‘ಕೊಹ್ಲಿ ಬಿಟ್ಟು ಮತ್ತ್ಯಾರಿಗೂ ಆ ರೀತಿ ಸಿಕ್ಸರ್ ಹೊಡೆಯಲು ಸಾಧ್ಯವಿಲ್ಲ’..! ಪಾಕ್ ವೇಗಿ ಹ್ಯಾರಿಸ್ ರೌಫ್

| Updated By: ಪೃಥ್ವಿಶಂಕರ

Updated on: Dec 01, 2022 | 11:40 AM

Virat Kohli: ಆ ಪಂದ್ಯದಲ್ಲಿ ಅದರಲ್ಲೂ ಅಷ್ಟು ಒತ್ತಡದ ಸಂದರ್ಭದಲ್ಲಿ ಕೊಹ್ಲಿ ಆ ಸಿಕ್ಸರ್‌ಗಳನ್ನು ಹೊಡೆದ ರೀತಿ ನೋಡಿದರೆ ಬೇರೆ ಯಾವುದೇ ಆಟಗಾರರಿಗೆ ಆ ಸಿಕ್ಸರ್‌ಗಳನ್ನು ಹೊಡೆಯಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ.

‘ಕೊಹ್ಲಿ ಬಿಟ್ಟು ಮತ್ತ್ಯಾರಿಗೂ ಆ ರೀತಿ ಸಿಕ್ಸರ್ ಹೊಡೆಯಲು ಸಾಧ್ಯವಿಲ್ಲ’..! ಪಾಕ್ ವೇಗಿ ಹ್ಯಾರಿಸ್ ರೌಫ್
Virat Kohli
Follow us on

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ (T20 World Cup) ಮುಗಿದು ಈಗಾಗಲೇ ಎರಡು ವಾರಗಳಿಗೂ ಹೆಚ್ಚು ಸಮಯ ಕಳೆದಿದೆ. ಹಾಗೆಯೇ ಟೀಂ ಇಂಡಿಯಾ (Team India) ಟೂರ್ನಿಯಿಂದ ಹೊರಬಿದ್ದು 20 ದಿನಗಳು ಕಳೆದಿವೆ. ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ಎದುರು 10 ವಿಕೆಟ್​ಗಳ ಹೀನಾಯ ಸೋಲು ಕಂಡಿದ್ದ ರೋಹಿತ್ ಪಡೆ ಟೂರ್ನಿಯಿಂದ ಹೊರಬಿದ್ದಿತ್ತು. ಇದರ ಹೊರತಾಗಿಯೂ, ಈ ವಿಶ್ವಕಪ್ ಭಾರತೀಯ ಕ್ರಿಕೆಟ್‌ಗೆ ಮಾತ್ರವಲ್ಲ, ವಿಶ್ವ ಕ್ರಿಕೆಟ್‌ಗೂ ಕೆಲವು ಸ್ಮರಣೆಯ ನೆನಪುಗಳನ್ನು ಸೃಷ್ಟಿಷಿತು. ಅವುಗಳಲ್ಲಿ ಪ್ರಮುಖವಾದದ್ದು, ಕೊಹ್ಲಿ ಬಾರಿಸಿದ್ದ ಆ ಎರಡು ಸಿಕ್ಸರ್​ಗಳು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಾಕ್ ಬೌಲರ್ ಹ್ಯಾರಿಸ್ ರೌಫ್ (Haris Rauf) ಎಸೆದ 19ನೇ ಓವರ್​ನ ಕೊನೆಯ ಎರಡು ಎಸೆತಗಳನ್ನು ಕಿಂಗ್ ಕೊಹ್ಲಿ (Virat Kohli) ಸಿಕ್ಸರ್​ಗಟ್ಟಿದರು. ಈ ಎರಡು ಸಿಕ್ಸರ್​ಗಳು ಪಂದ್ಯದ ಗತಿಯನ್ನೇ ಬದಲಾಯಿಸಿದಲ್ಲದೆ ಭಾರತದ ಗೆಲುವಿಗೆ ನಾಂದಿ ಹಾಡಿದ್ದವು. ಅಲ್ಲದೆ ಕೊಹ್ಲಿಯ ಈ ಎರಡು ಸಿಕ್ಸರ್​ಗಳಿಗೆ ಇಡೀ ವಿಶ್ವವೇ ಬೆಚ್ಚಿ ಬೆರಗಾಗಿತ್ತು. ಇದೀಗ ಆ ಎರಡು ಸಿಕ್ಸರ್​ಗಳ ಬಗ್ಗೆ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ವಾಸ್ತವವಾಗಿ ಅಕ್ಟೋಬರ್ 23 ರಂದು ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯವನ್ನು ವೀಕ್ಷಿಸಲು 90 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಮೈದಾನದಕ್ಕೆ ಆಗಮಿಸಿದ್ದರೆ, ವಿಶ್ವದಾದ್ಯಂತ ಲಕ್ಷಾಂತರ ಜನರು ಈ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಈ ಪಂದ್ಯವನ್ನು ಕೊನೆಯ ಎಸೆತದಲ್ಲಿ ಭಾರತ ರೋಚಕ ರೀತಿಯಲ್ಲಿ ಗೆದ್ದುಕೊಂಡಿತು. ಈ ಗೆಲುವಿನಲ್ಲಿ ಕಿಂಗ್ ಕೊಹ್ಲಿಯ ಪಾತ್ರ ಆಗಾಧವಾಗಿತ್ತು. ಈ ಪಂದ್ಯದಲ್ಲಿ ಕೇವಲ 53 ಎಸೆತಗಳನ್ನು ಎದುರಿಸಿದ ಕೊಹ್ಲಿ 82 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

