
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಡುಮ್ಮ ಎಂದು ಕರೆದು ಕಾಂಗ್ರೆಸ್ ಪಕ್ಷದ ನಾಯಕಿ ಡಾ. ಶಮಾ ಮೊಹಮ್ಮದ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ರೋಹಿತ್ ಶರ್ಮಾ ಅವರ ದೇಹದ ಬಗ್ಗೆ ಪ್ರಸ್ತಾಪಿಸಿದ ಶಮಾ, ಹಿಟ್ಮ್ಯಾನ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ ಎಂದು ಬರೆದಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆಯಾಗಿರುವ ಶಮಾ ಮೊಹಮ್ಮದ್ ಅವರ ಈ ಹೇಳಿಕೆಗೆ ಇದೀಗ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪವನ್ ಖೇರಾ ಸೂಚಿಸಿದ್ದು, ಅದರಂತೆ ಇದೀಗ ಬಾಡಿ ಶೇಮಿಂಗ್ ಬರಹವನ್ನು ಸಾಮಾಜಿಕ ಜಾಲತಾಣದಿಂದ ಅಳಿಸಿ ಹಾಕಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪವನ್ ಖೇರಾ, ತಮ್ಮ ಪಕ್ಷದ ರಾಷ್ಟ್ರೀಯ ವಕ್ತಾರೆ ಡಾ. ಶಮಾ ಮೊಹಮ್ಮದ್ ಅವರು ದಿಗ್ಗಜ ಕ್ರಿಕೆಟಿಗನ ಬಗ್ಗೆ ಮಾಡಿದ ಕಾಮೆಂಟ್‌ಗಳು ಪಕ್ಷದ ಅಧಿಕೃತ ದೃಷ್ಟಿಕೋನವನ್ನು ಪ್ರತಿನಿಧಿಸುವುದಿಲ್ಲ. ಈ ಪೋಸ್ಟ್ ಅನ್ನು ಅಳಿಸಿ ಹಾಕುವಂತೆ ಈಗಾಗಲೇ ಸೂಚಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಪೋಸ್ಟ್‌ಗಳನ್ನು ಹಾಕದಂತೆ ಸಲಹೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್, ಪಕ್ಷವು ಯಾರಿಗೂ ಇಂತಹ ಅಸಭ್ಯ ಹೇಳಿಕೆಗಳನ್ನು ನೀಡಲು ಅವಕಾಶ ನೀಡುವುದಿಲ್ಲ. ಪಕ್ಷದ ವಕ್ತಾರರಾಗಿ ಅವರು ಹೀಗೆ ಹೇಳಬಾರದಿತ್ತು. ಈ ವಿಷಯದಲ್ಲಿ ಪಕ್ಷವು ಖಂಡಿತವಾಗಿಯೂ ಅವರಿಂದ ಉತ್ತರವನ್ನು ಬಯಸುತ್ತದೆ ಎಂದು ತಿಳಿಸಿದ್ದಾರೆ.
ದುಬೈನಲ್ಲಿ ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 17 ಎಸೆತಗಳಲ್ಲಿ 15 ರನ್ ಬಾರಿಸಿ ಔಟಾಗಿದ್ದರು. ಹೀಗೆ ನಿರಾಯಾಸವಾಗಿ ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ ಅವರ ಪ್ರದರ್ಶನವನ್ನು ವಿಮರ್ಶಿಸಿ ಶಮಾ ಮೊಹಮ್ಮದ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ರೋಹಿತ್ ಶರ್ಮಾ ತುಂಬಾ ದಪ್ಪಗಿರುವ ಕ್ರೀಡಾಪಟು! ತೂಕ ಇಳಿಸಿಕೊಳ್ಳಬೇಕು! ಖಂಡಿತವಾಗಿಯೂ ಅವರು ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ ಎಂದು ಹೇಳುವೆ ಎಂದು ಶಮಾ ಮೊಹಮ್ಮದ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಇದನ್ನೂ ಓದಿ: IPL 2025: RCB ತಂಡದ ಹೊಸ ಜೆರ್ಸಿ ಫೋಟೋ ಲೀಕ್?
ಇದರ ಬೆನ್ನಲ್ಲೇ, ಹಿಂದಿನ ಆಟಗಾರರಿಗೆ ಹೋಲಿಸಿದರೆ ಅವರಲ್ಲಿ ವಿಶ್ವ ದರ್ಜೆಯದ್ದೇನಿದೆ? ಅವರು ಸಾಧಾರಣ ನಾಯಕ ಮತ್ತು ಭಾರತ ತಂಡದ ನಾಯಕನಾಗಲು ಅದೃಷ್ಟ ಪಡೆದ ಸಾಧಾರಣ ಆಟಗಾರ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ಶಮಾ ಮೊಹಮ್ಮದ್ ಅವರ ಈ ಪೋಸ್ಟ್ಗಳು ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಅವರು ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ.