ವೈಭವ್​ನ ಕಟ್ಟಿಹಾಕಲು ರಣತಂತ್ರ ರೆಡಿ ಇದೆ: ಹ್ಯಾರಿ ಬ್ರೂಕ್

India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯು ಬುಧವಾರದಿಂದ (ಜುಲೈ 1) ಶುರುವಾಗಲಿದೆ. ಐದು ಪಂದ್ಯಗಳ ಈ ಸರಣಿಯ ಮೂಲಕ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸುವ ಇರಾದೆಯಲ್ಲಿದ್ದಾರೆ. ಒಂದು ವೇಳೆ ಕಣಕ್ಕಿಳಿದರೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ವೈಭವ್ ಪಾಲಾಗಲಿದೆ.

ವೈಭವ್​ನ ಕಟ್ಟಿಹಾಕಲು ರಣತಂತ್ರ ರೆಡಿ ಇದೆ: ಹ್ಯಾರಿ ಬ್ರೂಕ್
Harry Brook
Image Credit source: TOI

Updated on: Jul 01, 2026 | 1:47 PM

ಇಂಗ್ಲೆಂಡ್ ಮತ್ತು ಭಾರತ ನಡುವಣ ಐದು ಮ್ಯಾಚ್​ಗಳ ಟಿ20 ಸರಣಿಯು ಇಂದಿನಿಂದ (ಜು.1) ಶುರುವಾಗಲಿದೆ. ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್​ ಸೈಡ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡಲಿದ್ದಾರಾ ಎಂಬುದೇ ಕುತೂಹಲ. ಈ ಕುತೂಹಲದ ನಡುವೆ ಯುವ ದಾಂಡಿಗನನ್ನು ಕಟ್ಟಿಹಾಕಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದಿದ್ದಾರೆ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ ಹ್ಯಾರಿ ಬ್ರೂಕ್​ಗೆ ವೈಭವ್ ಸೂರ್ಯವಂಶಿಯ ಬಗ್ಗೆ ಕೇಳಲಾಗಿದೆ.

ಈ ಬಗ್ಗೆ ಮಾತನಾಡಿದ ಬ್ರೂಕ್, “ವೈಭವ್ ಸೂರ್ಯವಂಶಿ ಅತ್ಯಂತ ಅದ್ಭುತ ಪ್ರತಿಭೆಯುಳ್ಳ ಆಟಗಾರನಂತೆ ಕಾಣಿಸುತ್ತಿದ್ದಾರೆ, ಕಳೆದ ಒಂದೂವರೆ ವರ್ಷದಲ್ಲಿ ಅವರು ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಅವರನ್ನು ಕಟ್ಟಿಹಾಕಲು ನಾವು ತೆರೆಮರೆಯಲ್ಲಿ ಸಾಕಷ್ಟು ತಂತ್ರಗಳನ್ನು ರೂಪಿಸಿದ್ದೇವೆ. ಅವು ಮೈದಾನದಲ್ಲಿ ವರ್ಕ್ ಆಗಲಿವೆ ಎಂದು ಭಾವಿಸುತ್ತೇವೆ” ಎಂದಿದ್ದಾರೆ.

ಇಂಗ್ಲೆಂಡ್ ರಣತಂತ್ರ:

ವೈಭವ್ ಸೂರ್ಯವಂಶಿ ಇನ್ನೂ ಕೂಡ ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡದೇ ಇದ್ದರೂ, ಅವರ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಇಂಗ್ಲೆಂಡ್ ಕ್ಯಾಂಪ್ ಬೆದರಿದೆ ಎಂಬುದೇ ಸತ್ಯ. ಏಕೆಂದರೆ ಯುವ ಆಟಗಾರನನ್ನು ಕಟ್ಟಿ ಹಾಕಲು ಈಗಾಗಲೇ ಇಂಗ್ಲೆಂಡ್ ಬೌಲರ್​ಗಳು ವೈಭವ್ ಬ್ಯಾಟಿಂಗ್​ನ ವೀಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.

ಅಲ್ಲದೆ ವೈಭವ್ ಆರ್ಭಟವನ್ನು ತಡೆಯಲು ವಿಶೇಷ ಬೌಲಿಂಗ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಈ ಮೂಲಕ ವೈಭವ್ ಸೂರ್ಯವಂಶಿಯ ಕಟ್ಟಿ ಹಾಕಲು ನಾವು ಸಕಲ ರೀತಿಯಲ್ಲೂ ಸಿದ್ಧರಾಗಿದ್ದೇವೆ ಎಂಬುದನ್ನು ಹ್ಯಾರಿ ಬ್ರೂಕ್ ಬಹಿರಂಗಪಡಿಸಿದ್ದಾರೆ.

ವೈಭವ್ ಆರ್ಭಟ:

15 ವರ್ಷದ ಎಡಗೈ ಓಪನರ್ ವೈಭವ್ ಸೂರ್ಯವಂಶಿ ಐಪಿಎಲ್ 2026 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸಿದ್ದರು. ಆಡಿದ 16 ಪಂದ್ಯಗಳಲ್ಲಿ ಬರೋಬ್ಬರಿ 237.30 ರ ಸ್ಟ್ರೈಕ್ ರೇಟ್‌ನಲ್ಲಿ 776 ರನ್ ಚಚ್ಚಿ ಇಡೀ ಟೂರ್ನಿಯಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಈ ಮೂಲಕ ‘ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್’ (MVP) ಮತ್ತು ‘ಎಮರ್ಜಿಂಗ್ ಪ್ಲೇಯರ್’ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.

ಇದನ್ನೂ ಓದಿ: RCB ಫ್ರಾಂಚೈಸಿ ಮಾರಾಟ: ಇನ್ಮುಂದೆ 2 ತಂಡಗಳಿಗೆ ಹೊಸ ಮಾಲೀಕರು!

ಹೊಸ ಇತಿಹಾಸ:

ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಈ 5 ಪಂದ್ಯಗಳ ಟಿ20 ಸರಣಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಭಾರತ ತಂಡದ ಪರ ಪಾದಾರ್ಪಣೆ ಮಾಡಿದರೆ, ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆಯಲಿದ್ದಾರೆ. ಈ ಹಿಂದೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ 16 ನೇ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ್ದರು. ಇದೀಗ ಈ ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ ವೈಭವ್ ಸೂರ್ಯವಂಶಿ.

 

Follow Us