
ಕೌಂಟಿ ಚಾಂಪಿಯನ್ಶಿಪ್ನಲ್ಲಿ ಸೋಮರ್‌ಸೆಟ್ ತಂಡವು ಮತ್ತೊಂದು ಸ್ಮರಣೀಯ ಗೆಲುವನ್ನು ದಾಖಲಿಸಿದೆ. ಟಾಂಟನ್‌ನಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಗ್ಲಾಮೋರ್ಗನ್ ವಿರುದ್ಧ ಸೋಮರ್‌ಸೆಟ್ ತಂಡವು ಇನ್ನಿಂಗ್ಸ್ ಮತ್ತು 64 ರನ್‌ಗಳ ಬೃಹತ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಅದೃಷ್ಟದೊಂದಿಗೆ ಅದ್ಭುತ ಆಟ ಪ್ರದರ್ಶಿಸಿದ ಆರಂಭಿಕ ಆಟಗಾರ ಟಾಮ್ ಲ್ಯಾಮನ್‌ಬಿ ಪ್ರಮುಖ ಆಕರ್ಷಣೆಯಾಗಿದ್ದರು.
ಮೊದಲ ಇನ್ನಿಂಗ್ಸ್‌ನಲ್ಲಿ ಸೋಮರ್‌ಸೆಟ್ ಪರ ಅತ್ಯುತ್ತಮ ಬ್ಯಾಟಿಂಗ್ ನಡೆಸಿದ ಟಾಮ್ ಲ್ಯಾಮನ್‌ಬಿ 95 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ಆದರೆ ಅವರ ಈ ಇನ್ನಿಂಗ್ಸ್‌ನ ಮಧ್ಯೆ ಪಂದ್ಯವು ಅತ್ಯಂತ ನಾಟಕೀಯ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಗ್ಲಾಮೋರ್ಗನ್ ಬೌಲರ್ ಡಾನ್ ಡೌತ್‌ವೈಟ್ ಎಸೆದ ಚೆಂಡಿನಲ್ಲಿ ಲ್ಯಾಮನ್‌ಬಿ ಕೀಪರ್ಗೆ ಕ್ಯಾಚ್ ನೀಡಿ ಔಟಾಗಿದ್ದರು.
ಆದರೆ ಗ್ಲಾಮೋರ್ಗನ್ ತಂಡವು ಫೀಲ್ಡಿಂಗ್ ನಿಯಮವನ್ನು ಉಲ್ಲಂಘಿಸಿ, ಲೆಗ್ ಸೈಡ್‌ನ ಬಿಹೈಂಡ್ ಸ್ಕ್ವೇರ್‌ನಲ್ಲಿ ಮೂವರು ಫೀಲ್ಡರ್‌ಗಳನ್ನು ನಿಲ್ಲಿಸಿತ್ತು. ನಿಯಮದ ಪ್ರಕಾರ ಇಬ್ಬರಿಗಿಂತ ಹೆಚ್ಚು ಇರುವಂತಿಲ್ಲ. ಈ ತಾಂತ್ರಿಕ ತಪ್ಪಿನಿಂದಾಗಿ ಜೀವದಾನ ಪಡೆದ ಲ್ಯಾಮನ್‌ಬಿ, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿ ತಂಡವನ್ನು ಬಲಿಷ್ಠ ಸ್ಥಿತಿಗೆ ತಲುಪಿಸಿದರು.
An unusual life for Tom Lammonby pic.twitter.com/keTMtOReQl
— Rothesay County Championship (@CountyChamp) September 3, 2026
ಮೊದಲು ಬ್ಯಾಟ್ ಮಾಡಿದ ಗ್ಲಾಮೋರ್ಗನ್ ತಂಡವನ್ನು ಕೇವಲ 194 ರನ್‌ಗಳಿಗೆ ಆಲೌಟ್ ಮಾಡಿದ ಸೋಮರ್‌ಸೆಟ್, ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 441 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಲ್ಯಾಮನ್‌ಬಿ (95) ಜೊತೆಗೆ ಆರ್ಚೀ ವಾನ್ (68), ಜೋಶ್ ಥಾಮಸ್ (59) ಮತ್ತು ಜೇಮ್ಸ್ ರೀವ್ (52) ಅರ್ಧಶತಕ ಬಾರಿಸಿ ಮಿಂಚಿದರು.
247 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಗ್ಲಾಮೋರ್ಗನ್, ಸೋಮರ್‌ಸೆಟ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 183 ರನ್‌ಗಳಿಗೆ ಸರ್ವಪತನ ಕಂಡಿತು. ಜ್ಯಾಕ್ ಲೀಚ್ (3-46), ಕ್ರೇಗ್ ಓವರ್ಟನ್ (3-29) ಮತ್ತು ಲೆವಿಸ್ ಗ್ರೆಗೊರಿ (3-68) ತಲಾ 3 ವಿಕೆಟ್ ಪಡೆದು ಸೋಮರ್‌ಸೆಟ್ ತಂಡಕ್ಕೆ ಗೆಲುವು ತಂದು ಕೊಟ್ಟರು.
ಇದನ್ನೂ ಓದಿ: ಹೀಗೇಕೆ ಮಾಡಿದೆ ನೀನು? ಧೋನಿ ರಿಯಾಕ್ಷನ್ ಬಹಿರಂಗಪಡಿಸಿದ ರೈನಾ
ಈ ಭರ್ಜರಿ ಗೆಲುವಿನೊಂದಿಗೆ ಸೋಮರ್‌ಸೆಟ್ ತಂಡವು 23 ಪ್ರಮುಖ ಪಾಯಿಂಟ್‌ಗಳನ್ನು ತನ್ನದಾಗಿಸಿಕೊಂಡಿದ್ದು, ತನ್ನ ಚೊಚ್ಚಲ ಕೌಂಟಿ ಚಾಂಪಿಯನ್‌ಶಿಪ್ ಪ್ರಶಸ್ತಿಯ ಕನಸನ್ನು ಮತ್ತಷ್ಟು ಜೀವಂತವಾಗಿರಿಸಿಕೊಂಡಿದೆ.