ಇಂಗ್ಲೆಂಡ್ ತಂಡದಿಂದ ಬ್ರೈಡನ್ ಕಾರ್ಸ್ ಅಮಾನತು!

ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೂ ಮತ್ತು ನೈಟ್‌ಕ್ಲಬ್ ವಿವಾದಗಳಿಗೂ ಮುಗಿಯದ ನಂಟಿದ್ದಂತಿದೆ. ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ ಹಾಗೂ ಗಸ್ ಅಟ್ಕಿನ್ಸನ್ ಅವರಂತಹ ಸ್ಟಾರ್ ಆಟಗಾರರು ಈ ಹಿಂದೆ ಇಂತಹದ್ದೇ ಆಫ್-ಫೀಲ್ಡ್ ಘಟನೆಗಳಿಂದ ಸುದ್ದಿಯಾಗಿದ್ದರು. ಈಗ ಆ ಪಟ್ಟಿಗೆ ಇಂಗ್ಲೆಂಡ್ ಆಲ್​ ರೌಂಡರ್ ಬ್ರೈಡನ್ ಕಾರ್ಸ್ ಅವರ ಹೆಸರೂ ಸೇರಿದೆ.

ಇಂಗ್ಲೆಂಡ್ ತಂಡದಿಂದ ಬ್ರೈಡನ್ ಕಾರ್ಸ್ ಅಮಾನತು!
Brydon Carse

Updated on: Aug 25, 2026 | 1:30 PM

ಪಾಕಿಸ್ತಾನ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ವೇಗದ ಬೌಲರ್ ಬ್ರೈಡನ್ ಕಾರ್ಸ್ ಅವರನ್ನು ನೈಟ್‌ಕ್ಲಬ್ ವಿವಾದದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ತಂಡದಿಂದ ಕೈಬಿಡಲಾಗಿದೆ. ಡರ್ಬಿ ನಗರದ ನೈಟ್‌ಕ್ಲಬ್ ಒಂದರ ಹೊರಗೆ ಕಾರ್ಸ್ ಅವರ ಕೈಗೆ ಪೊಲೀಸರು ಬೇಡಿ ತೊಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಈ ಕಠಿಣ ಕ್ರಮ ಕೈಗೊಂಡಿದೆ.

ಘಟನೆ ಹಿನ್ನಲೆ ಏನು?

ಡರ್ಬಿಶೈರ್ ವಿರುದ್ಧದ ಕೌಂಟಿ ಪಂದ್ಯದಲ್ಲಿ ಡರ್ಹಾಮ್ ತಂಡದ ಭರ್ಜರಿ ಗೆಲುವಿನ ನಂತರ, ಬ್ರೈಡನ್ ಕಾರ್ಸ್ ತಮ್ಮ ಸಹ ಆಟಗಾರರೊಂದಿಗೆ ಸಂಭ್ರಮಾಚರಣೆಗಾಗಿ ‘ಮೊಲ್ಲಿ ಮಲೋನ್ಸ್ ಐರಿಶ್ ಟ್ಯಾವರ್ನ್’ ನೈಟ್‌ಕ್ಲಬ್‌ಗೆ ತೆರಳಿದ್ದರು. ಮಧ್ಯರಾತ್ರಿಯ ನಂತರ ಅಲ್ಲಿ ನಡೆದ ಗಲಾಟೆಯ ಸಂದರ್ಭದಲ್ಲಿ ಪೊಲೀಸರು ಕಾರ್ಸ್ ಅವರನ್ನು ನಿಯಂತ್ರಿಸಲು ಕೈಕೋಳ ತೊಡಿಸಿದ್ದರು.

