
ಯಾವುದೇ ಕ್ರೀಡೆಯಾಗಲಿ ಅದರಲ್ಲಿ ಆಟಗಾರರ ನಡುವಿನ ಜಗಳ ಸರ್ವೆ ಸಾಮ್ಯಾನ. ಈ ರೀತಿಯ ಜಗಳಗಳಿಂದ ಕೆಲವೊಮ್ಮೆ ಆಟಗಾರರು ಕಠಿಣ ಶಿಕ್ಷೆಗೆ ಗುರಿಯಾಗಿ ತಮ್ಮ ವೃತ್ತಿಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಗಳಗಳು ಸಹಜವಾಗಿದ್ದರೂ ಅವು ಗಂಭೀರ ಸ್ವರೂಪ ಪಡೆದುಕೊಳ್ಳುವುದಿಲ್ಲ. ಏಕೆಂದರೆ ಈ ರೀತಿಯ ಜಗಳಗಳಾಗದಂತೆ ತಡೆಯಲು ಐಸಿಸಿ (ICC) ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಹೀಗಾಗಿಯೇ ಆಟಗಾರರು ಜಗಳಕ್ಕಿಳಿಯುವ ಮುನ್ನ ನೂರು ಭಾರಿ ಯೋಚಿಸುತ್ತಾರೆ. ಆದರೆ ಕೆಲವೊಮ್ಮೆ ಆಟಗಾರರು ತಾಳ್ಮೆ ಕಳೆದುಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಾರೆ. ಅಂತಹವರಿಗೆ ಐಸಿಸಿ ದಂಡದ ಜೊತೆಗೆ ಡಿಮೆರಿಟ್ ಅಂಕಗಳನ್ನು ನೀಡುವುದು ಹಾಗೆಯೇ ಅವರನ್ನು ಪಂದ್ಯದಿಂದ ನಿಷೇಧಿಸುವ ಕ್ರಮವನ್ನು ಕೈಗೊಳ್ಳುತ್ತದೆ.
ಇದೀಗ ಶ್ರೀಲಂಕಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಯಶಸ್ವಿ ಜೈಸ್ವಾಲ್ ಹಾಗೂ ಶ್ರೀಲಂಕಾದ ಅಸಿತಾ ಫೆರ್ನಾಂಡೋ ಪರಸ್ಪರ ಜಗಳ ಮಾಡಿಕೊಂಡಿದ್ದರು. ಇದರ ಪರಿಣಾಮವಾಗಿ ಇವರಿಬ್ಬರಿಗೆ ಐಸಿಸಿ ದಂಡದ ಜೊತೆಗೆ ಡಿಮೆರಿಟ್ ಅಂಕವನ್ನು ಸಹ ಶಿಕ್ಷೆಯಾಗಿ ವಿಧಿಸಿತ್ತು. ಆದರೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಪ್ರಕಾರ ಐಸಿಸಿ ವಿಧಿಸಿರುವ ಶಿಕ್ಷೆ ಸಾಧಾರಣವಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ಇನ್ನು ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.
ಯಶಸ್ವಿ ಜೈಸ್ವಾಲ್ಗೆ ದಂಡದ ಜೊತೆಗೆ ಡಿಮೆರಿಟ್ ಅಂಕವನ್ನು ನೀಡಿರುವ ಶಿಕ್ಷೆ ಸಾಕಾಗದು ಎಂದಿರುವ ಮಂಜ್ರೇಕರ್, ಮೈದಾನದಲ್ಲಿ ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗುವ ಆಟಗಾರರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದಿದ್ದಾರೆ. ಇದೇ ವೇಳೆ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಹಿಂದಿನ ಘಟನೆಯನ್ನು ಮಂಜ್ರೇಕರ್ ಉಲ್ಲೇಖಿಸಿದ್ದಾರೆ. ಈ ವರ್ಷ ನಡೆದ ತ್ರಿಕೋನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಭಾರತ ಎ ತಂಡದ ಪರ ಆಡಿದ್ದರು. ಆ ಸಮಯದಲ್ಲಿ ಅವರು ಶ್ರೀಲಂಕಾದ ಆಟಗಾರರ ಜೊತೆ ಜಗಳ ಮಾಡಿಕೊಂಡಿದ್ದರು. ಆ ಘಟನೆಯನ್ನು ಇಲ್ಲಿ ಪ್ರಸ್ತಾಪಿಸಿರುವ ಮಂಜ್ರೇಕರ್, ಇಂತಹ ಘಟನೆಗಳು ಮರುಕಳಿಸದಂತೆ ಐಸಿಸಿ ಮತ್ತು ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಅಂತಹ ನಡವಳಿಕೆಯನ್ನು ನಿರ್ಲಕ್ಷಿಸುವುದು ಯುವ ಆಟಗಾರರಿಗೆ ಸರಿಯಾದ ಸಂದೇಶವನ್ನು ನೀಡುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಮಂಜ್ರೇಕರ್, ‘ಈ ಹಿಂದೆ ವೈಭವ್ ಮತ್ತು ಈಗ ಜೈಸ್ವಾಲ್. ಇವರಿಬ್ಬರು ಮೈದಾನದಲ್ಲಿ ನಡೆದುಕೊಂಡಿದ್ದಕ್ಕೆ ಸರಿಯಾದ ಶಿಕ್ಷೆ ವಿಧಿಸದೆ ಹಾಗೆಯೇ ಬಿಟ್ಟರೆ, ಅದು ಅವರಿಗೆ ಅದೇ ನಡವಳಿಕೆಯನ್ನು ಪುನರಾವರ್ತಿಸಲು ಅವಕಾಶ ಮಾಡಿಕೊಂಡಂತೆ. ಇಂತಹ ಘಟನೆಗಳು ಕ್ರೀಡೆಗೆ ಒಳ್ಳೆಯದಲ್ಲ ಮತ್ತು ಆಟಗಾರರ ಭವಿಷ್ಯದ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಈ ರೀತಿಯಾಗಿ ನಿಯಮ ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮಂಜ್ರೇಕರ್ ಸಲಹೆ ನೀಡಿದ್ದಾರೆ.
Published On - 4:05 pm, Wed, 26 August 26