
ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಮೂರನೇ ಟಿ20 ಪಂದ್ಯದಲ್ಲಿ ಗೆದ್ದ ಭಾರತ (IND vs AUS) ಕ್ರಿಕೆಟ್ ತಂಡ 2-1 ಅಂತರದಿಂದ ಸರಣಿ ವಶಕೊಂಡಿದೆ. ಇದರ ಜೊತೆಗೆ ಅನೇಕ ದಾಖಲೆಗಳನ್ನು ಕೂಡ ಮಾಡಿದೆ. ಸೂರ್ಯಕುಮಾರ್ ಯಾದವ್ ಹಾಗೂ ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಕೊನೆಯ ಒಂದು ಎಸೆತ ಬಾಕಿ ಇರುವಾಗ 6 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲೂ ರೋಹಿತ್ ಪಡೆಯ ಬೌಲಿಂಗ್ ವಿಭಾಗ ಪರಿಣಾಮಕಾರಿ ಆಗಿ ಗೋಚರಿಸಲಿಲ್ಲ. ಸ್ಪಿನ್ನರ್ಗಳು ತಮ್ಮ ಜವಾಬ್ದಾರಿ ನಿರ್ವಹಿಸಿದರೆ ವೇಗಿಗಳು ದುಬಾರಿ ಆದರು. ಜಸ್ಪ್ರೀತ್ ಬುಮ್ರಾ ಕೂಡ 4 ಓವರ್ಗೆ 50 ನೀಡಿದರು. ಇದರ ನಡುವೆ ಭಾರತದ ಫೀಲ್ಡಿಂಗ್ ಕೂಡ ಕಳಪೆ ಆಗಿತ್ತು. ಅದರಲ್ಲೂ ಈ ಬಾರಿ ಕೂಡ ದಿನೇಶ್ ಕಾರ್ತಿಕ್ (Dinesh Karthik) ಅವರ ವರ್ತನೆ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಸಿಟ್ಟನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿತು.
ಈ ಸರಣಿಯಲ್ಲಿ ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ನಡುವೆ ತಮಾಷೆಗಾಗಿ ಅನೇಕ ಬಾರಿ ಜಗಳ ನಡೆದಿದೆ. ಮೊದಲ ಟಿ20 ಪಂದ್ಯದಲ್ಲಿ ಡಿಆರ್ಎಸ್ ಮನವಿ ವಿಫಲವಾಗಿದ್ದಕ್ಕೆ ರೋಹಿತ್ ಸಿಟ್ಟಾಗಿ ನಂತರ ತಮಾಷೆಯಾಗಿ ವಿಕೆಟ್ ಕೀಪರ್ ಆಗಿದ್ದ ದಿನೇಶ್ ಕಾರ್ತಿಕ್ ಕುತ್ತಿಗೆ ಹಿಡಿದ ಘಟನೆ ನಡೆದಿತ್ತು. ದ್ವಿತೀಯ ಪಂದ್ಯದಲ್ಲಿ ಎರಡು ಎಸೆದಲ್ಲಿ ಸಿಕ್ಸ್, ಫೋರ್ ಬಾರಿಸಿ ಗೆಲುವು ತಂದುಕೊಟ್ಟ ಸಂದರ್ಭ ನಾನ್ ಸ್ಟ್ರೈಕರ್ನಲ್ಲಿದ್ದ ರೋಹಿತ್ ಶರ್ಮಾ ಅವರು ಕಾರ್ತಿಕ್ ಬಳಿ ಓಡಿ ಬಂದು ನಗುತ್ತಾ ಖುಷಿಯಲ್ಲಿ ತಬ್ಬಿಕೊಂಡರು. ಹೀಗೆ ಇವರಿಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.
