AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಲೀಪ್ ಟ್ರೋಫಿ ಫೈನಲ್: ಮೊದಲ ದಿನವೇ ಇತಿಹಾಸ ಬರೆದ ಈಸ್ಟ್ ಝೋನ್

ಪ್ರತಿಷ್ಠಿತ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಈಸ್ಟ್ ಝೋನ್ ಮತ್ತು ಸೌತ್ ಝೋನ್ ತಂಡಗಳು ಮುಖಾಮುಖಿಯಾಗಿವೆ. ಚೆನ್ನೈನಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಈಸ್ಟ್ ಝೋನ್ ತಂಡದ ನಾಯಕ ಇಶಾನ್ ಕಿಶನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟ್ ಮಾಡುತ್ತಿರುವ ಈಸ್ಟ್ ಝೋನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ದುಲೀಪ್ ಟ್ರೋಫಿ ಫೈನಲ್: ಮೊದಲ ದಿನವೇ ಇತಿಹಾಸ ಬರೆದ ಈಸ್ಟ್ ಝೋನ್
ಇಶಾನ್ ಕಿಶನ್ - ಸಿರಾಜ್Image Credit source: TNCA
ಝಾಹಿರ್ ಯೂಸುಫ್
|

Updated on:Sep 07, 2026 | 7:58 AM

Share

ಭಾರತೀಯ ದೇಶಿ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿ ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯದ ಮೊದಲ ದಿನವೇ ಬ್ಯಾಟರ್​ಗಳು ಅಬ್ಬರಿಸಿದ್ದಾರೆ. ಚೆನ್ನೈನ ಎಂ.ಎ. ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ಸೌತ್ ಝೋನ್ ವಿರುದ್ಧ ಆರಂಭವಾಗಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಈಸ್ಟ್ ಝೋನ್ ತಂಡವು ಮೊದಲ ದಿನದಾಟದ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 385 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದು ದುಲೀಪ್ ಟ್ರೋಫಿ ಫೈನಲ್ ಪಂದ್ಯವೊಂದರ ಮೊದಲ ದಿನದಾಟದಲ್ಲಿ ದಾಖಲಾದ ಅತ್ಯಂತ ಗರಿಷ್ಠ ಸ್ಕೋರ್ ಎಂಬುದು ವಿಶೇಷ.

ಇಶಾನ್ ಕಿಶನ್ ಭರ್ಜರಿ ಶತಕ:

ಈಸ್ಟ್​ ಝೋನ್ ಈ ಬೃಹತ್ ಮೊತ್ತಕ್ಕೆ ಪ್ರಮುಖ ಕಾರಣಕರ್ತರಾಗಿದ್ದು ನಾಯಕ ಇಶಾನ್ ಕಿಶನ್. ಟೆಸ್ಟ್ ತಂಡಕ್ಕೆ ಪುನರಾಗಮನದ ಗುರಿ ಹೊಂದಿರುವ ಕಿಶನ್, ಜವಾಬ್ದಾರಿಯುತ ಹಾಗೂ ಆಕ್ರಮಣಕಾರಿ ಆಟವಾಡಿ ಕೇವಲ 135 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 111 ರನ್ ಚಚ್ಚಿದರು. ಇವರಿಗೆ ಭರ್ಜರಿ ಸಾಥ್ ನೀಡಿದ ಯುವ ವಿಕೆಟ್ ಕೀಪರ್ ಬ್ಯಾಟರ್ ಕುಮಾರ್ ಕುಶಾಗ್ರ 63 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಈ ಜೋಡಿ 5ನೇ ವಿಕೆಟ್‌ಗೆ ಮುರಿಯದ 144 ರನ್‌ಗಳ ಜೊತೆಯಾಟವಾಡುವ ಮೂಲಕ ಮೊದಲ ದಿನದಾಟದಲ್ಲಿ ಈಸ್ಟ್ ಝೋನ್ ಪಾರುಪತ್ಯ ಮರೆಯುವಂತೆ ಮಾಡಿದರು.

ಇದಕ್ಕೂ ಮುನ್ನ ಆರಂಭಿಕರಾದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ (44 ರನ್) ಹಾಗೂ ಅಭಿಮನ್ಯು ಈಶ್ವರನ್ (72) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇನ್ನು ಪಾದಾರ್ಪಣೆ ಪಂದ್ಯವಾಡಿದ ಶಿಖರ್ ಮೋಹನ್ (85) ಅಮೋಘ ಅರ್ಧಶತಕದ ಕಾಣಿಕೆ ನೀಡಿದರು;

ಫೈನಲ್ ಪಂದ್ಯದ ಮೊದಲ ದಿನದ ದಾಖಲೆ:

