ಭಾರತ ಕ್ರಿಕೆಟ್ ತಂಡ ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಗಿಸಿದ್ದು ಮುಂದಿನ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಮತ್ತು ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗುತ್ತಿದೆ. ಕಳೆದ ವಾರವಷ್ಟೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐರ್ಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟ ಮಾಡಿತ್ತು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ತಂಡವನ್ನು ಮುನ್ನಡೆಸಿದರೆ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಟೀಮ್ ಇಂಡಿಯಾದ ಕೆಲ ಸ್ಟಾರ್ ಆಟಗಾರರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಕಾರಣ ಐರ್ಲೆಂಡ್ ವಿರುದ್ಧದ ಸರಣಿಗೆ ಕೆಲ ಹೊಸ ಮುಖಗಳಿಗೆ ಅವಕಾಶ ಕೂಡ ನೀಡಲಾಗಿದೆ. ಆದರೆ, ರಾಹುಲ್ ತೇವಾಟಿಯ (Rahul Tewatia) ಅವರಿಗೆ ಇನ್ನೂ ಅದೃಷ್ಟ ಬಾಗಿಲು ತೆರೆದಿಲ್ಲ.
ಕಳೆದ ಎರಡು ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತೇವಾಟಿಯ ನಿರೀಕ್ಷೆ ಹುಟ್ಟಿದ್ದಾರೆ. ಈ ಬಾರಿ ಐಪಿಎಲ್ 2022 ರ ಚಾಂಪಿಯನ್ ತಂಡ ಗುಜರಾತ್ ಟೈಟಾನ್ಸ್ ಪರ ಆಡಿ ಫಿನಿಶರ್ ಆಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಇವರಿಗೆ ಟೀಮ್ ಇಂಡಿಯಾದಲ್ಲಿ ಜಾಗ ಸಿಗಲಿದೆ ಎಂದು ನಂಬಲಾಗಿತ್ತು. ಆದರೆ, ಐರ್ಲೆಂಡ್ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟ ಮಾಡುವಾಗ ತೇವಾಟಿಯ ಹೆಸರು ಇದರಲ್ಲಿ ಇರಲಿಲ್ಲ. ಬದಲಾಗಿ ರಾಹುಲ್ ತ್ರಿಪಾಠಿಗೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದಿಂದ ಬುಲಾವ್ ಬಂದಿದೆ. ಸಂಜು ಸ್ಯಾಮ್ಸನ್ ಕೂಡ ತಂಡದಲ್ಲಿ ಮರಳಿ ಸ್ಥಾನ ಪಡೆದಿದ್ದಾರೆ.
ಇದರಿಂದ ಬೇಸರಗೊಂಡ ರಾಹುಲ್ ತೇವಾಟಿಯ ಟ್ವಿಟರ್ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು. “ನಿರೀಕ್ಷೆಗಳು ನೋವುಂಟುಮಾಡುತ್ತವೆ” ಎಂದು ಬರೆದುಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ಸದ್ದು ಕೂಡ ಮಾಡಿತ್ತು. ಸದ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್, ಯುವ ಆಲ್‌ರೌಂಡರ್ ತೇವಾಟಿಯಗೆ ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದಾರೆ.
ENG vs IND: ಕೊಹ್ಲಿ-ರೋಹಿತ್ ಫೋಟೋ ವೈರಲ್: ಆಂಗ್ಲರ ನಾಡಲ್ಲಿ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸ
“ಭಾರತದಲ್ಲಿ ಪ್ರತಿಭಾನ್ವಿತ ಆಟಗಾರರಿಗೆ ಕೊರತೆ ಇಲ್ಲ. ಆಸ್ಟ್ರೇಲಿಯಾದ ಪಿಚ್‌ಗಳಿಗೆ ಅನುಗುಣವಾಗಿ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವಕಾಶ ಸಿಗದ ಆಟಗಾರರು ಟ್ವಿಟರ್ ಕಡೆಗೆ ಗಮನ ನೀಡುವ ಬದಲು, ಆಟದ ಕಡೆಗೆ ಗಮನ ನೀಡಬೇಕು. ಮುಂದಿನ ಅವಕಾಶಕ್ಕಾಗಿ ಶ್ರಮಿಸಬೇಕು. ತಮ್ಮನ್ನು ಆಯ್ಕೆ ಮಾಡದೇ ಇರಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಿಸಬೇಕು,” ಎಂದು ಸ್ಮಿತ್ ಖಡಕ್ ಆಗಿ ಹೇಳಿದ್ದಾರೆ.
ಇನ್ನು ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನಾಡಲು ಇಂಗ್ಲೆಂಡ್ ಪ್ರವಾಸ ಮಾಡಲಿರುವ ಕಾರಣ ಐರ್ಲೆಂಡ್ ಸರಣಿಯಿಂದ ಹೊರಗುಳಿದಿದ್ದಾರೆ. ಐರ್ಲೆಂಡ್ ವಿರುದ್ಧ ಭಾರತ ಜೂನ್ 26, 28 ರಂದು ಎರಡು ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಈ ಸರಣಿಗೆ ವಿವಿಎಸ್ ಲಕ್ಷ್ಮಣ್ ಅವರನ್ನು ಕೋಚ್ ಆಗಿ ಕೆಲಸ ಮಾಡಲು ಬಿಸಿಸಿಐ ಕೋರಿದೆ. ಇದಕ್ಕೆ ವಿವಿಎಸ್ ಲಕ್ಷ್ಮಣ್ ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ.
ಭಾರತ ತಂಡ:
ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಆರ್. ಬಿಷ್ಣೋಯಿ, ಹರ್ಷಲ್ ಪಟೇಲ್, ಆರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಆವೇಶ್ ಖಾನ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.