ಇದೀಗ ಮೂರನೇ ಟಿ20 ಪಂದ್ಯದಲ್ಲೂ ರೋಹಿತ್–ಕಾರ್ತಿಕ್ ನಡುವಣ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದಕ್ಕೆ ಕಾರಣವಾಗಿದ್ದು ಗ್ಲೆನ್ ಮ್ಯಾಕ್ಸ್ವೆಲ್ ಅವರ ರನೌಟ್. ಯುಜ್ವೇಂದ್ರ ಚಹಲ್ ಬೌಲಿಂಗ್ನಲ್ಲಿ ಎರಡು ರನ್ಗೆಂದು ಓಡಿದ ಮ್ಯಾಕ್ಸಿ ಅಕ್ಷರ್ ಪಟೇಲ್ ಅವರ ಮಿಂಚಿನ ಎಸೆತಕ್ಕೆ ರನೌಟ್ ಆಗಿದ್ದು ವಿವಾದಾತ್ಮಕವಾಗಿತ್ತು. ಯಾಕೆಂದರೆ ಕಾರ್ತಿಕ್ ಅವರು ಅಕ್ಷರ್ ಎಸೆದ ಚೆಂಡು ಹಿಡಿದು ವಿಕೆಟ್ ತಾಗಿಸುವ ಮೊದಲೇ ಕೀಪರ್ ಗ್ಲೌಸ್ ಆಕಸ್ಮಿಕವಾಗಿ ಸ್ಟಂಪ್ಗೆ ತಾಗಿತ್ತು. ಇದರಿಂದ ಬೆಲ್ಸ್ ಲೈಟ್ ಕೂಡ ಮೂಡಿತ್ತು. ಆದರೆ ಬೆಲ್ಸ್ ಬಿದ್ದಿರಲಿಲ್ಲ.
ಭಾರತದ ಕಡೆ ಅದೃಷ್ಟ ಇದ್ದ ಕಾರಣ ಬೆಲ್ಸ್ ಇನ್ನೂ ಸ್ಟಂಪ್ನಲ್ಲಿ ಇದ್ದವು ಮತ್ತು ದಿನೇಶ್ ಕಾರ್ತಿಕ್ ಕೈಗೆ ತಾಗಿದ ಚೆಂಡು ನಂತರ ಸ್ಟಂಪ್ಗೆ ಬಡಿಯಿತು ಆಗ ಬೆಲ್ಸ್ ಹಾರಿದವು. ಟಿವಿ ರೀಪ್ಲೆಯಲ್ಲಿ ಇದು ಸ್ಪಷ್ಟವಾಗಿತ್ತು. ಹೀಗಾಗಿ ಮೂರನೇ ಅಂಪೈರ್ ಔಟ್ ಎಂದು ತೀರ್ಮಾನ ಪ್ರಕಟಿಸಿದರು. ಕಾರ್ತಿಕ್ ತಪ್ಪು ಮಾಡಿದ್ದರೂ ಇಲ್ಲಿ ಬಚಾವ್ ಆದರು. ಈ ಸಂದರ್ಭ ರೋಹಿತ್ ಮತ್ತೆ ಕಾರ್ತಿಕ್ ಮೇಲೆ ಸಿಟ್ಟುಗೊಂಡು ನಂತರ ತಮಾಷೆಯಾಗಿ ಕಾರ್ತಿಕ್ ಬಳಿಗೆ ಹೋಗಿ ಅವನ ಹೆಲ್ಮೆಟ್ಗೆ ಮುತ್ತು ನೀಡಿದ್ದಾರೆ. ಇದರ ವಿಡಿಯೋ ಇಲ್ಲಿದೆ ನೋಡಿ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 186 ರನ್ಗಳ ಸವಾಲಿನ ಮೊತ್ತ ಗಳಿಸಿತ್ತು. ಕ್ಯಾಮರೂನ್ ಗ್ರೀನ್ 52 ರನ್ ಚಚ್ಚಿದರು. ಕೊನೆಯಲ್ಲಿ ಸಿಡಿದ ಟಿಮ್ ಡೇವಿಡ್ 54 ರನ್ ಗಳಿಸಿದರು. 2 ಬೌಂಡರಿ, 4 ಸಿಕ್ಸರ್ ಸಿಡಿಸಿದರು. ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ 28 ರನ್ ಬಾರಿಸಿದರು. ಟಾರ್ಗೆಟ್ ಬೆನ್ನಟ್ಟಿದ ಭಾರತ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ 104 ರನ್ಗಳ ಜೊತೆಯಾಟದ ನೆರವಿನಿಂದ ಗೆಲುವಿನ ನಗೆ ಬೀರಿತು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೂಡ 16 ಬಾಲ್ಗಳಲ್ಲಿ 25 ರನ್ ಗಳಿಸಿದರು. ಸೂರ್ಯ ಪಂದ್ಯಶ್ರೇಷ್ಠ ಹಾಗೂ ಅಕ್ಷರ್ ಸರಣಿಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.
Published On - 10:47 am, Mon, 26 September 22