
ತವರಿನಲ್ಲಿ ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಸರಣಿ ಗೆಲ್ಲಲು ವಿಫಲವಾದ ಇಂಗ್ಲೆಂಡ್, ಈಗ ತನ್ನ ಕಠಿಣ ಸವಾಲಿನತ್ತ ಕಣ್ಣಿಟ್ಟಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಆಶಸ್ ಸರಣಿಗೆ (Ashes series) ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಪ್ರಕಟಿಸಿದೆ. ನವೆಂಬರ್ 21 ರಿಂದ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗುವ ಆಶಸ್ಗಾಗಿ ಇಂಗ್ಲೆಂಡ್ ಆಯ್ಕೆ ಸಮಿತಿ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಅಚ್ಚರಿಯ ಸಂಗತಿಯೆಂದರೆ ಭಾರತದ ವಿರುದ್ಧ ಹೀನಾಯ ಪ್ರದರ್ಶನ ನೀಡಿದ್ದ ಸ್ಟಾರ್ ಬ್ಯಾಟ್ಸ್‌ಮನ್ ಓಲಿ ಪೋಪ್ (Ollie Pope ) ಅವರನ್ನು ಉಪನಾಯಕ ಸ್ಥಾನದಿಂದ ತೆಗೆದುಹಾಕಲಾಗಿದೆ. ಅವರ ಸ್ಥಾನದಲ್ಲಿ, ಏಕದಿನ ಮತ್ತು ಟಿ20 ತಂಡಗಳ ಹೊಸ ನಾಯಕ ಹ್ಯಾರಿ ಬ್ರೂಕ್ ಅವರನ್ನು ಈ ಸ್ವರೂಪಕ್ಕೆ ಉಪನಾಯಕನನ್ನಾಗಿ ನೇಮಿಸಲಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹೊಸ ಆವೃತ್ತಿಯಲ್ಲಿ ಇಂಗ್ಲೆಂಡ್‌ನ ಎರಡನೇ ಟೆಸ್ಟ್ ಸರಣಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಈ ಬಾರಿ, ಆಶಸ್ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಭಾರತ ವಿರುದ್ಧದ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಗಾಯಗೊಂಡು ಅಂತಿಮ ಪಂದ್ಯದಿಂದ ಹೊರಗುಳಿದ ಅನುಭವಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತೊಮ್ಮೆ ತಂಡವನ್ನು ಮುನ್ನಡೆಸಲಿದ್ದಾರೆ. ಆದಾಗ್ಯೂ, ಸ್ಟೋಕ್ಸ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಸರಣಿಯ ಆರಂಭದ ವೇಳೆಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಇಂಗ್ಲಿಷ್ ಮಂಡಳಿ ತಿಳಿಸಿದೆ.
ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಶತಕ ಗಳಿಸಿದ ನಂತರ, ಪೋಪ್ ಸರಣಿಯ ಉದ್ದಕ್ಕೂ ವಿಫಲರಾದರು. ನಂತರ, ಅಂತಿಮ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪಡೆದಾಗ, ಅವರು ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾದರು, ಇದರ ಪರಿಣಾಮವಾಗಿ ಸರಣಿ 2-2 ರಿಂದ ಡ್ರಾ ಆಯಿತು. ಆದ್ದರಿಂದ, ಆಯ್ಕೆದಾರರು ಈ ಜವಾಬ್ದಾರಿಯನ್ನು ಭಾರತದ ವಿರುದ್ಧ ಇಂಗ್ಲೆಂಡ್‌ನ ಸರಣಿಯ ಆಟಗಾರ ಎಂದು ಹೆಸರಿಸಲ್ಪಟ್ಟ ಯುವ ಬ್ಯಾಟ್ಸ್‌ಮನ್ ಬ್ರೂಕ್‌ಗೆ ವಹಿಸಿದ್ದಾರೆ. ಈ ಪ್ರವಾಸಕ್ಕಾಗಿ ಪೋಪ್ ಇನ್ನೂ ತಂಡದಲ್ಲಿ ಸ್ಥಾನ ಹೊಂದಿದ್ದರೂ, ಆಡುವ ಹನ್ನೊಂದರಲ್ಲಿ ಅವರ ಸ್ಥಾನ ಇನ್ನು ದೃಢೀಕರಿಸಲ್ಪಟ್ಟಿಲ್ಲ.
ತಂಡದ ಬಗ್ಗೆ ಹೇಳುವುದಾದರೆ, ಈ ಸರಣಿಗಾಗಿ ಗಾಯದಿಂದ ಚೇತರಿಸಿಕೊಂಡಿರುವ ವೇಗದ ಬೌಲರ್ ಮಾರ್ಕ್ ವುಡ್ ಅವರ ಫಿಟ್ನೆಸ್ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಸಮಾಧಾನ ತಂದಿದೆ. ಸ್ಪಿನ್ನರ್ ಶೋಯೆಬ್ ಬಶೀರ್ ಕೂಡ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಸುಮಾರು 10 ತಿಂಗಳ ನಂತರ ತಂಡಕ್ಕೆ ಮರಳುತ್ತಿರುವ ವೇಗದ ಬೌಲರ್ ಮ್ಯಾಥ್ಯೂ ಪಾಟ್ಸ್ ಅವರನ್ನು ಆಯ್ಕೆದಾರರು ತಂಡಕ್ಕೆ ಕರೆಸಿಕೊಂಡಿದ್ದಾರೆ. ಸ್ಪಿನ್ ಆಲ್ ರೌಂಡರ್ ವಿಲ್ ಜ್ಯಾಕ್ಸ್ ಕೂಡ ಮೂರು ವರ್ಷಗಳ ನಂತರ ತಂಡಕ್ಕೆ ಮರಳಿದ್ದಾರೆ. ಜ್ಯಾಕ್ಸ್ 2022 ರ ಪಾಕಿಸ್ತಾನ ಪ್ರವಾಸದ ಸಮಯದಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು ಆದರೆ ಅಂದಿನಿಂದ ಟೆಸ್ಟ್ ತಂಡದಿಂದ ದೂರವಿದ್ದಾರೆ. ಈಗ, ಅವರು ಆಸ್ಟ್ರೇಲಿಯಾದಲ್ಲಿ ಈ ಸ್ವರೂಪದಲ್ಲಿ ತಮ್ಮ ಪ್ರತಿಭೆಯನ್ನು ಸಾಭೀತುಪಡಿಸಬಹುದು.
8 ತಿಂಗಳಲ್ಲಿ ನಾಲ್ವರು ಸೂಪರ್ ಸ್ಟಾರ್ಗಳ ನಿವೃತ್ತಿ; ಭಾರತ ಟೆಸ್ಟ್ ತಂಡದ ಸುವರ್ಣ ಯುಗಾಂತ್ಯ
ಆಶಸ್ ಸರಣಿಗೆ ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮೀ ಸ್ಮಿತ್, ಜೋಶ್ ಟಂಗ್, ಮಾರ್ಕ್ ವುಡ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