ಅಜೇಯ ತಂಡವಾಗಿ ಸೆಮಿಫೈನಲ್​ಗೇರಿದ ಟೀಂ ಇಂಡಿಯಾ; ಮುಂದಿನ ಎದುರಾಳಿ ಯಾರು ಗೊತ್ತಾ?

|

Updated on: Oct 23, 2024 | 10:32 PM

Emerging Teams Asia Cup 2024: ಒಮಾನ್‌ನಲ್ಲಿ ನಡೆಯುತ್ತಿರುವ ಉದಯೋನ್ಮುಖ ಟೀಮ್ ಏಷ್ಯಾಕಪ್​ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿರುವ ಭಾರತ ಎ ತಂಡ, ಲೀಗ್​ನಲ್ಲಿ ಸತತ ಮೂರನೇ ಜಯವನ್ನು ದಾಖಲಿಸಿದೆ. ಇದರೊಂದಿಗೆ ಟೀಂ ಇಂಡಿಯಾ ಅಜೇಯ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಅಜೇಯ ತಂಡವಾಗಿ ಸೆಮಿಫೈನಲ್​ಗೇರಿದ ಟೀಂ ಇಂಡಿಯಾ; ಮುಂದಿನ ಎದುರಾಳಿ ಯಾರು ಗೊತ್ತಾ?
ಭಾರತ ಎ ತಂಡ
Follow us on

ಒಮಾನ್‌ನಲ್ಲಿ ನಡೆಯುತ್ತಿರುವ ಉದಯೋನ್ಮುಖ ಟೀಂ ಏಷ್ಯಾಕಪ್​ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿರುವ ಭಾರತ ಎ ತಂಡ, ಲೀಗ್​ನಲ್ಲಿ ಸತತ ಮೂರನೇ ಜಯವನ್ನು ದಾಖಲಿಸಿದೆ. ಇದರೊಂದಿಗೆ ಟೀಂ ಇಂಡಿಯಾ ಅಜೇಯ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ತಿಲಕ್ ವರ್ಮಾ ನಾಯಕತ್ವದ ತಂಡವು ಬುಧವಾರ ನಡೆದ ಗ್ರೂಪ್ ಹಂತದ ತನ್ನ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಆತಿಥೇಯ ಒಮಾನ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ್ದು, ನಾಕ್‌ಔಟ್ ಸುತ್ತಿಗೆ ಪ್ರವೇಶ ಪಡೆದಿದೆ. ಇದೀಗ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಎ ತಂಡ, ಅಫ್ಘಾನಿಸ್ತಾನ ಎ ತಂಡವನ್ನು ಎದುರಿಸಲಿದೆ.

8 ಬೌಲರ್ ಬಳಿಸಿದ ತಿಲಕ್

ಮಸ್ಕತ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಒಮಾನ್ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 140 ರನ್ ಕಲೆಹಾಕಿತು. ಈ ಪಂದ್ಯದಲ್ಲಿ ಒಟ್ಟು 8 ಬೌಲರ್‌ಗಳನ್ನು ಬಳಸಿಕೊಂಡ ನಾಯಕ ತಿಲಕ್ ವರ್ಮಾ ಆರಂಭದಿಂದಲೂ ನಿರಂತರವಾಗಿ ಬೌಲರ್‌ಗಳನ್ನು ಬದಲಾಯಿಸುತ್ತಿದ್ದರು. ಹೀಗಾಗಿ ತಂಡವು ಪವರ್‌ಪ್ಲೇ ಒಳಗೆ ಒಮಾನ್ ತಂಡದ 3 ವಿಕೆಟ್ ಉರುಳಿಸಿ ಕೇವಲ 33 ರನ್‌ ಬಿಟ್ಟುಕೊಟ್ಟಿತು. ಆದರೆ ಆ ಬಳಿಕ ಜೊತೆಯಾದ ವಾಸಿಂ ಅಲಿ ಮತ್ತು ಮೊಹಮ್ಮದ್ ನದೀಮ್ 47 ರನ್‌ಗಳ ಜೊತೆಯಾಟ ನಡೆಸಿದರು.

