IND vs SL: ಶ್ರೀಲಂಕಾ ಪ್ರವಾಸಕ್ಕೆ ರೋಹಿತ್, ಕೊಹ್ಲಿ, ಬುಮ್ರಾ ಗೈರು..! ಕಾರಣ ಏನು ಗೊತ್ತಾ?
IND vs SL: ಟೀಂ ಇಂಡಿಯಾಕ್ಕೆ ಮರಳುವ ಮೊದಲು ಈ ಮೂವರು ಆಟಗಾರರು ತಮ್ಮ ವಿರಾಮದ ಅವಧಿಯನ್ನು ಇನ್ನಷ್ಟು ವಿಸ್ತರಿಸಲು ಬಯಸಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಹೀಗಾಗಿ ಶ್ರೀಲಂಕಾ ಪ್ರವಾಸಕ್ಕೆ ಅಲಭ್ಯರಾಗಲಿರುವ ಈ ಮೂವರು ಕ್ರಿಕೆಟಿಗರು ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳ ಸರಣಿಗೆ ತಂಡ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ಜಿಂಬಾಬ್ವೆ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಆಡುತ್ತಿರುವ ಟೀಂ ಇಂಡಿಯಾ ಆ ಬಳಿಕ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಭಾರತ ತಂಡ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಜುಲೈ 27 ರಿಂದ ಆರಂಭವಾಗಲಿರುವ ಈ ಪ್ರವಾಸಕ್ಕೆ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ಇದರ ಜೊತೆಗೆ ಟೀಂ ಇಂಡಿಯಾಕ್ಕೆ ಹೊಸ ಮುಖ್ಯ ಕೋಚ್ ಕೂಡ ಆಯ್ಕೆಯಾಗಬೇಕಿದೆ. ಈ ಮುಖ್ಯ ಕೋಚ್ ಅಧಿಕಾರಾವಧಿಯಲ್ಲಿ ಲಂಕಾ ಪ್ರವಾಸಕ್ಕೆ ಯಾವ ತಂಡ ಆಯ್ಕೆಯಾಗಲಿದೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಆದರೆ ಅದಕ್ಕೂ ಮುನ್ನ ಪ್ರಮುಖ ಸುದ್ದಿಯೊಂದು ಹೊರಬಿದ್ದಿದ್ದು, ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾದ ಮೂವರು ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಲಭ್ಯರಿರುವುದಿಲ್ಲ ಎಂದು ತಿಳಿದುಬಂದಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಟೀಂ ಇಂಡಿಯಾಕ್ಕೆ ಮರಳುವ ಮೊದಲು ಈ ಮೂವರು ಆಟಗಾರರು ತಮ್ಮ ವಿರಾಮದ ಅವಧಿಯನ್ನು ಇನ್ನಷ್ಟು ವಿಸ್ತರಿಸಲು ಬಯಸಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಹೀಗಾಗಿ ಶ್ರೀಲಂಕಾ ಪ್ರವಾಸಕ್ಕೆ ಅಲಭ್ಯರಾಗಲಿರುವ ಈ ಮೂವರು ಕ್ರಿಕೆಟಿಗರು ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳ ಸರಣಿಗೆ ತಂಡ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಜುಲೈ 27 ರಿಂದ ಆಗಸ್ಟ್ 7 ರವರೆಗೆ ಶ್ರೀಲಂಕಾ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಟಿ20 ಪಂದ್ಯಗಳು ನಡೆಯಲಿವೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ ನಂತರ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆದರೆ ಬುಮ್ರಾ ಮಾತ್ರ ಈ ಸ್ವರೂಪದಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಮುಂದಿನ ವಾರ ಆಯ್ಕೆ ಸಮಿತಿ ಸಭೆ ಸೇರಿ ಶ್ರೀಲಂಕಾ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಲಿದೆ ಎಂದು ತಿಳಿದುಬಂದಿದೆ.
ಹಿರಿಯ ಆಟಗಾರರಿಗೆ ವಿಶ್ರಾಂತಿ
ಬಿಸಿಸಿಐ ಮೂಲವೊಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿರುವ ಪ್ರಕಾರ, “ಹಿರಿಯ ಆಟಗಾರರು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಆನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ. ವರದಿಯಂತೆ ಅವರು ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಬಾಂಗ್ಲಾದೇಶದೊಂದಿಗಿನ ಸರಣಿಯ ನಂತರ, ಭಾರತ ತಂಡ ಅಕ್ಟೋಬರ್ 16 ರಿಂದ ನವೆಂಬರ್ 5 ರವರೆಗೆ ನ್ಯೂಜಿಲೆಂಡ್‌ಗೆ ಆತಿಥ್ಯ ವಹಿಸಲಿದೆ. ಈ ಮುಖಾಮುಖಿಯಲ್ಲಿ ಮೂರು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಇದರ ನಂತರ, ತಂಡವು ನವೆಂಬರ್ 8 ಮತ್ತು 15 ರ ನಡುವೆ ನಾಲ್ಕು ಟಿ20 ಪಂದ್ಯಗಳನ್ನು ಆಡಲು ದಕ್ಷಿಣ ಆಫ್ರಿಕಾಕ್ಕೆ ಹೋಗಲಿದೆ. ಇದಾದ ಬಳಿಕ ನವೆಂಬರ್ 22 ರಿಂದ ಆಸ್ಟ್ರೇಲಿಯಾದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಸಹಾಯಕ ಸಿಬ್ಬಂದಿಗೆ ಅರ್ಜಿ ಆಹ್ವಾನ
ಏತನ್ಮಧ್ಯೆ, ಭಾರತೀಯ ಮಂಡಳಿಯು ಶೀಘ್ರದಲ್ಲೇ ಭಾರತೀಯ ತಂಡದ ಸಹಾಯಕ ಸಿಬ್ಬಂದಿಗೆ ಅರ್ಜಿಗಳನ್ನು ಆಹ್ವಾನಿಸುತ್ತದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಸ್ ಮಹಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಅಧಿಕಾರಾವಧಿ ಕೊನೆಗೊಂಡಿದೆ. ಮಂಡಳಿಯ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಈಗಾಗಲೇ ಇಬ್ಬರು ಅಭ್ಯರ್ಥಿಗಳಾದ ಗೌತಮ್ ಗಂಭೀರ್ ಮತ್ತು ಡಬ್ಲ್ಯೂವಿ ರಾಮನ್ ಅವರನ್ನು ಮುಖ್ಯ ಕೋಚ್ ಹುದ್ದೆಗೆ ಸಂದರ್ಶನ ನಡೆಸಿದ್ದು, ಅಧಿಕೃತ ಘೋಷಣೆಗಾಗಿ ಮಾತ್ರ ಕಾಯಲಾಗುತ್ತಿದೆ. ಗಂಭೀರ್ ಮುಖ್ಯ ಕೋಚ್ ಸ್ಥಾನವನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ .
ಶ್ರೀಲಂಕಾ ಸರಣಿಗೆ ಹೊಸ ಕೋಚ್
ನೂತನ ಕೋಚ್ ಶ್ರೀಲಂಕಾ ಸರಣಿಗೆ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ತಮ್ಮ ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡಲು ಮಂಡಳಿಯು ಗಂಭೀರ್‌ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಿದೆ ಎಂದು ತಿಳಿದುಬಂದಿದೆ. ಗಂಭೀರ್ ಸ್ವತಃ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವುದರಿಂದ ಭಾರತ ತಂಡಕ್ಕೆ ಅವರೇ ಬ್ಯಾಟಿಂಗ್ ಕೋಚ್ ಆಗುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