ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಇದೀಗ ತಮ್ಮ ನಿವೃತ್ತಿ ಹಿಂಪಡೆಯುವ ಸೂಚನೆ ನೀಡಿದ್ದಾರೆ. ನನ್ನ ಅಂತಾರಾಷ್ಟ್ರೀಯ ವೃತ್ತಿಜೀವನ ಮುಗಿದಿದೆ. ಆದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗುವುದಾದರೆ ನಾನು ಮತ್ತೆ ಆಸ್ಟ್ರೇಲಿಯಾ ಪರ ಕಣಕ್ಕಿಳಿಯಲಿದ್ದೇನೆ ಎಂದು ವಾರ್ನರ್ ತಿಳಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ಡೇವಿಡ್ ವಾರ್ನರ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಪರ ಆಡಲು ನಾನು ಮುಕ್ತನಾಗಿದ್ದೇನೆ. ಈ ಟೂರ್ನಿಗೆ ಆಯ್ಕೆಯಾಗುವುದಾದರೆ ನಾನು ಕಂಬ್ಯಾಕ್ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.
ಜನವರಿ 1, 2024 ರಂದು ಡೇವಿಡ್ ವಾರ್ನರ್ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಅಲ್ಲದೆ ಜನವರಿ 6 ರಂದು ಕೊನೆಯ ಪಂದ್ಯವಾಡುವ ಮೂಲಕ ಟೆಸ್ಟ್ ಕ್ರಿಕೆಟ್ಗೂ ಗುಡ್ ಬೈ ಹೇಳಿದ್ದರು. ಅಲ್ಲದೆ ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್ಗೂ ನಿವೃತ್ತಿ ಘೋಷಿಸಿದ್ದರು.
ಇದೀಗ ಚಾಂಪಿಯನ್ಸ್ ಟ್ರೋಫಿಗಾಗಿ ಏಕದಿನ ಸ್ವರೂಪದಿಂದ ತಮ್ಮ ನಿವೃತ್ತಿಯನ್ನು ಹಿಂಪಡೆಯಲು ಸಿದ್ಧನಿರುವುದಾಗಿ ಡೇವಿಡ್ ವಾರ್ನರ್ ತಿಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯು 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ಈ ವೇಳೆಗೆ 38 ವರ್ಷದವರಾಗಲಿರುವ ವಾರ್ನರ್ ಅವರನ್ನು ಆಯ್ಕೆಗೆ ಪರಿಗಣಿಸುವುದು ಅನುಮಾನ. ಹೀಗಾಗಿ ಡೇವಿಡ್ ವಾರ್ನರ್ ಅವರ ಕಂಬ್ಯಾಕ್ ಡೌಟ್ ಎಂದೇ ಹೇಳಬಹುದು.
ಇದಾಗ್ಯೂ ಅವರು ಫ್ರಾಂಚೈಸ್ ಕ್ರಿಕೆಟ್ ಲೀಗ್ಗಳಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಐಪಿಎಲ್ ಸೇರಿದಂತೆ ಕೆಲ ಲೀಗ್ಗಳಲ್ಲಿ ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ. ನಾನು ಇನ್ನೂ ಸ್ವಲ್ಪ ಕಾಲ ಫ್ರಾಂಚೈಸ್ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತೇನೆ ಎಂದು ಡೇವಿಡ್ ವಾರ್ನರ್ ತಿಳಿಸಿದ್ದಾರೆ. ಇದರೊಂದಿಗೆ ಮುಂಬರುವ ಐಪಿಎಲ್ ಹರಾಜಿನಲ್ಲಿ ವಾರ್ನರ್ ಹೆಸರು ಸಹ ಕಾಣಿಸಿಕೊಳ್ಳುವುದು ಖಚಿತವಾಗಿದೆ.
ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿರುವ ಡೇವಿಡ್ ವಾರ್ನರ್ ಅವರನ್ನು ಮುಂಬರುವ ಮೆಗಾ ಹರಾಜಿಗೂ ಮುನ್ನ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಿದೆ. ಅದರಂತೆ ಹರಾಜಿನಲ್ಲಿ ಕಾಣಿಸಿಕೊಂಡರೆ ಹಿರಿಯ ಆಟಗಾರನನ್ನು ಖರೀದಿಸಲು ಕೆಲ ಫ್ರಾಂಚೈಸಿಗಳು ಮುಂದಾಗಬಹುದು.