Ind vs Aus: ಸೂರ್ಯ- ಕೊಹ್ಲಿ ಅರ್ಧಶತಕ.. ಸರಣಿ ಗೆದ್ದ ಭಾರತ..! ಕಾಂಗರೂಗಳಿಗೆ ಸೋಲಿನ ವಿದಾಯ
Ind vs Aus: ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ T20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾಗೆದ್ದು 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.
ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ (India and Australia) ನಡುವಿನ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾಗೆದ್ದು 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ವಿರಾಟ್ ಕೊಹ್ಲಿ (Virat Kohli) ಮತ್ತು ಸೂರ್ಯಕುಮಾರ್ ಯಾದವ್ (Suryakumar Yadav) ಭಾರತ ತಂಡದ ಗೆಲುವಿನಲ್ಲಿ ಬ್ಯಾಟ್‌ನೊಂದಿಗೆ ಪ್ರಮುಖ ಪಾತ್ರ ವಹಿಸಿದರು. ಇದಕ್ಕೂ ಮುನ್ನ ಅಕ್ಷರ್ ಪಟೇಲ್ ತಮ್ಮ ಮಹತ್ವದ ಜವಾಬ್ದಾರಿಯನ್ನು ಚೆಂಡಿನ ಮೂಲಕ ನಿಭಾಯಿಸಿದ್ದರು. ಈ ಮೊದಲು ಭಾರತ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಆಸ್ಟ್ರೇಲಿಯಾ ನಿಗದಿತ ಓವರ್‌ನಲ್ಲಿ 7 ವಿಕೆಟ್‌ಗೆ 186 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ಕೊನೆಯ ಓವರ್‌ನಲ್ಲಿ ಗೆಲುವಿನ ಗುರಿ ಸಾಧಿಸಿತು. ಹಾರ್ದಿಕ್ ಪಾಂಡ್ಯ ಅಂತಿಮವಾಗಿ ಗೆಲುವಿನ ಬೌಂಡರಿ ಬಾರಿಸಿ ಭಾರತಕ್ಕೆ 6 ವಿಕೆಟ್‌ಗಳ ಜಯ ತಂದುಕೊಟ್ಟರು.
ನಾಯಕ-ಉಪನಾಯಕನ ಫ್ಲಾಪ್ ಶೋ
ಟಾರ್ಗೆಟ್ ದೊಡ್ಡದಿದ್ದರೂ ಹೈದರಾಬಾದ್ ಸ್ಟೇಡಿಯಂನಲ್ಲಿ ಬೀಳುವ ಇಬ್ಬನಿಯನ್ನು ಪರಿಗಣಿಸಿ, ಬ್ಯಾಟಿಂಗ್ ಸುಲಭ ಎಂದು ನಿರೀಕ್ಷಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ವೇಗದ ಆರಂಭದತ್ತ ಚಿತ್ತ ನೆಟ್ಟರೂ ಮೊದಲ ಓವರ್ನಲ್ಲೇ ಕೆಎಲ್ ರಾಹುಲ್ ಪೆವಿಲಿಯನ್ಗೆ ಮರಳಿದರೆ, ನಾಯಕ ರೋಹಿತ್ ಶರ್ಮಾ 2 ಬೌಂಡರಿ ಹಾಗೂ 1 ಸಿಕ್ಸರ್ ಗಳಿಸಿ ಪ್ಯಾಟ್ ಕಮಿನ್ಸ್ಗೆ ಬಲಿಯಾದರು. ಹೀಗಾಗಿ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತು ಭಾರತದ ಅತ್ಯುತ್ತಮ ಟಿ20 ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರ ಮೇಲೆ ಜವಾಬ್ದಾರಿ ಬಿತ್ತು.
ಸೂರ್ಯ ಸೂಪರ್ ಶೋ, ಕೊಹ್ಲಿ ಜೊತೆಯಾಟ
ಕೊಹ್ಲಿ ಆರಂಭದಲ್ಲಿ ಆಕ್ರಮಣಕಾರಿ ಹೊಡೆತಗಳನ್ನು ಆಡುವ ಮೂಲಕ ರನ್ ವೇಗವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ನಂತರ ಸೂರ್ಯಕುಮಾರ್ ಯಾದವ್ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡು ಒಬ್ಬೊಬ್ಬ ಆಸ್ಟ್ರೇಲಿಯನ್ ಬೌಲರ್‌ಗಳ ಮೇಲೆ ಮೈದಾನದ ಪ್ರತಿಯೊಂದು ಭಾಗದಲ್ಲೂ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಸಿದರು.
ಸೂರ್ಯ ಕೇವಲ 29 ಎಸೆತಗಳಲ್ಲಿ ಮಿಡ್‌ವಿಕೆಟ್ ಮತ್ತು ಲಾಂಗ್ ಆಫ್‌ನ ಹೊರಗೆ ಸತತ ಎರಡು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಸ್ಫೋಟಕ ಅರ್ಧಶತಕವನ್ನು ಪೂರ್ಣಗೊಳಿಸಿದರು.
14ನೇ ಓವರ್ನ ಕೊನೆಯ ಎಸೆತದಲ್ಲಿ ಹೇಜಲ್ವುಡ್, ಸೂರ್ಯ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಆಘಾತ ನೀಡಿದರು. ಇಲ್ಲಿಂದ ರನ್‌ಗಳ ವೇಗವೂ ಕಡಿಮೆಯಾಗಿ ಒತ್ತಡವೂ ಹೆಚ್ಚಾಗತೊಡಗಿತು. ಕೊಹ್ಲಿ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕ ಕೊನೆಯ ಓವರ್‌ನಲ್ಲಿ ಭಾರತಕ್ಕೆ 11 ರನ್‌ಗಳ ಅಗತ್ಯವಿತ್ತು. ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಕೊಹ್ಲಿ ನಂತರದ ಎಸೆತದಲ್ಲಿ ಔಟಾದರು. ಆ ಬಳಿಕ ಐದನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಹಾರ್ದಿಕ್ ತಂಡಕ್ಕೆ ಅದ್ಭುತ ಜಯ ತಂದುಕೊಟ್ಟರು.