ಅತಿಯಾದ ಮದ್ಯಪಾನ ಮತ್ತು ಸಾರ್ವಜನಿಕ ಶಾಂತಿ ಭಂಗದ ಆರೋಪದಡಿ ಅವರನ್ನು ವಶಕ್ಕೆ ಪಡೆಯಲಾಗಿತ್ತಾದರೂ, ನಂತರ ಯಾವುದೇ ಅಧಿಕೃತ ಪ್ರಕರಣ ದಾಖಲಿಸದೆ ಬಿಡುಗಡೆ ಮಾಡಲಾಯಿತು. ಈ ಘಟನೆಯ ವೇಳೆ ಇಂಗ್ಲೆಂಡ್‌ನ ಸ್ಟಾರ್ ಆಟಗಾರರಾದ ಬೆನ್ ಸ್ಟೋಕ್ಸ್ ಮತ್ತು ಮ್ಯಾಥ್ಯೂ ಪಾಟ್ಸ್ ಕೂಡ ಸ್ಥಳದಲ್ಲಿದ್ದರು ಎನ್ನಲಾಗಿದೆ.

ಇಂಗ್ಲೆಂಡ್ ತಂಡದಿಂದ ಔಟ್!

ಲಾರ್ಡ್ಸ್ ಮೈದಾನದಲ್ಲಿ ಗುರುವಾರದಿಂದ (ಆಗಸ್ಟ್ 27, 2026) ಆರಂಭವಾಗಲಿರುವ ಪಾಕಿಸ್ತಾನ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಬ್ರೈಡನ್ ಕಾರ್ಸ್​ ಆಯ್ಕೆಯಾಗಿದ್ದರು. ಇದೀಗ ನೈಟ್ ಕ್ಲಬ್ ವಿವಾದದ ಹಿನ್ನಲೆ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಅಲ್ಲದೆ ಅವರ ಬದಲಿಗೆ ಯುವ ವೇಗಿ ಸನ್ನಿ ಬೇಕರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಕರ್ಫ್ಯೂ ನಿಯಮ ಸಡಿಲಿಸಿದ ಬೆನ್ನಲ್ಲೇ ವಿವಾದ:

ವಿಶೇಷವೆಂದರೆ, ನಾಯಕ ಜೋ ರೂಟ್ ತಂಡದ ಆಟಗಾರರ ಮೇಲಿದ್ದ ಮಧ್ಯರಾತ್ರಿಯ ಕರ್ಫ್ಯೂ ನಿಯಮವನ್ನು ರದ್ದುಗೊಳಿಸಿ, “ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು” ಎಂದು ಹೇಳಿಕೆ ನೀಡಿದ ಕೇವಲ ಐದೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ. ಈ ವಿವಾದದ ಸಂಪೂರ್ಣ ತನಿಖೆಯನ್ನು ಇಸಿಬಿ ಈಗ ಸ್ವತಂತ್ರ ಕ್ರಿಕೆಟ್ ನಿಯಂತ್ರಕ ಮಂಡಳಿಗೆ  ವಹಿಸಿದೆ. ತನಿಖೆ ಮುಗಿಯುವವರೆಗೆ ಬ್ರೈಡನ್ ಕಾರ್ಸ್ ತಂಡದಿಂದ ಹೊರಗುಳಿಯಬೇಕಾಗುತ್ತದೆ.

ಇದನ್ನೂ ಓದಿ: ದೇವದತ್ ಪಡಿಕ್ಕಲ್ ಅಬ್ಬರ: ಯುವ ದಾಂಡಿಗ ಕಾಯುವುದೊಂದೇ ದಾರಿ!

ಒಟ್ಟಾರೆಯಾಗಿ ಹೇಳುವುದಾದರೆ, ಇಂಗ್ಲೆಂಡ್ ಕ್ರಿಕೆಟ್ ತಂಡ ಮತ್ತು ನೈಟ್‌ಕ್ಲಬ್ ವಿವಾದಗಳಿಗೂ ಒಂದು ಅವಿನಾಭಾವ ಸಂಬಂಧವಿರುವಂತೆ ಕಾಣಿಸುತ್ತಿದೆ. ಈ ಹಿಂದೆಯೂ ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಅವರಂತಹ ಪ್ರಮುಖ ಆಟಗಾರರು ಇದೇ ರೀತಿಯ ಆಫ್-ಫೀಲ್ಡ್ ಘಟನೆಗಳಿಂದಾಗಿ ತನಿಖೆ ಎದುರಿಸಿದ್ದರು. ಆ ಸಾಲಿಗೆ ಈಗ ಬ್ರೈಡನ್ ಕಾರ್ಸ್ ಹೊಸ ಸೇರ್ಪಡೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us