IND vs PAK: ಇಂದು ಏಷ್ಯಾಕಪ್ ಫೈನಲ್​ನಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿ..!

|

Updated on: Jul 23, 2023 | 6:10 AM

Emerging Asia Cup Final, IND-A vs PAK-A: ಈ ಟೂರ್ನಿಯಲ್ಲಿ ಉಭಯ ತಂಡಗಳು ಎರಡನೇ ಬಾರಿ ಮುಖಾಮುಖಿಯಾಗುತ್ತಿದ್ದು, ರೋಚಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

IND vs PAK: ಇಂದು ಏಷ್ಯಾಕಪ್ ಫೈನಲ್​ನಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿ..!
ಭಾರತ- ಪಾಕ್ ತಂಡದ ನಾಯಕರು
Follow us on

ಭಾನುವಾರ ಅಂದರೆ, ಇಂದು ಶ್ರೀಲಂಕಾದಲ್ಲಿ ನಡೆಯಲಿರುವ ಉದಯೋನ್ಮುಖ ಏಷ್ಯಾಕಪ್‌ ಫೈನಲ್ (Emerging Asia Cup Final) ಪಂದ್ಯದಲ್ಲಿ ಯಶ್ ಧುಲ್ (Yash Dhull) ನಾಯಕತ್ವದ ಭಾರತ-ಎ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ-ಎ (India A vs Pakistan A) ತಂಡವನ್ನು ಎದುರಿಸಲಿದೆ. ಇದರೊಂದಿಗೆ 10 ವರ್ಷಗಳಿಂದ ಕಾಡುತ್ತಿರುವ ಪ್ರಶಸ್ತಿ ಬರ ನೀಗಿಸಲು ಟೀಂ ಇಂಡಿಯಾ ಪ್ರಯತ್ನಿಸಲಿದೆ. ಭಾರತ-ಎ ಕೊನೆಯ ಬಾರಿಗೆ 2013 ರಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕತ್ವದಲ್ಲಿ ಈ ಪಂದ್ಯಾವಳಿಯನ್ನು ಗೆದ್ದುಕೊಂಡಿತು. ಆದರೆ ಆ ನಂತರ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಹಾಲಿ ಚಾಂಪಿಯನ್ ಪಾಕಿಸ್ತಾನ-ಎ ಈ ಪ್ರಶಸ್ತಿಯನ್ನು ಕೊನೆಯ ಬಾರಿಗೆ 2018 ರಲ್ಲಿ ಗೆದ್ದುಕೊಂಡಿತ್ತು. ಈ ಟೂರ್ನಿಯಲ್ಲಿ ಉಭಯ ತಂಡಗಳು ಎರಡನೇ ಬಾರಿ ಮುಖಾಮುಖಿಯಾಗುತ್ತಿದ್ದು, ರೋಚಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಬ್ಯಾಟಿಂಗ್ ವಿಭಾಗ ಎಚ್ಚರವಹಿಸಬೇಕು

ಕಳೆದ ವರ್ಷ ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಅಂಡರ್-19 ವಿಶ್ವಕಪ್ ಗೆದ್ದುಕೊಟ್ಟಿದ್ದ ನಾಯಕ ಯಶ್ ಧುಲ್ ಅವರು ಏಷ್ಯಾಕಪ್​ನಲ್ಲಿ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿದ್ದ ಧುಲ್, ಬಾಂಗ್ಲಾದೇಶ ವಿರುದ್ಧವೂ ಹೋರಾಟದ ಅರ್ಧಶತಕ ಸಿಡಿಸಿದ್ದರು. ಟೀಂ ಇಂಡಿಯಾ ಯುವ ಆಟಗಾರರಿಂದ ತುಂಬಿ ತುಳುಕುತ್ತಿದ್ದು, ಪ್ರತಿಯೊಬ್ಬರು ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋಲದಿರುವುದು ತಂಡದ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

ಬಾಂಗ್ಲಾದೇಶ-ಎ ವಿರುದ್ಧ ತಂಡದ ಬ್ಯಾಟಿಂಗ್ ವಿಭಾಗ ತತ್ತರಿಸಿದರೂ, ನಂತರ ಬಲಿಷ್ಠ ಪುನರಾಗಮನವನ್ನು ಮಾಡಿ ಪಂದ್ಯವನ್ನು ಗೆದ್ದುಕೊಂಡಿತ್ತು. ಇದು ತಂಡದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ಆದರೆ ಬಾಂಗ್ಲಾ ವಿರುದ್ಧ ಭಾರತದ ಬ್ಯಾಟರ್​ಗಳು ಮಾಡಿದ ತಪ್ಪನ್ನು ಪಾಕಿಸ್ತಾನದ ವಿರುದ್ಧ ಪುನರಾವರ್ತಿಸದಿರಲು ಪ್ರಯತ್ನಿಸಬೇಕು.

Emerging Asia Cup 2023: ಏಷ್ಯಾಕಪ್ ಫೈನಲ್​ಗೆ ಲಗ್ಗೆಯಿಟ್ಟ ಭಾರತ; ಪಾಕ್ ಎದುರು ಫೈನಲ್ ಫೈಟ್..!

