
ಚೆನ್ನೈನ ಎಂ. ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೂರನೇ ದಿನದಾಟದಲ್ಲಿ ದೇವದತ್ ಪಡಿಕ್ಕಲ್ 62 ರನ್‌ಗಳಿಸಿ ಔಟಾಗಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಈಸ್ಟ್ ಝೋನ್ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ ಬರೋಬ್ಬರಿ 708 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಸೌತ್ ಝೋನ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ರಿಕಿ ಭುಯಿ (1) ಹಾಗೂ ನಾರಾಯಣ್ ಜಗದೀಶನ್ (32) ಬೇಗನೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದ್ದರು. ಈ ಹಂತದಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಕನ್ನಡಿಗ ದೇವದತ್ ಪಡಿಕ್ಕಲ್, ಅತ್ಯಂತ ಸಂಯಮದ ಆಟದ ಮೂಲಕ ಇನಿಂಗ್ಸ್ ಕಟ್ಟಿದರು.
ಆರಂಭದಲ್ಲಿ ತುಸು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದ ಪಡಿಕ್ಕಲ್ ಆ ಬಳಿಕ ರನ್ ಪೇರಿಸುತ್ತಾ ಸಾಗಿದರು. ಪರಿಣಾಮ ಪಡಿಕ್ಕಲ್ ಬ್ಯಾಟ್ನಿಂದ 104 ಎಸೆತಗಳಲ್ಲಿ 4 ಫೋರ್ಗಳೊಂದಿಗೆ 62 ರನ್ಗಳು ಮೂಡಿಬಂತು.
ಈ ಹಂತದಲ್ಲಿ ಈಸ್ಟ್ ಝೋನ್ ತಂಡದ ನಾಯಕ ಇಶಾನ್ ಕಿಶನ್ ವೇಗಿ ಮುಕೇಶ್ ಕುಮಾರ್ ಅವರಿಗೆ ಚೆಂಡು ನೀಡಿದರು. ಮುಕೇಶ್ ಎಸೆದ ಲೆಗ್-ಸ್ಟಂಪ್ ಲೈನ್‌ನ ಎಸೆತವನ್ನು ಪಡಿಕ್ಕಲ್ ಫ್ಲಿಕ್ ಮಾಡಲು ಯತ್ನಿಸಿದರು. ಆದರೆ, ಟೈಮಿಂಗ್ ಲಭಿಸದ ಕಾರಣ ಚೆಂಡು ನೇರವಾಗಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿದ್ದ ಫೀಲ್ಡರ್ ಡೆನಿಶ್ ದಾಸ್ ಅವರ ಕೈಸೇರಿತು. ಇದರೊಂದಿಗೆ ಸೌತ್ ಝೋನ್ ತಂಡದ ದೊಡ್ಡ ಭರವಸೆಯಾಗಿದ್ದ ದೇವದತ್ ಪಡಿಕ್ಕಲ್ ಹೋರಾಟ ಅಂತ್ಯವಾಯಿತು.
ಮೊದಲ ಇನಿಂಗ್ಸ್ ಆಡುತ್ತಿರುವ ಸೌತ್ ಝೋನ್ ತಂಡವು ಕೇವಲ 170 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದೆ. ಈ ನಾಲ್ವರಲ್ಲಿ ಅರ್ಧಶತಕದ ಗಡಿದಾಟಿದ್ದು ದೇವದತ್ ಪಡಿಕ್ಕಲ್ ಮಾತ್ರ.
ಈಸ್ಟ್ ಝೋನ್ ಪರ ಅತ್ಯುತ್ತಮ ದಾಳಿ ಸಂಘಟಿಸುತ್ತಿರುವ ಮುಕೇಶ್ ಕುಮಾರ್ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಹಾಗೂ ಶಿಖರ್ ಮೋಹನ್ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.
ಈಸ್ಟ್ ಝೋನ್ (ಪ್ಲೇಯಿಂಗ್ XI): ಅಭಿಮನ್ಯು ಈಶ್ವರನ್, ವೈಭವ್ ಸೂರ್ಯವಂಶಿ, ಕುಮಾರ್ ಕುಶಾಗ್ರಾ, ಸುದೀಪ್ ಕುಮಾರ್ ಘರಾಮಿ, ಇಶಾನ್ ಕಿಶನ್ (ನಾಯಕ, ಶಿಖರ್ ಮೋಹನ್, ಅನುಕೂಲ್ ರಾಯ್, ಎಂಡಿ ಕೌನೈನ್ ಖುರೈಶಿ, ಮೊಹಮ್ಮದ್ ಶಮಿ, ಅಭಿಜಿತ್ ಕೆ ಸರ್ಕಾರ್, ಮುಖೇಶ್ ಕುಮಾರ್.
ಇದನ್ನೂ ಓದಿ: ದುಲೀಪ್ ಟ್ರೋಫಿ ಫೈನಲ್ ಎಷ್ಟು ದಿನಗಳ ಪಂದ್ಯ? ಇಲ್ಲಿದೆ ಉತ್ತರ
ಸೌತ್ ಝೋನ್ (ಪ್ಲೇಯಿಂಗ್ XI): ರಿಕಿ ಭುಯಿ, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶೇಕ್ ರಶೀದ್, ತಿಲಕ್ ವರ್ಮಾ (ನಾಯಕ), ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ತ್ರಿಪುರಾಣ ವಿಜಯ್, ಮೊಹಮ್ಮದ್ ಸಿರಾಜ್, ಚಾಮ ವಿ ಮಿಲಿಂದ್, ಎಂಡಿ ನಿಧೀಶ್.