ಭೀಕರ ಕಾರು ಅಪಘಾತ; ಸ್ವಲ್ಪದರಲ್ಲೇ ಬದುಕುಳಿದ ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್..!

|

Updated on: Jul 05, 2023 | 11:09 AM

Praveen Kumar Car Accident: ಭಾರತದ ಮಾಜಿ ವೇಗದ ಬೌಲರ್ ಪ್ರವೀಣ್ ಕುಮಾರ್ ಭೀಕರ ಕಾರು ಅಪಘಾತಕ್ಕೀಡಾಗಿದ್ದು, ಜುಲೈ 4 ರ ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಭೀಕರ ಕಾರು ಅಪಘಾತ; ಸ್ವಲ್ಪದರಲ್ಲೇ ಬದುಕುಳಿದ ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್..!
ಅಪಘಾತಕ್ಕೊಳಗಾದ ಕಾರು ಹಾಗೂ ಪ್ರವೀಣ್ ಕುಮಾರ್
Follow us on

ಟೀಂ ಇಂಡಿಯಾದ (Team India) ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ (Rishabh Pant) ಕಾರು ಅಪಘಾತಕ್ಕೀಡಾದ ನೆನಪು ಇನ್ನೂ ಮಾಸಿಲ್ಲ. ಆದರೆ ಅಷ್ಟರಲ್ಲೇ ಟೀಂ ಇಂಡಿಯಾದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಭೀಕರ ಕಾರು ಅಪಘಾತಕ್ಕೀಡಾಗಿದ್ದಾರೆ (Car Accident) ಎಂದು ವರದಿಯಾಗಿದೆ. ಭಾರತದ ಮಾಜಿ ವೇಗದ ಬೌಲರ್ ಪ್ರವೀಣ್ ಕುಮಾರ್ (praveen kumar) ಭೀಕರ ಕಾರು ಅಪಘಾತಕ್ಕೀಡಾಗಿದ್ದು, ಜುಲೈ 4 ರ ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮೀರತ್‌ನಲ್ಲಿರುವ ಅವರ ಮನೆಗೆ ತೆರಳುತ್ತಿರುವಾಗ ಪ್ರವೀಣ್ ಕುಮಾರ ಚಲಾಯಿಸುತ್ತಿದ್ದ ಲ್ಯಾಂಡ್ ರೋವರ್‌ಗೆ ಕಾರಿಗೆ ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ವೇಳೆ ಕಾರಿನಲ್ಲಿ ಪ್ರವೀಣ್ ಕುಮಾರ ಜೊತೆಗೆ ಅವರ ಹಿರಿಯ ಮಗ ಕೂಡ ಇದ್ದರು ಎಂದು ವರದಿಯಾಗಿದ್ದು, ಇಬ್ಬರೂ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಟೀಂ ಇಂಡಿಯಾ ಮಾಜಿ ವೇಗಿ ಪ್ರವೀಣ್ ಕುಮಾರ್ ಮಂಗಳವಾರ ರಾತ್ರಿ ಪಾಂಡವ ನಗರದಿಂದ ಅವರ ಮನೆಗೆ ಮರಳುತ್ತಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಕಮಿಷನರ್ ನಿವಾಸದ ಎದುರು ಅತೀವೇಗವಾಗಿ ಬಂದ ಕಾರೊಂದು ಪ್ರವೀಣ್ ಕುಮಾರ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪ್ರವೀಣ್ ಚಲಾಯಿಸುತ್ತಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಅಪಘಾತದಲ್ಲಿ ಪ್ರವೀಣ್ ಕುಮಾರ್ ಮತ್ತು ಅವರ ಮಗನಿಗೆ ಯಾವುದೇ ಹಾನಿಯಾಗಿಲ್ಲ.

Rishabh Pant: ಕಾರು ಅಪಘಾತದ ಬಳಿಕ ತನ್ನ ಮೊದಲ ಫೋಟೋ ಹಂಚಿಕೊಂಡ ರಿಷಭ್ ಪಂತ್: ಇಲ್ಲಿದೆ ನೋಡಿ

ಕಾರಿನ ಚಾಲಕನ ಬಂಧನ

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರ ಗುಂಪು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಅಪಘಾತಕ್ಕೆ ಕಾರಣನಾದ ಮತ್ತೊಂದು ಕಾರಿನ ಚಾಲಕನ್ನು ಹಿಡಿದಿದ್ದಾರೆ. ಪ್ರವೀಣ್ ಕುಮಾರ್ ಅವರ ಕಾರು ಅಪಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ಸಿವಿಲ್ ಲೈನ್ ಪೊಲೀಸ್ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಕಾರಿನ ಚಾಲಕನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ನಗರ ಎಸ್ಪಿ ಪಿಯೂಷ್ ಕುಮಾರ್, ಅಪಘಾತಕ್ಕೆ ಕಾರಣನಾದ ಕಾರಿನ ಚಾಲಕನನ್ನು ಬಂಧಿಸಲಾಗಿದ್ದು, ಕ್ರಿಕೆಟಿಗ ಪ್ರವೀಣ್ ಕುಮಾರ್ ಮತ್ತು ಅವರ ಮಗನನ್ನು ಸ್ಥಳದಿಂದ ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಡಲಾಗಿದೆ ಎಂದರು.

ಪ್ರವೀಣ್ ಕುಮಾರ್ ವೃತ್ತಿ ಜೀವನ

ಟೀಂ ಇಂಡಿಯಾದಲ್ಲಿ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದ ಪ್ರವೀಣ್ ಕುಮಾರ್, ಪ್ರಸ್ತುತ ಮೀರತ್‌ನ ಮುಲ್ತಾನ್ ನಗರದಲ್ಲಿ ನೆಲೆಸಿದ್ದಾರೆ. ಆಸ್ಟ್ರೇಲಿಯಾದಲ್ಲಿ 2008ರಂದು ನಡೆದ CB ಸರಣಿಯಲ್ಲಿ ಭಾರತ ಗೆಲ್ಲುವಲ್ಲಿ ಪ್ರವೀಣ್ ನಿರ್ಣಾಯಕ ಪಾತ್ರವಹಿಸಿದ್ದರು. ಪ್ರವೀಣ್ ಕುಮಾರ್ ಟೀಂ ಇಂಡಿಯಾ ಪರ 6 ಟೆಸ್ಟ್ ಪಂದ್ಯಗಳಲ್ಲಿ 27 ವಿಕೆಟ್, 68 ಏಕದಿನ ಪಂದ್ಯಗಳಲ್ಲಿ 77 ವಿಕೆಟ್ ಮತ್ತು 10 ಟಿ20 ಪಂದ್ಯಗಳಲ್ಲಿ 8 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ ಐಪಿಎಲ್​ನಲ್ಲಿ 119 ಪಂದ್ಯಗಳನ್ನಾಡಿರುವ ಪ್ರವೀಣ್ 90 ವಿಕೆಟ್ ಪಡೆದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:58 am, Wed, 5 July 23