‘ಕೊಹ್ಲಿ ಮಾತ್ರ ಆ ಸಿಕ್ಸರ್ ಬಾರಿಸಬಲ್ಲರು’

ಅದರಲ್ಲೂ ಕೊನೆಯ 18 ಎಸೆತಗಳಲ್ಲಿ 48 ರನ್ ಅಗತ್ಯವಿದ್ದಾಗ ಗೆಲುವಿನ ಹೊರೆ ಹೊತ್ತಿದ್ದ ಕೊಹ್ಲಿ 19ನೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್‌ ಬಾರಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ದರು. ಕೊನೆಯ 8 ಎಸೆತಗಳಲ್ಲಿ ಭಾರತಕ್ಕೆ 28 ರನ್‌ಗಳ ಅಗತ್ಯವಿತ್ತು. ಕೊಹ್ಲಿ ಮುಂದೆ ಪಾಕ್ ವೇಗದ ಬೌಲರ್ ರೌಫ್ ಇದ್ದರು. ಓವರ್​ನ ಮೊದಲ 4 ಎಸೆತಗಳಲ್ಲಿ ಹೆಚ್ಚು ರನ್ ಬಿಟ್ಟುಕೊಡದ ರೌಫ್ ಕೊನೆಯ ಎರಡು ಎಸೆತಗಳನ್ನು ಇದೇ ರೀತಿ ಕೊನೆಗೊಳಿಸಲು ತಯಾರಿ ನಡೆಸಿದ್ದರು. ಆದರೆ 19ನೇ ಓವರ್​ನ 5ನೇ ಎಸೆತವನ್ನು ನೇರ ಬ್ಯಾಟ್‌ನಿಂದ ಲಾಂಗ್ ಆನ್‌ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದ ಕೊಹ್ಲಿ ಎಲ್ಲರನ್ನು ಆಶ್ಚರ್ಯಗೊಳಿಸಿದರು. ಇದೀಗ ಆ ಸಿಕ್ಸರ್ ಬಗ್ಗೆ ಮಾತನಾಡಿರುವ ರೌಫ್, ಕೊಹ್ಲಿಗೆ ಮಾತ್ರ ಆ ಶಾಟ್ ಆಡಲು ಸಾಧ್ಯ ಎಂದಿದ್ದಾರೆ.

ಕ್ಲಾಸ್ ಬ್ಯಾಟಿಂಗ್​ಗೆ ಸಾಕ್ಷಿಯಾಗಿದೆ

ಕ್ರಿಕ್‌ವಿಕ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರೌಫ್, “ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಆಡಿದ ರೀತಿ, ಅದು ಅವರ ಕ್ಲಾಸ್ ಬ್ಯಾಟಿಂಗ್​ಗೆ ಸಾಕ್ಷಿಯಾಗಿದೆ. ಅವರು ಯಾವ ರೀತಿಯ ಹೊಡೆತಗಳನ್ನು ಆಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಆ ಪಂದ್ಯದಲ್ಲಿ ಅದರಲ್ಲೂ ಅಷ್ಟು ಒತ್ತಡದ ಸಂದರ್ಭದಲ್ಲಿ ಕೊಹ್ಲಿ ಆ ಸಿಕ್ಸರ್‌ಗಳನ್ನು ಹೊಡೆದ ರೀತಿ ನೋಡಿದರೆ ಬೇರೆ ಯಾವುದೇ ಆಟಗಾರರಿಗೆ ಆ ಸಿಕ್ಸರ್‌ಗಳನ್ನು ಹೊಡೆಯಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ದಿನೇಶ್ ಕಾರ್ತಿಕ್ ಅಥವಾ ಹಾರ್ದಿಕ್ ಪಾಂಡ್ಯ ಈ ರೀತಿ ಸಿಕ್ಸರ್​ಗಳನ್ನು ಹೊಡೆದಿದ್ದರೆ ನನಗೆ ಬೇಸರವಾಗುತ್ತಿತ್ತು. ಆದರೆ ಕೊಹ್ಲಿ ಆ ಎರಡು ಸಿಕ್ಸರ್​ಗಳನ್ನು ಬಾರಿಸಿರುವುದು ನನಗೆ ಕೊಂಚ ಸಮಾಧಾನ ತಂದಿತು ಎಂದಿದ್ದಾರೆ.