ಬಲಿಷ್ಠವಾಗಿದೆ ಬೌಲಿಂಗ್‌ ವಿಭಾಗ

ಆರಂಭಿಕ ಪಂದ್ಯಗಳಲ್ಲಿ, ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ನಂತರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಂಡದ ಬೌಲರ್‌ಗಳು ತಮ್ಮ ಸಾಮಥ್ರ್ಯವನ್ನು ಸಾಭೀತುಪಡಿಸಿದರು. ನಿಶಾಂತ್ ಸಿಂಧು ಮತ್ತು ಮಾನವ್ ಸುತಾರ್ ಅದ್ಭುತ ಬೌಲಿಂಗ್ ಮಾಡುವ ಮೂಲಕ ಬಾಂಗ್ಲಾದೇಶವನ್ನು ಕೇವಲ 160 ರನ್​ಗಳಿಗೆ ಆಲೌಟ್ ಆಗುವಂತೆ ಮಾಡಿದರು. ಇನ್ನು ವೇಗದ ಬೌಲರ್‌ಗಳಾದ ರಾಜವರ್ಧನ್ ಮತ್ತು ಹರ್ಷಿತ್ ರಾಣಾ ತಮ್ಮ ಹಳೆಯ ಲಯಕ್ಕೆ ಮರಳಬೇಕಿದೆ.

ಪಾಕ್ ತಂಡದಲ್ಲಿ ಅನುಭವಿಗಳೆ ಹೆಚ್ಚು

ಭಾರತ-ಎ ತಂಡದಲ್ಲಿ ಯಾವುದೇ ಆಟಗಾರರು ಇನ್ನೂ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಆದರೆ ಪಾಕಿಸ್ತಾನ ತಂಡದಲ್ಲಿ ಕೆಲವು ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ಇದರಲ್ಲಿ ಕ್ಯಾಪ್ಟನ್ ಮೊಹಮ್ಮದ್ ಹ್ಯಾರಿಸ್, ಸಾಹಿಬ್ಜಾದಾ ಫರ್ಹಾನ್, ಮೊಹಮ್ಮದ್ ವಾಸಿಮ್ ಮತ್ತು ಅರ್ಷದ್ ಇಕ್ಬಾಲ್ ಅವರ ಹೆಸರುಗಳು ಸೇರಿವೆ. ಆದರೆ ಈ ಎರಡು ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಈ ಅಂತಾರಾಷ್ಟ್ರೀಯ ಅನುಭವ ಕೈ ಹಿಡಿಯಲಿಲ್ಲ. ಆದರೆ, ಟೀಂ ಇಂಡಿಯಾ ಇದನ್ನು ಹಗುರವಾಗಿ ಪರಿಗಣಿಸದೆ ಸಂಪೂರ್ಣ ಸಿದ್ಧತೆಯೊಂದಿಗೆ ಈ ಪಂದ್ಯಕ್ಕೆ ಇಳಿಯಬೇಕಿದೆ.

ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ನಡುಗಿಸಿದ ಆಟಗಾರರನ್ನು ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯವನ್ನು ಆಡದ ಟೀಂ ಇಂಡಿಯಾದ ಆಟಗಾರರು ಸೋಲಿಸಿದ್ದು ಪಾಕಿಸ್ತಾನಕ್ಕೆ ಮುಜುಗರ ತಂದಿದೆ. ಹೀಗಾಗಿ ಈ ಬಾರಿ ಪಾಕಿಸ್ತಾನದ ಮನಸ್ಸಿನಲ್ಲಿ ಸೇಡು ತೀರಿಸಿಕೊಳ್ಳುವ ಹಂಬಲವಿರುವುದ್ದರಿಂದ ಈ ಬಾರಿ ಭಾರತ ಯುವ ಪಡೆ ಎಚ್ಚರಿಕೆಯ ಆಟವಾಡಬೇಕಿದೆ.

ಉಭಯ ತಂಡಗಳು

ಭಾರತ ಎ: ಯಶ್ ಧುಲ್ (ನಾಯಕ), ಧ್ರುವ ಜುರೈಲ್, ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ನಿಶಾಂತ್ ಸಿಂಧು, ರಿಯಾನ್ ಪರಾಗ್, ಹರ್ಷಿತ್ ರಾಣಾ, ಮಾನವ್ ಸುತಾರ್, ರಾಜವರ್ಧನ್ ಹಂಗರಗೇಕರ್, ಯುವರಾಜ್ ಸಿಂಗ್ ದೋಡಿಯಾ, ಪ್ರಭುಸಿಮ್ರಾನ್ ಸಿಂಗ್, ಆಕಾಶ್ ಸಿಂಗ್, ನಿತೀಶ್ ಪ್ರದೋಶ್ ಪಾಲ್.

ಪಾಕಿಸ್ತಾನ ಎ: ಮೊಹಮ್ಮದ್ ಹ್ಯಾರಿಸ್ (ನಾಯಕ/ವಿಕೆಟ್ ಕೀಪರ್), ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಒಮರ್ ಯೂಸುಫ್, ತಾಯೆಬ್ ತಾಹಿರ್, ಖಾಸಿಮ್ ಅಕ್ರಂ, ಮುಬಾಸಿರ್ ಖಾನ್, ಅಮದ್ ಬಟ್, ಮೊಹಮ್ಮದ್ ವಾಸಿಂ ಜೂನಿಯರ್, ಸುಫೀನ್ ಮುಕಿಮ್, ಅರ್ಷದ್ ಇಕ್ಬಾಲ್, ಹಸಿಬುಲ್ಲಾ ಗ್ಝು ಖಾಲಾಮ್, ಮೆಹ್ರಾಂ ಖಾನ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:06 am, Sun, 23 July 23