
ಕೊಲಂಬೊ ಟೆಸ್ಟ್‌ನಲ್ಲಿ (Colombo Test) ಟೀಂ ಇಂಡಿಯಾದಿಂದ ಎರಡನೇ ಶತಕ ಸಿಡಿದಿದೆ. ಈ ಟೆಸ್ಟ್ ಪಂದ್ಯದ ಮೊದಲ ದಿನದಂದು ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ಬಾರಿಸಿದರೆ, ಇದೀಗ ಎರಡನೇ ದಿನದಂದು ಧ್ರುವ್ ಜುರೇಲ್ ( Dhruv Jurel) ಕೂಡ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ಬಾರಿಸಿ ಮಿಂಚಿದ್ದಾರೆ. ಜುರೇಲ್ ಅವರ ಈ ಶತಕದ ನೆರವಿನಿಂದ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 480 ರನ್ಗಳ ಗಡಿ ದಾಟಿದೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ಜುರೇಲ್, ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಲಂಕಾ ನೆಲದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ದಾಖಲಿಸಿದ್ದಾರೆ. ಶತಕದ ಇನ್ನಿಂಗ್ಸ್ ಆಡುವ ಜೊತೆಗೆ ಜುರೇಲ್, ಪಂತ್ ಅವರೊಂದಿಗೆ ಶತಕದ ಜೊತೆಯಾಟವನ್ನು ಕಟ್ಟುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾಗಿದ್ದಾರೆ.
ಜುರೆಲ್ ಅವರ ಶತಕ ಐತಿಹಾಸಿಕವಾಗಿದ್ದು, ಶ್ರೀಲಂಕಾ ನೆಲದಲ್ಲಿ ಭಾರತೀಯ ವಿಕೆಟ್‌ಕೀಪರ್‌ನಿಂದ ಬಂದ ಮೊದಲ ಟೆಸ್ಟ್ ಶತಕ ಇದಾಗಿದೆ. ಈ ಮೊದಲು 2010 ರಲ್ಲಿ ಶ್ರೀಲಂಕಾದಲ್ಲಿ ಧೋನಿ ಬಾರಿಸಿದ್ದ 76 ರನ್ಗಳು ಭಾರತದ ವಿಕೆಟ್ ಕೀಪರ್ ಲಂಕಾ ನೆಲದಲ್ಲಿ ಕಲೆಹಾಕಿದ್ದ ಅತ್ಯಧಿಕ ಮೊತ್ತವಾಗಿತ್ತು. ಅಲ್ಲದೆ ಶ್ರೀಲಂಕಾ ವಿರುದ್ಧ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಟೆಸ್ಟ್ ಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಜುರೆಲ್. 2017 ರಲ್ಲಿ ಹಾರ್ದಿಕ್ ಪಾಂಡ್ಯ ಪಲ್ಲೆಕೆಲೆಯಲ್ಲಿ 108 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದರು.
97 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಜುರೇಲ್ ಪಂತ್ ಅವರೊಂದಿಗೆ ಶತಕದ ಜೊತೆಯಾಟ ಕಟ್ಟಿದರು. ಪಂತ್ ಔಟಾದ ಬಳಿಕ ತಂಡದ ಇನ್ನಿಂಗ್ಸ್ ನಿಭಾಯಿಸಿದ ಜುರೇಲ್, ಸುತಾರ್ ಅವರೊಂದಿಗೆ 39 ರನ್ಗಳ ಪಾಲುದಾರಿಕೆ ನಿರ್ಮಿಸಿದರು. ಜುರೆಲ್ ಅಂತಿಮವಾಗಿ ಒಂಬತ್ತು ಬೌಂಡರಿಗಳ ಸಹಾಯದಿಂದ ತಮ್ಮ ಶತಕ ಪೂರೈಸಿದರು. ಆದಾಗ್ಯೂ ಧ್ರುವ್ ಜುರೆಲ್ ತಮ್ಮ ಶತಕದ ರನ್ ಕಲೆಹಾಕುವಾಗ ರನೌಟಾಗುವುದರಲಿದ್ದರು. ಆದರೆ ಲಂಕಾ ಫಿಲ್ಡರ್ ಎಸೆದ ಥ್ರೋ ವಿಕೆಟ್‌ಗೆ ತಾಗಲಿಲ್ಲ. ಇದರಿಂದ ಜುರೇಲ್ ಔಟಾಗುವುದರಿಂದ ಪಾರಾದರು.
IND vs SL: 2ನೇ ಟೆಸ್ಟ್ನಲ್ಲೂ ಮಿಂಚಿದ ದೇವದತ್ ಪಡಿಕ್ಕಲ್
ಧ್ರುವ್ ಜುರೆಲ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ವಿದೇಶಿ ನೆಲದಲ್ಲಿ ಶತಕ ಬಾರಿಸಿದ ಏಳನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಜುರೇಲ್ಗೂ ಮೊದಲು ಕಪಿಲ್ ದೇವ್ ಮತ್ತು ರಿಷಭ್ ಪಂತ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಇತ್ತ ಜುರೆಲ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದು, ಜಡೇಜಾ ಕೊನೆಯ ಬಾರಿಗೆ 2022 ರಲ್ಲಿ ವಿದೇಶಿ ನೆಲದಲ್ಲಿ ಶತಕ ಬಾರಿಸಿದ್ದರು.
Published On - 4:41 pm, Mon, 24 August 26