ಕ್ಯಾಮರೂನ್ ಗ್ರೀನ್ ಅಬ್ಬರ
ಸರಣಿ ನಿರ್ಧಾರಕ ಪಂದ್ಯಕ್ಕೆ ಆಸ್ಟ್ರೇಲಿಯ ತಂಡ ಕೇಲವು ಒಂದು ಬದಲಾವಣೆ ಮಾಡಿ ಬಹುತೇಕ ಹಳೆಯ ತಂಡವನ್ನೇ ಕಣಕ್ಕಿಳಿಸಿತು. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಂತೆ, ಯುವ ಆರಂಭಿಕ ಆಟಗಾರ ಕ್ಯಾಮರೂನ್ ಗ್ರೀನ್ ಮತ್ತೊಮ್ಮೆ ವಿನಾಶವನ್ನು ಉಂಟುಮಾಡಿದರು. ಮೊದಲ ಓವರ್‌ನಿಂದಲೇ, ಗ್ರೀನ್ ಪ್ರತಿ ಭಾರತೀಯ ಬೌಲರ್‌ಗಳನ್ನು ಗುರಿಯಾಗಿಸಿಕೊಂಡು ಬೌಂಡರಿ, ಸಿಕ್ಸರ್ ಬಾರಿಸಿದರು. ಹೀಗಾಗಿ 5 ಓವರ್‌ಗಳಲ್ಲಿ ಕೇವಲ 19 ಎಸೆತಗಳಲ್ಲಿ ಭಾರತದ ವಿರುದ್ಧ ವೇಗದ ಅರ್ಧಶತಕವನ್ನು ದಾಖಲಿಸಿದರು.
ಮತ್ತೆ ಕಮಾಲ್ ಮಾಡಿದ ಅಕ್ಷರ್ ಪಟೇಲ್
ಗ್ರೀನ್ ಅಬ್ಬರದ ಇನ್ನಿಂಗ್ಸ್ನಿಂದಾಗಿ ಆಸ್ಟ್ರೇಲಿಯಾ ಕೇವಲ 4 ಓವರ್‌ಗಳಲ್ಲಿ 56 ರನ್ ಗಳಿಸಿತು ಮತ್ತು ಪವರ್‌ಪ್ಲೇನಲ್ಲಿ ಒಟ್ಟು 66 ರನ್ ಗಳಿಸಿತು. ಐದನೇ ಓವರ್‌ನಲ್ಲಿ ಗ್ರೀನ್ ಅವರ ವಿಕೆಟ್ ಪತನದೊಂದಿಗೆ, ರನ್ ವೇಗಕ್ಕೆ ಸ್ವಲ್ಪ ಕಡಿವಾಣ ಬಿತ್ತು. ಬಳಿಕ ಅಕ್ಷರ್ ಪಟೇಲ್ ದಾಳಿಗಿಳಿದು ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕವನ್ನು ಸಂಪೂರ್ಣ ಕಟ್ಟಿಹಾಕಿದರು. ಎಡಗೈ ಸ್ಪಿನ್ನರ್ ಮತ್ತೆ ಸರಣಿಯ ಮೊದಲ ಎರಡು ಪಂದ್ಯಗಳಂತೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ತನ್ನ ವೇಗದಿಂದ ತೊಂದರೆಯನ್ನು ಸೃಷ್ಟಿಸಿದರು. ವೇಗದ ಆರಂಭದ ಹೊರತಾಗಿಯೂ ಆಸ್ಟ್ರೇಲಿಯಾ ತಂಡ 17 ಓವರ್‌ಗಳಲ್ಲಿ 140 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಡೇವಿಡ್ ಸೂಪರ್ ಬ್ಯಾಟಿಂಗ್
ಆದರೆ, ಮತ್ತೊಮ್ಮೆ ಕೊನೆಯ ಓವರ್‌ನಲ್ಲಿ ಭಾರತ ತಂಡದ ಕಳಪೆ ಬೌಲಿಂಗ್ ಮುನ್ನೆಲೆಗೆ ಬಂದಿತು. ಕೊನೆಯ ಮೂರು ಓವರ್‌ಗಳಲ್ಲಿ ಟಿಮ್ ಡೇವಿಡ್ ಮತ್ತು ಡೇನಿಯಲ್ ಸ್ಯಾಮ್ಸ್ ಒಟ್ಟಾಗಿ 46 ರನ್ ಕಲೆಹಾಕಿದರು. ಈ ಸರಣಿಯಲ್ಲಿ ಪದಾರ್ಪಣೆ ಮಾಡಿದ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಕೇವಲ 24 ಎಸೆತಗಳಲ್ಲಿ ಚೊಚ್ಚಲ ಟಿ20 ಅರ್ಧಶತಕ ಗಳಿಸಿದರು. ಡೇವಿಡ್ 18 ಮತ್ತು 19 ನೇ ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಮೇಲೆ ಪ್ರಚಂಡ ಸಿಕ್ಸರ್ ಬಾರಿಸಿದರು.
Published On - 10:45 pm, Sun, 25 September 22