IND vs AUS: ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ ಹಿಂದಿಕ್ಕಿ ಇತಿಹಾಸ ನಿರ್ಮಿಸಿದ ಭಾರತ: ಏನಿದು ದಾಖಲೆ?
India vs Australia, 3rd T20I: ಆಸ್ಟ್ರೇಲಿಯಾ ವಿರುದ್ಧ ನಡೆದ ತೃತೀಯ ಟಿ20 ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ರೋಹಿತ್ ಪಡೆ ಪಾಕಿಸ್ತಾನ ತಂಡವನ್ನು ಹಿಂದಿಕ್ಕಿ ವಿಶೇಷ ದಾಖೆಯನ್ನು ನಿರ್ಮಿಸಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ತೃತೀಯ ಟಿ20 ಪಂದ್ಯದಲ್ಲಿ ಭಾರತ (India vs Australia) ರೋಚಕ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಸ್ಫೋಟಕ ಆಟ ಹಾಗೂ ವಿರಾಟ್ ಕೊಹ್ಲಿಯ (Virat Kohli) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿರ್ಣಾಯಕ ಕದನದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಜಯ ಕಂಡು 2-1 ಅಂತರದಿಂದ ಟಿ20 ಸರಣಿ ಬಾಚಿಕೊಂಡಿದೆ. ಅಂತಿಮ ಪಂದ್ಯದಲ್ಲೂ ಭಾರತೀಯ ಬೌಲರ್ಗಳು ರನ್ ಹರಿಬಿಟ್ಟರು. ಸ್ಪಿನ್ನರ್ಗಳು ಉತ್ತಮ ಪ್ರದರ್ಶನ ತೋರಿದರೆ ವೇಗಿಗಳು ಪುನಃ ದುಬಾರಿ ಆದರು. ಆದರೆ, ಭಾರತದ ಬ್ಯಾಟರ್ಗಳು ಮೈಚಳಿ ಬಿಟ್ಟು ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ರೋಹಿತ್ ಪಡೆ ಪಾಕಿಸ್ತಾನ ತಂಡವನ್ನು ಹಿಂದಿಕ್ಕಿ ವಿಶೇಷ ದಾಖೆಯನ್ನು ನಿರ್ಮಿಸಿದೆ.
ಕಳೆದ ವರ್ಷ 2020ರ ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನದ 20 ಗೆಲುವಿನ ದಾಖಲೆಯನ್ನು ಭಾರತ ತಂಡವು ಇದೀಗ ಮುರಿದಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಮೂರನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ಪಾಕಿಸ್ತಾನ 29 ಟಿ20 ಪಂದ್ಯಗಳಲ್ಲಿ 20 ಗೆಲುವಿನೊಂದಿಗೆ ಮುಗಿಸಿದ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಗೆಲುವುಗಳ ದಾಖಲೆಯನ್ನು ಹೊಂದಿತ್ತು. ಇದೀಗ ಭಾರತ 29 ಟಿ20 ಪಂದ್ಯಗಳನ್ನು ಆಡಿದ್ದು, 21ರಲ್ಲಿ ಗೆದ್ದಿದೆ. ಅಲ್ಲದೆ ಈ ಸರಣಿ ಗೆಲುವಿನೊಂದಿಗೆ, ರೋಹಿತ್ ಶರ್ಮಾ ಪೂರ್ಣ ಸಮಯದ ನಾಯಕನಾಗಿ ಟಿ20 ದ್ವಿಪಕ್ಷೀಯ ಸರಣಿಯಲ್ಲಿ ಅಜೇಯ ಓಟವನ್ನು ಕಾಯ್ದುಕೊಂಡರು.
ಇನ್ನು ಈ ಗೆಲುವಿನೊಂದಿಗೆ ಭಾರತ ಪರ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕರ ಪಟ್ಟಿಯಲ್ಲಿ ರೋಹಿತ್ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ರೋಹಿತ್ 32 ಪಂದ್ಯಗಳಲ್ಲಿ ಗೆದ್ದು ಜಂಟಿ ಸ್ಥಾನ ಹಂಚಿಕೊಂಡಿದ್ದರು. ಇದೀಗ 33 ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ರೋಹಿತ್ ಎರಡನೇ ಸ್ಥಾನಕ್ಕೇರಿದ್ದಾರೆ. 42 ಟಿ20 ಪಂದ್ಯಗಳನ್ನು ಗೆದ್ದಿರುವ ಮಹೇಂದ್ರ ಸಿಂಗ್ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. ಅಲ್ಲದೆ 2021ರ ಬಳಿಕ ಚೇಸಿಂಗ್ನಲ್ಲಿ ಭಾರತ ಆಡಿದ 14 ಪಂದ್ಯಗಳ ಪೈಕಿ 13 ರಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯದಲ್ಲಷ್ಟೆ ಸೋತಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 186 ರನ್‌ಗಳ ಸವಾಲಿನ ಮೊತ್ತ ಗಳಿಸಿತ್ತು. ಅಬ್ಬರದ ಬ್ಯಾಟಿಂಗ್ ಮಾಡಿದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ 21 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಮೇತ 52 ರನ್ ಚಚ್ಚಿದರು. ಮಧ್ಯಮ ಕ್ರಮಾಂಕದಲ್ಲಿ ಜೋಶ್ ಇಂಗ್ಲಿಸ್ 24 ರನ್ ಬಾರಿಸಿದರೆ, ಕೊನೆಯಲ್ಲಿ ಸಿಡಿದ ಟಿಮ್ ಡೇವಿಡ್ 54 ರನ್ ಗಳಿಸಿದರು. 2 ಬೌಂಡರಿ, 4 ಸಿಕ್ಸರ್ ಸಿಡಿಸಿದರು. ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ 28 ರನ್ ಬಾರಿಸಿ ತಂಡಕ್ಕೆ ನೆರವಾದರು. ಭಾರತ ಪರ ಅಕ್ಷರ್ ಪಟೇಲ್ 3 ವಿಕೆಟ್ ಕಿತ್ತರು.
ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ಕೆಎಲ್ ರಾಹುಲ್, ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಆದರೆ, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ 104 ರನ್‌ಗಳ ಜೊತೆಯಾಟ ಆಡಿದ್ದು ತಂಡದ ಗೆಲುವಿಗೆ ನೆರವಾಯಿತು. ಕೊಹ್ಲಿ ಮಹತ್ವದ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಬೀಸಿ 33 ನೇ ಅರ್ಧಶತಕ ಸಿಡಿಸಿದರು. 4 ಸಿಕ್ಸರ್, 3 ಬೌಂಡರಿ ಸಮೇತ 63 ರನ್ ಗಳಿಸಿದರು. ಸೂರ್ಯಕುಮಾರ್ ಆಸ್ಟ್ರೇಲಿಯಾ ಬೌಲರ್ಗಳ ಬೆಂಡೆತ್ತಿದರು. 5 ಬೌಂಡರಿ, 5 ಸಿಕ್ಸರ್ ಸಮೇತ 69 ರನ್ ಗಳಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 16 ಬಾಲ್‌ಗಳಲ್ಲಿ 25 ರನ್ ಗಳಿಸಿ ಭಾರತಕ್ಕೆ 19.5 ಓವರ್ನಲ್ಲಿ ಜಯ ತಂದುಕೊಟ್ಟರು.
Published On - 8:15 am, Mon, 26 September 22