ಇದನ್ನೂ ಓದಿ: ಕಿಂಗ್​ ಕೊಹ್ಲಿಯ ದೊಡ್ಡ ದಾಖಲೆ ಮುರಿದ ಸೂರ್ಯಕುಮಾರ್..! ಟಿ20 ಸರಣಿಯ ಪ್ರಮುಖ 5 ದಾಖಲೆಗಳಿವು

ಅಂತಹ ಶಾಟ್ ಆಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ

ಹಾಗೆಯೇ ಈ ಸಂದರ್ಶನದಲ್ಲಿ ಕೊಹ್ಲಿ ಎದುರು ನಿಮ್ಮ ಬೌಲಿಂಗ್ ಯೋಜನೆ ವಿಫಲವಾಯಿತೆ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ರೌಫ್, ಮುಂದಿನ ಓವರ್ ಎಸೆಯಲು ಮೊಹಮ್ಮದ್ ನವಾಜ್ ಬರುವವರಿದ್ದರು. ಅವರು ಸ್ಪಿನ್ನರ್ ಆಗಿರುವುದರಿಂದ ನಾನು ಆದಷ್ಟು ರನ್​ಗಳಿಗೆ ಕಡಿವಾಣ ಹಾಗಿ ಅವರಿಗೆ ಹೆಚ್ಚು ಟಾರ್ಗೆಟ್ ಉಳಿಸಲು ಪ್ರಯತ್ನಿಸಿದೆ. ಓವರ್‌ನ ಮೊದಲ 4 ಎಸೆತಗಳಲ್ಲಿ ಒಂದು ಎಸೆತವನ್ನು ನಾನು ವೇಗವಾಗಿ ಬೌಲ್ ಮಾಡಿದ್ದೆ, ಉಳಿದ 3 ಎಸೆತಗಳನ್ನು ನಿಧಾನವಾಗಿ ಎಸೆದಿದ್ದೆ. ಹೀಗಾಗಿ ಕೊನೆಯ ಎರಡು ಎಸೆತಗಳನ್ನು ನಾನು ಸ್ಲೋ ಬಾಲ್ ಮಾಡಿದರೆ ಎದುರಿನ ಬೌಂಡರಿ ದೊಡ್ಡದಿರುವುದರಿಂದ ಕೊಹ್ಲಿ ಬೌಲರ್​ನ ತಲೆಯ ಮೇಲೆ ಬಿಗ್ ಶಾಟ್ ಆಡುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಅಲ್ಲದೆ ನಾನು ಬೌಲ್ ಮಾಡಿದ ಬಾಲ್ ಸರಿ ಇತ್ತು. ಆದರೆ ಆ ಸಿಕ್ಸರ್ ಹೊಡೆಯುವುದು ಕೊಹ್ಲಿಯ ಕ್ಲಾಸ್ ಆಟಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಈ ಸಿಕ್ಸರ್ ನಂತರ, ಕೊಹ್ಲಿ ಮುಂದಿನ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು. ಈ ಮೂಲಕ 8 ಎಸೆತಗಳಲ್ಲಿ 28 ರನ್ ಗಳಿಸಬೇಕಿದ್ದ ಗುರಿಯನ್ನು ಎರಡು ಸಿಕ್ಸರ್ ಬಾರಿಸುವ ಮೂಲಕ 6 ಎಸೆತಗಳಲ್ಲಿ 16 ರನ್​ಗೆ ತಂದು ನಿಲ್ಲಿಸಿದರು. ಅಲ್ಲದೆ ರೌಫ್ ಎಸೆದ 19ನೇ ಓವರ್​ನ 5ನೇ ಎಸೆತದ ಸಿಕ್ಸರ್​ ಅನ್ನು ಐಸಿಸಿ ಪಂದ್ಯಾವಳಿಯ ಅತ್ಯುತ್ತಮ ಕ್ಷಣವೆಂದು ಆಯ್ಕೆ ಮಾಡಿರುವುದು ಕೊಹ್ಲಿಯ ಅದ್ಭುತ ಆಟಕ್ಕೆ ಸಾಕ್ಷಿಯಾಗಿದೆ. ಅಂತಿಮವಾಗಿ ಭಾರತ ಕೊನೆಯ ಓವರ್‌ನಲ್ಲಿ 16 ರನ್ ಗಳಿಸುವ ಮೂಲಕ ಪಾಕಿಸ್ತಾನವನ್ನು ಸೋಲಿಸಿ ಕಳೆದ ವರ್ಷದ ವಿಶ್ವಕಪ್‌ನಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:34 am, Thu, 1 December 22