ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿರುವ ಇಂಗ್ಲೆಂಡ್ ತಂಡ ಇದೀಗ ಇಂದಿನಿಂದ ಎರಡನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದು, ದಿನದಾಟದ ಮೊದಲ ಸೆಷನ್ನ ಮೊದಲ ಐದು ಓವರ್ಗಳಲ್ಲೇ ಟೆಸ್ಟ್ ಕ್ರಿಕೆಟ್ ಇತಿಹಾಸದ ಅತಿ ದೊಡ್ಡ ದಾಖಲೆ ನಿರ್ಮಿಸಿದೆ. ನಾಟಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ವಾಸ್ತವವಾಗಿ, ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಕೇವಲ 4.2 ಓವರ್‌ಗಳಲ್ಲಿ 50 ರನ್ ಕಲೆಹಾಕುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಇಷ್ಟು ಕಡಿಮೆ ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮೊದಲ ತಂಡವೆಂಬ ವಿಶ್ವದಾಖಲೆ ನಿರ್ಮಿಸಿದೆ. ಈ ಮೊದಲು ಈ ದಾಖಲೆ ಕೂಡ ಇಂಗ್ಲೆಂಡ್ ಹೆಸರಿನಲ್ಲಿತ್ತು. 1994 ರಲ್ಲಿ ಇಂಗ್ಲೆಂಡ್ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 4.3 ಓವರ್‌ಗಳಲ್ಲಿ ಐವತ್ತರ ಗಡಿ ದಾಟಿ ಈ ದಾಖಲೆಯನ್ನು ತನ್ನ ಹೆಸರಿಗೆ ಹಾಕಿಕೊಂಡಿತ್ತು. ಆದರೆ ಈಗ 30 ವರ್ಷಗಳ ನಂತರ ತನ್ನದೇ ದಾಖಲೆಯನ್ನು ಮುರಿಯುವಲ್ಲಿ ಆಂಗ್ಲರು ಯಶಸ್ವಿಯಾಗಿದ್ದಾರೆ.
ವಿಶೇಷವೆಂದರೆ ಇಂಗ್ಲೆಂಡ್ ಒಂದಲ್ಲ ಎರಡಲ್ಲ ಮೂರು ಬಾರಿ ಈ ಸಾಧನೆ ಮಾಡಿದೆ. 2002ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ 4.6 ಓವರ್‌ಗಳಲ್ಲಿ 50 ರನ್ ಗಳಿಸಿತ್ತು. ಶ್ರೀಲಂಕಾ ಕೂಡ ಒಮ್ಮೆ ತನ್ನ ಹೆಸರಿನಲ್ಲಿ ಈ ದಾಖಲೆಯನ್ನು ಮಾಡಿದ್ದು, 2004ರಲ್ಲಿ ಕರಾಚಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲ 5.2 ಓವರ್‌ಗಳಲ್ಲಿ ಈ ದಾಖಲೆ ನಿರ್ಮಿಸಿತ್ತು. ಇದಲ್ಲದೆ 2008ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 5.3 ಓವರ್‌ಗಳಲ್ಲಿ ಈ ದಾಖಲೆ ಮಾಡಿತ್ತು.
ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಅತ್ಯಂತ ಕೆಟ್ಟ ಆರಂಭವನ್ನು ಪಡೆದುಕೊಂಡಿತು. ಈ ತಂಡ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಕ್ರೌಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಇದರ ನಂತರ ಬೆನ್ ಡಕೆಟ್, ಒಲಿ ಪೋಪ್ ಜೊತೆಗೂಡಿ ಮುಂದಿನ 23 ಎಸೆತಗಳಲ್ಲಿ ತಂಡದ ಸ್ಕೋರ್ ಅನ್ನು ಐವತ್ತರ ಗಡಿ ದಾಟಿಸಿದರು. ಬೆನ್ ಡಕೆಟ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದ ಅತಿ ವೇಗದ ಅರ್ಧಶತಕವನ್ನು ಸಿಡಿಸಿದ ದಾಖಲೆ ನಿರ್ಮಿಸಿದರು. ಜೊತೆಗೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಡಕೆಟ್, ಒಲಿ ಪೋಪ್ ಜೊತೆ 106 ರನ್‌ಗಳ ಜೊತೆಯಾಟ ನಡೆಸಿದರು. ಅಂತಿಮವಾಗಿ ಬೆನ್ ಡಕೆಟ್ 59 ಎಸೆತಗಳಲ್ಲಿ 71 ರನ್ ಗಳಿಸಿ ಔಟಾದರು. ಡಕೆಟ್ ತನ್ನ ಇನ್ನಿಂಗ್ಸ್ನಲ್ಲಿ ಒಟ್ಟು 14 ಬೌಂಡರಿಗಳನ್ನು ಬಾರಿಸಿದರು.
Back-to-back-to-back-to-back boundaries 😍
🔥 @BenDuckett1 pic.twitter.com/9IqzPtdwra
— England Cricket (@englandcricket) July 18, 2024
ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ ಇನಿಂಗ್ಸ್ ಮತ್ತು 114 ರನ್‌ಗಳ ಜಯ ಸಾಧಿಸಿತ್ತು. ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 121 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 371 ರನ್ ಕಲೆಹಾಕಿತ್ತು. ಇದಾದ ಬಳಿಕ ವೆಸ್ಟ್ ಇಂಡೀಸ್ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 136 ರನ್ ಗಳಿಸಲಷ್ಟೇ ಶಕ್ತವಾಗಿದ್ದು, ಇದರ ಪರಿಣಾಮ ಈ ತಂಡ ಇನಿಂಗ್ಸ್ ಸೋಲು ಕಂಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