Duleep Trophy 2026: ದುಲೀಪ್ ಟ್ರೋಫಿ ಫೈನಲ್ ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರ

Duleep Trophy 2026: ದುಲೀಪ್ ಟ್ರೋಫಿ ಆಗಸ್ಟ್ 23 ರಿಂದ ಆರಂಭವಾಗಲಿದ್ದು, ದೇಶೀ ಕ್ರಿಕೆಟ್ ಸೀಸನ್‌ಗೆ ಚಾಲನೆ ನೀಡಲಿದೆ. ಬೆಂಗಳೂರಿನಲ್ಲಿ ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ನಿಗದಿಯಾಗಿದ್ದ ಪಂದ್ಯಗಳ ವೇಳಾಪಟ್ಟಿಯಲ್ಲಿ ಬಿಸಿಸಿಐ ಬದಲಾವಣೆ ಮಾಡಿದೆ. ಅಭಿಮಾನಿಗಳ ಬೇಡಿಕೆಯ ಮೇರೆಗೆ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರಿಸಲಾಗಿದ್ದು, ಪ್ರೇಕ್ಷಕರಿಗೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗಿದೆ. ಆಗಸ್ಟ್ 23 ರಿಂದ ಸೆಪ್ಟೆಂಬರ್ 10 ರವರೆಗೆ ಈ ಟೂರ್ನಿ ನಡೆಯಲಿದೆ.

Duleep Trophy 2026: ದುಲೀಪ್ ಟ್ರೋಫಿ ಫೈನಲ್ ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರ
Duleep Trophy 2026

Updated on: Aug 19, 2026 | 9:56 PM

ದುಲೀಪ್ ಟ್ರೋಫಿ (Duleep Trophy) ಆರಂಭದೊಂದಿಗೆ ಭಾರತದಲ್ಲಿ ದೇಶೀ ಕ್ರಿಕೆಟ್ ಸೀಸನ್ ಕೂಡ ಆರಂಭವಾಗಲಿದೆ. ದುಲೀಪ್ ಟ್ರೋಫಿ ಇದೇ ತಿಂಗಳು ಅಂದರೆ ಆಗಸ್ಟ್ 23 ರಿಂದ ಆರಂಭವಾಗಿ​ ಸೆಫ್ಟೆಂಬರ್ 10ರವರೆಗೆ ನಡೆಯಲಿದೆ. ಬಿಸಿಸಿಐ ಜುಲೈನಲ್ಲಿಯೇ ದುಲೀಪ್ ಟ್ರೋಫಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದಾದ ಬಳಿಕ ಎಲ್ಲಾ 6 ವಲಯಗಳ ತಂಡಗಳನ್ನು ಸಹ ಪ್ರಕಟಿಸಲಾಗಿತ್ತು. ಅದರಂತೆ ಎಲ್ಲಾ ಪಂದ್ಯಗಳು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈ ಟೂರ್ನಿಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರಿಸಲಾಗಿದೆ.

ಚೆನ್ನೈನಲ್ಲಿ ಫೈನಲ್ ಪಂದ್ಯ

ಈ ಮೊದಲು ದುಲೀಪ್ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ಖಾಲಿ ಕ್ರೀಡಾಂಗಣದಲ್ಲಿ(ಪ್ರೇಕ್ಷಕರಿಲ್ಲದೆ) ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಅಭಿಮಾನಿಗಳಿಗೆ ಪಂದ್ಯವನ್ನು ವೀಕ್ಷಿಸಲು ಅವಕಾಶವಿಲ್ಲದಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಪ್ರೇಕ್ಷಕರಿಗೆ ಅವಕಾಶ ನೀಡಬೇಕು ಎಂಬ ಕೂಗು ಜೋರಾಗಿತ್ತು. ಹೀಗಾಗಿ ಬಿಸಿಸಿಐ ದುಲೀಪ್ ಟ್ರೋಫಿ ಫೈನಲ್ ಪಂದ್ಯವನ್ನು ಚೆನ್ನೈಗೆ ಸ್ಥಳಾಂತರಿಸಿದ್ದು, ಪ್ರೇಕ್ಷಕರಿಗೆ ಪಂದ್ಯಾವಳಿಯ ಮಾರ್ಕ್ಯೂ ಪಂದ್ಯವನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ.

ಮಾಹಿತಿ ನೀಡಿದ ದೇವಜಿತ್ ಸೈಕಿಯಾ

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ‘ದುಲೀಪ್ ಟ್ರೋಫಿಯ ಮೊದಲ ಎರಡು ಸುತ್ತುಗಳು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲಿದ್ದರೂ, ನಾವು ಫೈನಲ್ ಪಂದ್ಯವನ್ನು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ, ಇದರಿಂದಾಗಿ ಸಾಮಾನ್ಯ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಂದು ತಮ್ಮ ನೆಚ್ಚಿನ ಆಟಗಾರರ ಆಟವನ್ನು ವೀಕ್ಷಿಸಬಹುದು’ ಎಂದಿದ್ದಾರೆ.

Duleep Trophy 2025: ರಜತ್ ಪಾಟಿದರ್ ನಾಯಕತ್ವದಲ್ಲಿ ದುಲೀಪ್ ಟ್ರೋಫಿ ಗೆದ್ದ ಕೇಂದ್ರ ವಲಯ

ಹೀಗಿರಲಿದೆ ದುಲೀಪ್ ಟ್ರೋಫಿ

2025 ರಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ವಲಯವನ್ನು ಸೋಲಿಸಿದ್ದ ಕೇಂದ್ರ ವಲಯವು ದುಲೀಪ್ ಟ್ರೋಫಿಯಲ್ಲಿ ಹಾಲಿ ಚಾಂಪಿಯನ್ ಆಗಿದೆ. ಪಂದ್ಯಾವಳಿಯ ಆರಂಭಿಕ ಎರಡು ಸುತ್ತುಗಳು ಅನುಕ್ರಮವಾಗಿ ಆಗಸ್ಟ್ 23 ರಿಂದ 26 ರವರೆಗೆ ಮತ್ತು ಆಗಸ್ಟ್ 30 ರಿಂದ ಸೆಪ್ಟೆಂಬರ್ 2 ರವರೆಗೆ ಬೆಂಗಳೂರಿನಲ್ಲಿ ನಡೆಯಲಿವೆ. ಆ ನಂತರ ಫೈನಲ್ ಪಂದ್ಯವು ಸೆಪ್ಟೆಂಬರ್ 6 ರಿಂದ 10 ರವರೆಗೆ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us