Ind vs Aus Playing XI: ಟಾಸ್ ಗೆದ್ದ ಭಾರತ.. ಪಂತ್ ಔಟ್, ಭುವಿ ಇನ್; ಉಭಯ ತಂಡಗಳು ಹೀಗಿವೆ
Ind vs Aus Playing XI: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದಿದ್ದು, ನಿರೀಕ್ಷೆಯಂತೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ (India vs Australia) ನಡುವಿನ ಮೂರು ಪಂದ್ಯಗಳ ಟಿ20 ಸರಣಿ ನಿರ್ಣಾಯಕ ಹಂತ ತಲುಪಿದೆ. ಉಭಯ ತಂಡಗಳ ನಡುವಿನ ಸರಣಿ 1-1 ರಿಂದ ಡ್ರಾಗೊಂಡಿದ್ದು, ಇಂದಿನ ಪಂದ್ಯ ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈಗ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಆರಂಭವಾಗಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಟಾಸ್ ಗೆದ್ದಿದ್ದು, ನಿರೀಕ್ಷೆಯಂತೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ರಿಷಬ್ ಪಂತ್ ಔಟ್
ಅಂದುಕೊಂಡಂತೆ ಟೀಂ ಇಂಡಿಯಾ ಈ ಪಂದ್ಯಕ್ಕೆ ಒಂದೇ ಒಂದು ಬದಲಾವಣೆ ಮಾಡಿದೆ. ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ತಂಡಕ್ಕೆ ಮರಳಿದ್ದಾರೆ. ಕಳೆದ ಪಂದ್ಯದಲ್ಲಿಯೇ ಸ್ಥಾನ ಪಡೆದಿದ್ದ ರಿಷಭ್ ಪಂತ್ಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಹೀಗಾಗಿ ಅವರ ಬದಲು ಭುವಿಗೆ ಅವಕಾಶ ನೀಡಲಾಗಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯದಲ್ಲೂ ಬದಲಾವಣೆಗಳಾಗಿದ್ದು, ಶಾನ್ ಅಬಾಟ್ ಬದಲು, ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.
ಹೂಡಾ ಇಂಜುರಿ
ಅಂದಹಾಗೆ, ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಗಾಯದ ಸಮಸ್ಯೆಗೆ ತುತ್ತಾಗಿದೆ. ಗಾಯದ ಕಾರಣ ಈ ಪಂದ್ಯದಲ್ಲಿ ಆಲ್‌ರೌಂಡರ್ ದೀಪಕ್ ಹೂಡಾ ಆಯ್ಕೆಗೆ ಲಭ್ಯರಿರಲಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ. ಬಿಸಿಸಿಐ ಪ್ರಕಾರ, ಹೂಡಾ ಅವರಿಗೆ ಬೆನ್ನು ನೋವಿನ ಸಮಸ್ಯೆ ಇದ್ದು, ಈ ಗಾಯ ಎಷ್ಟು ಗಂಭೀರವಾಗಿದೆ ಮತ್ತು ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಮಂಡಳಿಯು ಮುಂದಿನ ದಿನಗಳಲ್ಲಿ ತಿಳಿಸಲಿದೆ.
ಮೊದಲ ಬಾರಿಗೆ ಸರಣಿಯಲ್ಲಿ ಟೆನ್ಷನ್
ರೋಹಿತ್ ಶರ್ಮಾ ಪೂರ್ಣಾವಧಿ ನಾಯಕರಾದ ಬಳಿಕ ಇದೇ ಮೊದಲ ಬಾರಿಗೆ ಭಾರತ ತಂಡ ಟಿ20 ಸರಣಿಯಲ್ಲಿ ಸಮಬಲ ಸಾಧಿಸಿದ್ದು, ಸರಣಿ ಗೆಲ್ಲಲು ಕೊನೆಯ ಪಂದ್ಯದವರೆಗೂ ಹೋರಾಟ ನಡೆಸಬೇಕಿದೆ. ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆದಿದ್ದು, ಆಸ್ಟ್ರೇಲಿಯಾ 4 ವಿಕೆಟ್‌ಗಳಿಂದ ಗೆದ್ದಿದೆ. ನಂತರ ನಾಗ್ಪುರದಲ್ಲಿ ನಡೆದ ಕೇವಲ 8 ಓವರ್ ಗಳ ಪಂದ್ಯದಲ್ಲಿ ಟೀಂ ಇಂಡಿಯಾ ಕಮ್ಬ್ಯಾಕ್ ಮಾಡಿ 6 ವಿಕೆಟ್ಗಳ ಜಯ ಸಾಧಿಸಿತು.
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್.
ಆಸ್ಟ್ರೇಲಿಯಾ: ಆರನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಡೇನಿಯಲ್ ಸ್ಯಾಮ್ಸ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ.
Published On - 6:54 pm, Sun, 25 September 22