ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿರುವ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ (International Cricket Stadium) ಕೋಚ್ ಒಬ್ಬರು ಅಚ್ಚರಿಯ ಹೆಜ್ಜೆ ಇಟ್ಟಿದ್ದಾರೆ. 23ರ ಹರೆಯದ ಕೋಚ್ ಕ್ರೀಡಾಂಗಣದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ (ಜೆಎಸ್‌ಸಿಎ) ಈಜು ತರಬೇತುದಾರ ಬಾದಲ್ ಅಂತರಾಷ್ಟ್ರೀಯ ಕ್ರೀಡಾಂಗಣದ ನಾಲ್ಕನೇ ಮಹಡಿಯಿಂದ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ನಾಲ್ಕನೇ ಮಹಡಿಯಿಂದ ಆತ್ಮಹತ್ಯೆಗೆ ಯತ್ನಿಸಿದ ಬಾದಲ್ ಅವರನ್ನು ರಾಂಚಿಯ ಪಾರಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾದಲ್ ಅವರ ಬೆನ್ನುಹುರಿಗೆ ಗಂಭೀರವಾಗಿ ಇಂಜುರಿಯಾಗಿದೆ. ಅಲ್ಲದೆ ಅವರ ದೇಹದ ಅನೇಕ ಭಾಗಗಳಿಗೂ ಇಂಜುರಿಯಾಗಿದೆ ಎಂದು ವರದಿಯಾಗಿದೆ. ಪ್ರಸ್ತುತ ಬಾದಲ್ ಅವರು ಆಕ್ಸಿಜನ್ ನೆರವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಅಲ್ಲದೆ ಅವರನ್ನು ಐಸಿಯುಗೆ ದಾಖಲಿಸಲಾಗಿದ್ದು, ವೈದ್ಯರು ಅವರ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.
ಕಾರಣ ಗೊತ್ತಿಲ್ಲ
ಬಾದಲ್ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ತಿಳಿದ ಕೂಡಲೇ ಹಟಿಯಾ ಡಿಎಸ್‌ಪಿ ಮತ್ತು ಧುರ್ವಾ ಪೊಲೀಸ್ ಠಾಣೆಗೆ ಆಗಮಿಸಿದರು. ಪೊಲೀಸರು ತಕ್ಷಣವೇ ಇಡೀ ಕ್ರೀಡಾಂಗಣವನ್ನು ತನಿಖೆ ಮಾಡಲು ಪ್ರಾರಂಭಿಸಿ, ಅಲ್ಲಿ ಕೆಲಸ ಮಾಡುವವರನ್ನು ಪ್ರಶ್ನಿಸಿದರು. ಆದರೆ ಇದುವರೆಗೆ ಬಾದಲ್ ಏಕೆ ಆತ್ಮಹತ್ಯೆಗೆ ಯತ್ನಿಸಿದರು ಎಂಬುದಕ್ಕೆ ಯಾವುದೇ ಕಾರಣವು ಬೆಳಕಿಗೆ ಬಂದಿಲ್ಲ. ಇದೀಗ ಪೊಲೀಸರು ಬಾದಲ್ ಕುಟುಂಬ ಸದಸ್ಯರ ವಿಚಾರಣೆ ನಡೆಸುತ್ತಿದ್ದಾರೆ. ಆದಾಗ್ಯೂ, ಬಾದಲ್ ಏಕೆ ಅಂತಹ ದೊಡ್ಡ ಹೆಜ್ಜೆ ಇಟ್ಟರು ಎಂದು ಇಲ್ಲಿಯವರೆಗೆ ಏನೂ ತಿಳಿದಿಲ್ಲ.
ಜಾರ್ಖಂಡ್‌ನ ಈ ಕ್ರೀಡಾಂಗಣವು ಅನೇಕ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ರಾಂಚಿಯು ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿಯ ತವರೂರು ಕೂಡ. ಈ ಕ್ರೀಡಾಂಗಣದಲ್ಲಿ ಮೂರು ಮಾದರಿಯ ಟಿ20, ಏಕದಿನ ಹಾಗೂ ಟೆಸ್ಟ್ ಪಂದ್ಯಗಳು ನಡೆದಿವೆ. ರಾಜ್ಯದ ಎರಡನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಇಲ್ಲಿದೆ. ಇದಲ್ಲದೇ ಜಮ್ಶೆಡ್‌ಪುರದಲ್ಲಿ ಕೀನನ್ ಸ್ಟೇಡಿಯಂ ಕೂಡ ಇದೆ. 2013ರಲ್ಲಿ JSCA ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆದಿತ್ತು. ಈ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದಿತ್ತು. ಕಳೆದ ವರ್ಷ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಇದೇ ಕ್ರೀಡಾಂಗಣದಲ್ಲಿ ನಡೆದಿತ್ತು.
Published On - 8:14 pm, Mon, 12 September 22