
ಕೆನಡಾದಲ್ಲಿ ನಡೆಯುತ್ತಿರುವ ಟಿ10 ಲೀಗ್‌ನ ಮೊದಲ ಮೂರು ಪಂದ್ಯಗಳಲ್ಲಿ ಬ್ಯಾಟ್ಸ್ಮನ್ಗಳ ಅಬ್ಬರ ಜೋರಾಗಿದೆ. ಅದರಲ್ಲೂ ಇಬ್ಬರು ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳಾದ ಅಲೆಕ್ಸ್ ಹೇಲ್ಸ್ ಮತ್ತು ಮೊಯೀನ್ ಅಲಿ ರನ್ಗಳ ಮಳೆ ಹರಿಸಿದ್ದಾರೆ. ಇಬ್ಬರೂ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯೊಂದಿಗೆ ತಮ್ಮ ತಂಡಗಳನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. ಈ ಲೀಗ್ನಲ್ಲಿ ಟೊರೊಂಟೊ ಸಿಕ್ಸರ್ಸ್ ತಂಡದ ಪರ ಆಡುತ್ತಿರುವ ಅಲೆಕ್ಸ್ ಹೇಲ್ಸ್ ತಮ್ಮ ಹೊಡಿಬಡಿ ಆಟದ ಮೂಲಕ ತಂಡವನ್ನು ಕೇವಲ 9.3 ಓವರ್‌ಗಳಲ್ಲಿ ಗೆಲುವಿನ ದಡ ಮುಟ್ಟಿಸಿದರು.
ಬ್ರಾಂಪ್ಟನ್ ಬ್ಲಿಟ್ಜ್ ಹಾಗೂ ಟೊರೊಂಟೊ ಸಿಕ್ಸರ್ಸ್ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬ್ರಾಂಪ್ಟನ್ ಬ್ಲಿಟ್ಜ್ ತಂಡ 136 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೊರೊಂಟೊ ಸಿಕ್ಸರ್ಸ್ ಪರ ಜೇಸನ್ ರಾಯ್ ಹಾಗೂ ಅಲೆಕ್ಸ್ ಹೇಲ್ಸ್ ತಂಡಕ್ಕೆ ಅದ್ಭುತ ಆರಂಭ ನೀಡಿದರು. ಹೇಲ್ಸ್ 32 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿದರು. ಅದರಲ್ಲೂ ಹೇಲ್ಸ್, ಬರಿ ಬೌಂಡರಿ, ಸಿಕ್ಸರ್‌ಗಳಿಂದಲೇ 80 ರನ್ ಗಳಿಸಿದರು. ಅಂದರೆ ಹೇಲ್ಸ್ ತಮ್ಮ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್‌ಗಳು ಮತ್ತು 8 ಬೌಂಡರಿಗಳನ್ನು ಬಾರಿಸಿದರು.
ಒಂದೆಡೆ ಟೊರೊಂಟೊ ಸಿಕ್ಸರ್ಸ್ ಪರ ಅಲೆಕ್ಸ್ ಹೇಲ್ಸ್ ಭರ್ಜರಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಗೆಲುವು ತಂದುಕೊಟ್ಟರೆ, ಮತ್ತೊಂದೆಡೆ ವ್ಯಾಂಕೋವರ್ ಕಿಂಗ್ಸ್ ಪರ ಆಡುತ್ತಿರುವ ಮೊಯಿನ್ ಅಲಿ ಕೂಡ ಕೇವಲ 27 ಎಸೆತಗಳಲ್ಲಿ ಅಜೇಯ 63 ರನ್ ಬಾರಿಸಿದರು. ಮೊಯಿನ್ ಅಲಿ ಅವರ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಮತ್ತು 3 ಬೌಂಡರಿ ಕೂಡ ಸೇರಿದ್ದವು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ವ್ಯಾಂಕೋವರ್ ತಂಡ 10 ಓವರ್‌ಗಳಲ್ಲಿ 156 ರನ್ ಕಲೆಹಾಕಿತು. ಇತ್ತ ಈ ಗುರಿ ಬೆನ್ನಟ್ಟಿದ ವೈಟ್ ರಾಕ್ ವಾರಿಯರ್ಸ್ ತಂಡದ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಡೇವಿಡ್ ಮಲನ್ 15 ಎಸೆತಗಳಲ್ಲಿ 45 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ವ್ಯಾಂಕೋವರ್ ತಂಡ ಪಂದ್ಯವನ್ನು 25 ರನ್‌ಗಳಿಂದ ಗೆದ್ದುಕೊಂಡಿತು.
ಕೆನಡಾ ಸೂಪರ್ 60 ಟೂರ್ನಮೆಂಟ್‌ನ ಮೊದಲ ದಿನದಂದು ಭಾರತದ ಮೂವರು ಸ್ಟಾರ್ ಆಟಗಾರರು ಸಪ್ಪೆ ಪ್ರದರ್ಶನ ನೀಡಿದರು. ಶಿಖರ್ ಧವನ್ ಖಾತೆ ತೆರೆಯಲು ವಿಫಲರಾದರೆ, ಸುರೇಶ್ ರೈನಾ ಕೇವಲ ಒಂದು ರನ್ ಗಳಿಸಿ ಔಟಾದರು. ರಿಷಿ ಧವನ್ ಕೂಡ ತಮ್ಮ ಖಾತೆ ತೆರೆಯಲು ವಿಫಲರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