ನಂತರ 15ನೇ ಓವರ್​ನಲ್ಲಿ ಬ್ಯಾಟಿಂಗ್​ಗೆ ಬಂದ ಹಮ್ಮದ್ ಮಿರ್ಜಾ ಕೇವಲ 15 ಎಸೆತಗಳಲ್ಲಿ 28 ರನ್ ಗಳಿಸಿ ತಂಡದ ಸ್ಕೋರ್ ಅನ್ನು 140 ರನ್​ಗಳಿಗೆ ಕೊಂಡೊಯ್ದರು. ಭಾರತ ಎ ಪರ ರಮಣದೀಪ್ ಸಿಂಗ್, ರಸಿಖ್ ಸಲಾಂ, ನಿಶಾಂತ್ ಸಿಂಧು, ಆಕಿಬ್ ಖಾನ್ ಮತ್ತು ಸಾಯಿ ಕಿಶೋರ್ ತಲಾ 1 ವಿಕೆಟ್ ಪಡೆದರು. ಈ ಐವರ ಹೊರತಾಗಿ ರಾಹುಲ್ ಚಹಾರ್, ಆಯುಷ್ ಬಡೋನಿ ಮತ್ತು ಅಭಿಷೇಕ್ ಶರ್ಮಾ ಕೂಡ ಕೆಲವು ಓವರ್‌ಗಳನ್ನು ಬೌಲ್ ಮಾಡಿದರು.

ಬದೋನಿ ಸ್ಫೋಟಕ ಅರ್ಧಶತಕ

ಇದಕ್ಕೆ ಪ್ರತ್ಯುತ್ತರವಾಗಿ ಮತ್ತೊಮ್ಮೆ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ ಬಂದ ತಕ್ಷಣ ತಂಡದ ಪರ ರನ್ ಮಳೆ ಸುರಿಸಿದರು. ಆದರೆ ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 15 ಎಸೆತಗಳನ್ನು ಎದುರಿಸಿದ ಅಭಿಷೇಕ್ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಂತೆ 34 ರನ್ ಗಳಿಸಿ ಔಟಾದರು. ಆದರೆ ಮೊದಲ ಅವಕಾಶ ಪಡೆದಿದ್ದ ಅನುಜ್ ರಾವತ್​ಗೆ ವಿಶೇಷ ಸಾಧನೆ ಮಾಡಲು ಸಾಧ್ಯವಾಗದೆ ಕೇವಲ 8 ರನ್ ಗಳಿಸಿ ಔಟಾದರು. ಇದಾದ ಬಳಿಕ ಬಂದ ಕ್ಯಾಪ್ಟನ್ ತಿಲಕ್, ಆಯುಷ್ ಜೊತೆಗೂಡಿ ತಂಡವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು. ಈ ವೇಳೆ ಆಯುಷ್ ಬದೋನಿ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆಯುಷ್ ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಅಂತಿಮವಾಗಿ ರಮಣದೀಪ್ ಸಿಂಗ್ ಕೇವಲ 4 ಎಸೆತಗಳಲ್ಲಿ 13 ರನ್ ಗಳಿಸಿ, 15.2 ಓವರ್​ಗಳಲ್ಲಿ 6 ವಿಕೆಟ್​ಗಳಿಂದ ತಂಡಕ್ಕೆ ಜಯ ತಂದುಕೊಟ್ಟರು.

ಸೆಮೀಸ್ ಎದುರಾಳಿ ಯಾರು?

ಇದರೊಂದಿಗೆ ಟೀಂ ಇಂಡಿಯಾ ಬಿ ಗುಂಪಿನ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ. ಲೀಗ್​ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎ ತಂಡವನ್ನು ಮಣಿಸಿದ್ದ ಭಾರತ ಆ ನಂತರದ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಸೋಲಿಸಿತ್ತು. ಈ ಮೂಲಕ ಭಾರತ 3 ಪಂದ್ಯಗಳಲ್ಲಿ 6 ಅಂಕಗಳೊಂದಿಗೆ ಎ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ. ಇದರಿಂದಾಗಿ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿರುವ ಅಫ್ಘಾನಿಸ್ತಾನ ಎ ತಂಡವನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದೆ. ಈ ಪಂದ್ಯ ಅಕ್ಟೋಬರ್ 25 ರಂದು ನಡೆಯಲಿದೆ. ಮೊದಲ ಸೆಮಿಫೈನಲ್‌ನಲ್ಲಿ ಎ ಗುಂಪಿನ ವಿಜೇತ ಶ್ರೀಲಂಕಾ ಎ ಮತ್ತು ಬಿ ಗುಂಪಿನ ನಂಬರ್ 2 ತಂಡ ಪಾಕಿಸ್ತಾನ ಎ ನಡುವೆ ಹಣಾಹಣಿ ನಡೆಯಲಿದೆ. ಈ ಪಂದ್ಯ ಕೂಡ ಅಕ್ಟೋಬರ್ 25 ರಂದೇ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:19 pm, Wed, 23 October 24