ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದರು. ಮಳೆಯ ಕಾರಣ ಕೇವಲ 39 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಬೆನ್ ಡಕೆಟ್ ಮತ್ತು ಫಿಲ್ ಸಾಲ್ಟ್ ಉತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 48 ರನ್ಗಳ ಜೊತೆಯಾಟವಾಡಿದ ಬಳಿಕ ಸಾಲ್ಟ್ (22) ಔಟಾದರು. ಈ ವೇಳೆ ಕಣಕ್ಕಿಳಿದ ವಿಲ್ ಜಾಕ್ಸ್ ಕೇವಲ 10 ರನ್ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ಬೆನ್ ಡಕೆಟ್ ಹಾಗೂ ಹ್ಯಾರಿ ಬ್ರೂಕ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
62 ಎಸೆತಗಳನ್ನು ಎದುರಿಸಿದ ಬೆನ್ ಡಕೆಟ್ 1 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 63 ರನ್ಗಳ ಕೊಡುಗೆ ನೀಡಿದರೆ, ಹ್ಯಾರಿ ಬ್ರೂಕ್ 58 ಎಸೆತಗಳಲ್ಲಿ 11 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 87 ರನ್ ಚಚ್ಚಿದ್ದರು.
ಇನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಲಿಯಾಮ್ ಲಿವಿಂಗ್ಸ್ಟೋನ್ ಕೇವಲ 27 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 62 ರನ್ ಬಾರಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು ನಿಗದಿತ 39 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 312 ರನ್ ಕಲೆಹಾಕಿತು.
39 ಓವರ್ಗಳಲ್ಲಿ 313 ರನ್ಗಳ ಕಠಿಣ ಗುರಿ ಪಡೆದ ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ (28) ಹಾಗೂ ಟ್ರಾವಿಸ್ ಹೆಡ್ (34) ಉತ್ತಮ ಆರಂಭ ನೀಡಿದ್ದರು. ಮೊದಲ ವಿಕೆಟ್ಗೆ 68 ರನ್ ಪೇರಿಸಿದ್ದ ಈ ಜೋಡಿಯನ್ನು ಬ್ರೈಡನ್ ಕಾರ್ಸ್ ಬೇರ್ಪಡಿಸಿದ್ದರು.
ಇದಾದ ಬಳಿಕ ನಡೆದಿದ್ದ ಇಂಗ್ಲೆಂಡ್ ವೇಗಿಗಳ ಮಾರಕ ದಾಳಿ. ಅತ್ಯುತ್ತಮ ದಾಳಿ ಸಂಘಟಿಸಿದ ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್ ಹಾಗೂ ಮ್ಯಾಥ್ಯೂ ಪಾಟ್ಸ್ ಇಡೀ ಪಂದ್ಯವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಪರಿಣಾಮ ಆಸ್ಟ್ರೇಲಿಯಾ ಬ್ಯಾಟರ್ಗಳಿಗೆ ರನ್ಗಳಿಸುವುದೇ ಸವಾಲಾಗಿ ಪರಿಣಮಿಸಿತು.
ಇದರ ಸಂಪೂರ್ಣ ಲಾಭ ಪಡೆದ ಇಂಗ್ಲೆಂಡ್ ವೇಗಿ ಆಸೀಸ್ ಬ್ಯಾಟರ್ಗಳ ಮೇಲೆ ಒತ್ತಡ ಹೇರಿದರು. ಪರಿಣಾಮ ಸ್ಟೀವ್ ಸ್ಮಿತ್ (5), ಜೋಶ್ ಇಂಗ್ಲಿಸ್ (8), ಮಾರ್ನಸ್ ಲಾಬುಶೇನ್ (4) ಕೇವಲ ಒಂದಂಕಿ ಮೊತ್ತಗಳಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು.
ಆ ಬಳಿಕ ಬಂದ ಅಲೆಕ್ಸ್ ಕ್ಯಾರಿ (13), ಗ್ಲೆನ್ ಮ್ಯಾಕ್ಸ್‌ವೆಲ್ (2) ಹಾಗೂ ಶಾನ್ ಅಬಾಟ್ (10) ಬಂದ ವೇಗದಲ್ಲೇ ಹಿಂತಿರುಗಿದ್ದರು. ಪರಿಣಾಮ ಆಸ್ಟ್ರೇಲಿಯಾ ತಂಡವು 24.4 ಓವರ್ಗಳಲ್ಲಿ 126 ರನ್ಗಳಿಸಿ ಆಲೌಟ್ ಆಯಿತು.
ಇಂಗ್ಲೆಂಡ್ ಪರ ಮ್ಯಾಥ್ಯೂ ಪಾಟ್ಸ್ 8 ಓವರ್ಗಳಲ್ಲಿ 38 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಜೋಫ್ರಾ ಆರ್ಚರ್ 7 ಓವರ್ಗಳಲ್ಲಿ 33 ರನ್ ನೀಡಿ 3 ವಿಕೆಟ್ ಪಡೆದರು. ಇನ್ನು ಬ್ರೈಡನ್ ಕಾರ್ಸ್ 6 ಓವರ್ಗಳಲ್ಲಿ 36 ರನ್ ಬಿಟ್ಟು ಕೊಟ್ಟು 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಈ ಮೂಲಕ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ 186 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡವು 2-2 ಅಂತರದಿಂದ ಸಮಬಲ ಸಾಧಿಸಿದ್ದು, ಭಾನುವಾರ ನಡೆಯಲಿರುವ ಐದನೇ ಮ್ಯಾಚ್ ಇದೀಗ ಫೈನಲ್ ಫೈಟ್ ಆಗಿ ಮಾರ್ಪಟ್ಟಿದೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ , ಬೆನ್ ಡಕೆಟ್ , ವಿಲ್ ಜ್ಯಾಕ್ಸ್ , ಹ್ಯಾರಿ ಬ್ರೂಕ್ (ನಾಯಕ) , ಜಾಮಿ ಸ್ಮಿತ್ (ವಿಕೆಟ್ ಕೀಪರ್) , ಲಿಯಾಮ್ ಲಿವಿಂಗ್ಸ್ಟೋನ್ , ಜಾಕೋಬ್ ಬೆಥೆಲ್ , ಬ್ರೈಡನ್ ಕಾರ್ಸ್ , ಜೋಫ್ರಾ ಆರ್ಚರ್ , ಮ್ಯಾಥ್ಯೂ ಪಾಟ್ಸ್ , ಆದಿಲ್ ರಶೀದ್.
ಇದನ್ನೂ ಓದಿ: IPL 2025: ಧೋನಿಯ ಸಂಭಾವನೆ ಕಡಿತ: ಅತೀ ಕಡಿಮೆ ಮೊತ್ತ ಪಡೆಯಲಿರುವ MSD
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ (ನಾಯಕ) , ಸ್ಟೀವ್ ಸ್ಮಿತ್ , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಮಾರ್ನಸ್ ಲಾಬುಶೆನ್, ಅಲೆಕ್ಸ್ ಕ್ಯಾರಿ , ಗ್ಲೆನ್ ಮ್ಯಾಕ್ಸ್‌ವೆಲ್ , ಸೀನ್ ಅಬಾಟ್ , ಮಿಚೆಲ್ ಸ್ಟಾರ್ಕ್ , ಆ್ಯಡಂ ಝಂಪಾ , ಜೋಶ್ ಹ್ಯಾಝಲ್ವುಡ್.
Published On - 7:28 am, Sat, 28 September 24