ದಕ್ಷಿಣ ಆಫ್ರಿಕಾದ ಇಂಗ್ಲೆಂಡ್ ಪ್ರವಾಸ ಅತ್ಯಂತ ನಿರಾಶಾದಾಯಕ ರೀತಿಯಲ್ಲಿ ಕೊನೆಗೊಂಡಿದೆ. ಮೂರು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯವನ್ನು ಗೆದ್ದಿದ್ದ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ. ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ 9 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಸರಣಿ ಕೈವಶ ಮಾಡಿಕೊಂಡಿದೆ. ಓವಲ್ ಟೆಸ್ಟ್‌ನಲ್ಲಿ, ದಕ್ಷಿಣ ಆಫ್ರಿಕಾ ಅತಿಥೇಯ ಇಂಗ್ಲೆಂಡ್‌ಗೆ 130 ರನ್‌ಗಳ ಗುರಿ ನೀಡಿತ್ತು. ಸುಲಭ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್‌ಗೆ ಜಾಕ್ ಕ್ರೌಲಿ ಅವರ ಅಜೇಯ 69 ರನ್ ಹಾಗೂ ಲೀಸ್ ಅವರ 39 ರನ್ ಗೆಲುವಿಗೆ ಸಹಕಾರಿಯಾಯಿತು.
ಓಲಿ ರಾಬಿನ್ಸನ್ಗೆ ಪಂದ್ಯ ಶ್ರೇಷ್ಠ
ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಲಗೈ ವೇಗದ ಬೌಲರ್ ಓಲಿ ರಾಬಿನ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ರಾಬಿನ್ಸನ್ ಟೆಸ್ಟ್‌ನಲ್ಲಿ ಒಟ್ಟು 7 ವಿಕೆಟ್ ಪಡೆದರೆ, ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದರು. ಓವಲ್ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 36.2 ಓವರ್‌ಗಳಲ್ಲಿ 118 ರನ್‌ಗಳಿಗೆ ಆಲೌಟ್ ಮಾಡಿತ್ತು. ಅದೇ ಸಮಯದಲ್ಲಿ ಇಂಗ್ಲೆಂಡ್ ತಂಡ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ 158 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಇದಾದ ಬಳಿಕ ದಕ್ಷಿಣ ಆಫ್ರಿಕಾ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಇಂಗ್ಲೆಂಡ್ ತಂಡ 130 ರನ್ಗಳ ಗುರಿ ಪಡೆದು ಸುಲಭವಾಗಿ ಜಯ ಸಾಧಿಸಿತು. ಓವಲ್ ಟೆಸ್ಟ್‌ನ ಮೊದಲ ದಿನ ಮಳೆಯಿಂದಾಗಿ ಕೊಚ್ಚಿಹೋಗಿತ್ತು. ನಂತರ ಇಂಗ್ಲೆಂಡ್‌ನ ರಾಣಿ ಎಲಿಜಬೆತ್ ಅವರ ನಿಧನದಿಂದಾಗಿ ಎರಡನೇ ದಿನದ ಆಟವನ್ನು ಸಹ ಮುಂದೂಡಲಾಯಿತು. ಆದರೆ ಇಂಗ್ಲೆಂಡ್ ಮೂರು ದಿನಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು.
ಮಾರ್ಕೊ ಯಾನ್ಸನ್ ಅದ್ಭುತ ಪ್ರದರ್ಶನ
ದಕ್ಷಿಣ ಆಫ್ರಿಕಾ ಪರ ಮಾರ್ಕೊ ಯಾನ್ಸನ್ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ತಮ್ಮ ಅದ್ಭುತ ಪ್ರದರ್ಶನ ತೋರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 30 ರನ್‌ಗಳ ಇನ್ನಿಂಗ್ಸ್ ಆಡಿದ್ದಲ್ಲದೆ, ಯಾನ್ಸನ್ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದರು. ಇವರಲ್ಲದೆ ರಬಾಡ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದರು. ಆದರೆ, ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಕಳಪೆ ಬ್ಯಾಟಿಂಗ್ ತಂಡ ಕಡಿಮೆ ಮೊತ್ತಕ್ಕೆ ಆಲೌಟ್ ಆಗಲು ಕಾರಣವಾಯಿತು.
ಸ್ಟೋಕ್ಸ್ಗೆ ಸರಣಿ ಶ್ರೇಷ್ಠ ಪ್ರಶಸ್ತಿ
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸ್ಟೋಕ್ಸ್ 3 ಪಂದ್ಯಗಳಲ್ಲಿ 37 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 149 ರನ್ ಗಳಿಸಿದಲ್ಲದೆ, ಬೌಲಿಂಗ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದರು. ಕಗಿಸೊ ರಬಾಡ ಅವರು ಸರಣಿಯಲ್ಲಿ ಗರಿಷ್ಠ 14 ವಿಕೆಟ್‌ಗಳನ್ನು ಪಡೆದರೆ, ಬ್ಯಾಟಿಂಗ್ನಲ್ಲಿ ಒಲಿ ಪೋಪ್ ಗರಿಷ್ಠ 179 ರನ್ ಗಳಿಸಿದರು.
Published On - 7:22 pm, Mon, 12 September 22