ತನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿ, ನಂತರದ ಸೀಸನ್ನಲ್ಲೂ ಫೈನಲ್ಗೇರಿದ್ದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ಕಳೆದ ಆವೃತ್ತಿಯ ಪ್ರದರ್ಶನ ಅಷ್ಟಕಷ್ಟೆ. ಹೀಗಾಗಿ ಮುಂದಿನ ಆವೃತ್ತಿಗೆ ಬಲಿಷ್ಠ ತಂಡವನ್ನು ಕಟ್ಟಲು ಸಿದ್ದವಾಗಿರುವ ಗುಜರಾತ್, ಮೆಗಾ ಹರಾಜಿಗೂ ಮುನ್ನ ಐವರು ಆಟಗಾರರನ್ನು ತನ್ನಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಅವರಲ್ಲಿ ನಾಯಕ ಶುಭ್‌ಮನ್ ಗಿಲ್, ರಶೀದ್ ಖಾನ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಶಾರುಖ್ ಖಾನ್ ಸೇರಿದರೆ, ಉಳಿದಂತೆ ಅನುಭವಿ ಆಟಗಾರರಾದ ಮೊಹಮ್ಮದ್ ಶಮಿ, ಡೇವಿಡ್ ಮಿಲ್ಲರ್, ಉಮೇಶ್ ಯಾದವ್, ಕೇನ್ ವಿಲಿಯಮ್ಸನ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.
ಗುಜರಾತ್ ಟೈಟಾನ್ಸ್ ಒಟ್ಟು 5 ಆಟಗಾರರನ್ನು ಉಳಿಸಿಕೊಂಡಿದೆ. ಅದರಲ್ಲಿ ಅಫ್ಘಾನಿಸ್ತಾನದ ಸ್ಟಾರ್ ಪ್ಲೇಯರ್ ರಶೀದ್ ಖಾನ್ರನ್ನು ಗರಿಷ್ಠ 18 ಕೋಟಿ ರೂ.ಗೆ ಉಳಿಸಿಕೊಂಡರೆ ನಾಯಕ ಶುಭ್‌ಮನ್ ಗಿಲ್ಗೆ 16.5 ಕೋಟಿ ನೀಡಿ ಎರಡನೇ ಆಯ್ಕೆಯಾಗಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಹಾಗೆಯೇ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಅವರನ್ನು 8.5 ಕೋಟಿ ರೂ.ಗೆ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಈ ಮೂವರನ್ನು ಹೊರತುಪಡಿಸಿ ರಾಹುಲ್ ತೆವಾಟಿಯಾ ಮತ್ತು ಶಾರುಖ್ ಖಾನ್ ಅವರನ್ನು ತಲಾ 4 ಕೋಟಿ ರೂ.ಗೆ ಅನ್‌ಕ್ಯಾಪ್ಡ್ ಆಟಗಾರರಾಗಿ ಉಳಿಸಿಕೊಳ್ಳಲಾಗಿದೆ.
ಶುಬ್‌ಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡ ಕೊನೆಯ ಸೀಸನ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಗುಜರಾತ್ ಟೈಟಾನ್ಸ್ ತಂಡ ಆಡಿದ 14 ಪಂದ್ಯಗಳಲ್ಲಿ 5ರಲ್ಲಿ ಮಾತ್ರ ಗೆದ್ದಿದ್ದರೆ, 7 ಪಂದ್ಯಗಳಲ್ಲಿ ಸೋಲು ಅನುಭವಿಸಬೇಕಾಯಿತು. ಆದಾಗ್ಯೂ, ಇದರ ಹೊರತಾಗಿಯೂ, ಫ್ರಾಂಚೈಸ್ ತನ್ನ ಇಬ್ಬರು ಸ್ಟಾರ್ ಆಟಗಾರರಾದ ನಾಯಕ ಶುಭ್‌ಮನ್ ಗಿಲ್ ಮತ್ತು ರಶೀದ್ ಖಾನ್ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ಗುಜರಾತ್ ತಂಡದಲ್ಲಿ ಅನೇಕ ಅತ್ಯುತ್ತಮ ಆಟಗಾರರು ಇದ್ದು, ಅವರೆಲ್ಲರು ಈಗ ಮೆಗಾ ಹರಾಜಿನ ಭಾಗವಾಗಲಿದ್ದಾರೆ.
ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ನೂರ್ ಅಹ್ಮದ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಕಾರ್ತಿಕ್ ತ್ಯಾಗಿ, ಸಂದೀಪ್ ವಾರಿಯರ್, ಅಭಿನವ್ ಮನೋಹರ್, ಶರತ್ ಬಿಆರ್, ದರ್ಶನ್ ನಲ್ಕಂಡೆ , ಜಯಂತ್ ಯಾದವ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಜೋಶುವಾ ಲಿಟಲ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್, ಅಜ್ಮತುಲ್ಲಾ ಒಮರ್ಜಾಯ್, ಮಾನವ್ ಸುತಾರ್, ಗುರ್ನೂರ್ ಬ್ರಾರ್ ತಂಡದಿಂದ ಹೊರಬಿದ್ದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Thu, 31 October 24