ದುಲೀಪ್ ಟ್ರೋಫಿ ಫೈನಲ್‌ಗಳ ಇತಿಹಾಸದಲ್ಲಿ  ಮೊದಲ ದಿನವೇ 380 ಪ್ಲಸ್ ರನ್ ಗಳಿಸಿದ ಉದಾಹರಣೆಗಳು ತೀರಾ ವಿರಳ. ಈ ಹಿಂದಿನ ಪ್ರಮುಖ ಫೈನಲ್ ಪಂದ್ಯಗಳ ಮೊದಲ ದಿನದ ಸ್ಕೋರ್‌ಗಳ ನೋಟ ಇಲ್ಲಿದೆ:

ತಂಡ  ಸ್ಕೋರ್ ಎದುರಾಳಿ ತಂಡ ಪಂದ್ಯದ ವಿವರ / ವರ್ಷ
ಈಸ್ಟ್ ಝೋನ್ 385/4 (79 ಓವರ್) ಸೌತ್ ಝೋನ್ 2026 ಫೈನಲ್ (ಪ್ರಸಕ್ತ ದಾಖಲೆ)
ಇಂಡಿಯಾ ರೆಡ್  317/5 (83.3 ಓವರ್) ಇಂಡಿಯಾ ಬ್ಲೂ 2017 ಫೈನಲ್ (ಪೃಥ್ವಿ ಶಾ 154, ದಿನೇಶ್ ಕಾರ್ತಿಕ್ 111)
ವೆಸ್ಟ್ ಝೋನ್  250/8 ಸೌತ್ ಝೋನ್ 2022 ಫೈನಲ್

ದುಲೀಪ್ ಟ್ರೋಫಿ ಇತಿಹಾಸದ ಬೃಹತ್ ಮೊತ್ತಗಳು:

ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನದಾಟವನ್ನು ಮಾತ್ರವಲ್ಲದೆ, ಇಡೀ ಟೂರ್ನಿಯ ಒಟ್ಟಾರೆ ಇನ್ನಿಂಗ್ಸ್‌ಗಳ ಇತಿಹಾಸವನ್ನು ಗಮನಿಸಿದರೆ ಈ ಕೆಳಗಿನ ಸ್ಕೋರ್‌ಗಳು ಸಾರ್ವಕಾಲಿಕ ದಾಖಲೆಯಾಗಿ ಉಳಿದುಕೊಂಡಿವೆ:

ಶ್ರೇಯಾಂಕ ತಂಡ ಸ್ಕೋರ್  ಎದುರಾಳಿ ತಂಡ ಮೈದಾನ / ವರ್ಷ
1 ನಾರ್ತ್ ಝೋನ್ 868 ವೆಸ್ಟ್ ಝೋನ್ ಭಿಲಾಯ್ (1987)
2 ವೆಸ್ಟ್ ಝೋನ್  769 ನಾರ್ತ್ ಝೋನ್ ರಾಜ್‌ಕೋಟ್ (2010)
3 ವೆಸ್ಟ್ ಝೋನ್ 747 ದಕ್ಷಿಣ ವಲಯ ರೂರ್ಕೆಲಾ (1991)
4 ಸೌತ್ ಝೋನ್ 740 ವೆಸ್ಟ್ ಝೋನ್ ವಾಂಖೆಡೆ, ಮುಂಬೈ (1986)
5 ನಾರ್ತ್ ಝೋನ್ 729/9 ಡಿಕ್ಲೇರ್ ವೆಸ್ಟ್ ಝೋನ್ ಜಮ್‌ಶೆಡ್‌ಪುರ (1991)

ಇದನ್ನೂ ಓದಿ: ಟೀಮ್ ಇಂಡಿಯಾದ ಹೊಸ ಪ್ಲಾನ್: ಅಸಲಿ ಸವಾಲು ಎತ್ತಿ ತೋರಿಸಿದ ಮಾಜಿ ಕ್ರಿಕೆಟಿಗ!

ಇದೀಗ ಫೈನಲ್ ಪಂದ್ಯದ ಮೊದಲ ದಿನವೇ 385 ರನ್ ಕಲೆಹಾಕಿರುವ ಈಸ್ಟ್​ ಝೋನ್ ತಂಡವು, ಸೌತ್ ಝೋನ್ ವಿರುದ್ಧ ಪಾರುಪತ್ಯ ಮೆರೆದಿದೆ. ಈ ಭರ್ಜರಿ ಆರಂಭದ ಬಲದೊಂದಿಗೆ ಈಸ್ಟ್ ಝೋನ್ ಬೃಹತ್ ಮೊತ್ತ ಪೇರಿಸಲಿದೆಯೇ ಅಥವಾ ಸೌತ್ ಝೋನ್ ಬೌಲರ್‌ಗಳು ದ್ವಿತೀಯ ದಿನದಂದು ಕಂಬ್ಯಾಕ್ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Published On - 7:55 am, Mon, 7 September 26

Follow Us