತು ಎಷ್ಟು ಪಂದ್ಯಗಳು ಇವೆ ಎಂಬುದರ ಕುರಿತು ವಿವರ ಇಲ್ಲಿದೆ
ಕಳೆದ ಹಲವಾರು ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಬಿಪಿಎಲ್ ಲೀಗ್ ಅನ್ನು ಆಯೋಜಿಸಲಾಗುತ್ತಿದೆ. ಐಪಿಎಲ್ನಂತೆ ಈ ಲೀಗ್ನಲ್ಲೂ ಪ್ರಪಂಚದಾದ್ಯಂತದ ಅನೇಕ ಸ್ಟಾರ್ ಆಟಗಾರರು ಆಡುತ್ತಿದ್ದಾರೆ. ಆದಾಗ್ಯೂ, ಈ ಲೀಗ್ ಹಲವು ಬಾರಿ ವಿವಿಧ ಕಾರಣಗಳಿಗಾಗಿ ವಿವಾದಗಳಿಗೆ ಸಿಲುಕಿದೆ. ಈ ವರ್ಷವಂತೂ ಈ ಲೀಗ್ ಸಾಕಷ್ಟು ಕಾರಣಗಳಿಗೆ ಚರ್ಚೆಯಲ್ಲಿತ್ತು. ಅನೇಕ ವಿದೇಶಿ ಆಟಗಾರರಿಗೆ ಹಣ ಪಾವತಿಸದಿರುವುದರಿಂದ ಹಿಡಿದು ಮ್ಯಾಚ್ ಫಿಕ್ಸಿಂಗ್ ಹಗರಣದವರೆಗೆ ಬಿಪಿಎಲ್ ಲೀಗ್ ಸಾಕಷ್ಟು ಕುಖ್ಯಾತಿ ಪಡೆದುಕೊಂಡಿದೆ. ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಲೀಗ್‌ನ ಕೆಲವು ಪಂದ್ಯಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನಿಖೆ ಆರಂಭಿಸಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇತ್ತೀಚೆಗೆ ತನ್ನ ಭ್ರಷ್ಟಾಚಾರ ನಿಗ್ರಹ ಘಟಕದ ಮೂಲಕ ಈ ಆರೋಪಗಳ ತನಿಖೆಯನ್ನು ಪ್ರಾರಂಭಿಸಿದೆ. ಇಷ್ಟು ಮಾತ್ರವಲ್ಲದೆ, ಈ ಆರೋಪಗಳನ್ನು ಸಾಧ್ಯವಾದಷ್ಟು ಬೇಗ ಮತ್ತು ನ್ಯಾಯಯುತ ರೀತಿಯಲ್ಲಿ ತನಿಖೆ ಮಾಡಲು ಎಸಿಯುಗೆ ಸಹಾಯ ಮಾಡಲು ಮಂಡಳಿಯು ಸ್ವತಂತ್ರ ತನಿಖಾ ತಂಡವನ್ನು ಸಹ ರಚಿಸಿದೆ.
ವರದಿಗಳ ಪ್ರಕಾರ, ಪ್ರಸ್ತುತ ಲೀಗ್‌ನಲ್ಲಿ ನಡೆದಿದ್ದ 8 ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವ ಬಗ್ಗೆ ಎಸಿಯು ತನಿಖೆ ನಡೆಸುತ್ತಿದೆ. ಇದಲ್ಲದೆ 4 ತಂಡಗಳು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ದರ್ಬಾರ್ ರಾಜ್‌ಶಾಹಿ, ಸಿಲ್ಹೆಟ್ ಸ್ಟ್ರೈಕರ್ಸ್, ಢಾಕಾ ಕ್ಯಾಪಿಟಲ್ಸ್ ಮತ್ತು ಚಿತ್ತಗಾಂಗ್ ಕಿಂಗ್ಸ್ ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತಿರುವ ತಂಡಗಳಾಗಿವೆ. ಫಿಕ್ಸಿಂಗ್ ಆರೋಪ ಹೊತ್ತಿದ್ದ ಚಿತ್ತಗಾಂಗ್ ಕಿಂಗ್ಸ್ ತಂಡ ಫೆಬ್ರವರಿ 7 ರಂದು ನಡೆದ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಆಡಿತ್ತಾದರೂ ತಂಡಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ತಂಡಗಳನ್ನು ಹೊರತುಪಡಿಸಿ ಒಟ್ಟು 10 ಆಟಗಾರರು ಈ ಲೀಗ್‌ನಲ್ಲಿ ಫಿಕ್ಸಿಂಗ್ ಮಾಡಿಕೊಂಡಿರುವ ಬಗ್ಗೆ ತನಿಖೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಅದರಲ್ಲಿ ಇಬ್ಬರು ವಿದೇಶಿಯರಾಗಿದ್ದರೆ, 8 ಮಂದಿ ಬಾಂಗ್ಲಾದೇಶದವರು. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಬಾಂಗ್ಲಾದೇಶದ 8 ಆಟಗಾರರಲ್ಲಿ 6 ಮಂದಿ ದೇಶಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ ಅಥವಾ ಆಡುತ್ತಿದ್ದಾರೆ. ಈಗ ಎಲ್ಲರ ಕಣ್ಣುಗಳು ಈ ತನಿಖೆಯ ಫಲಿತಾಂಶದ ಮೇಲೆ ನೆಟ್ಟಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