
ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 (Syed Mushtaq Ali T20) ಟ್ರೋಫಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಕೂಡ ಆಡುತ್ತಿದ್ದಾರೆ. ಬಿಸಿಸಿಐ (BCCI) ನಿಯಮ ಹೊರಡಿಸಿದ ಬಳಿಕ ರಾಷ್ಟ್ರೀಯ ತಂಡದಿಂದ ಹೊರಗಿರುವ ಪ್ರತಿಯೊಬ್ಬರು ದೇಶೀ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇದರಿಂದಾಗಿ ದೇಶಿ ಟೂರ್ನಿಗಳನ್ನು ನೋಡಲು ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಅಭಿಮಾನಿಗಳ ಆಗಮನವೇ ಆಯೋಜಕರಿಗೆ ದೊಡ್ಡ ತಲೆನೋವು ತಂದಿದ್ದು, ಮುನ್ನೇಚರಿಕಾ ಕ್ರಮವಾಗಿ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗಿದೆ.
ವಾಸ್ತವವಾಗಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ಹಾಗೂ ಗುಜರಾತ್ ನಡುವಿನ ಪಂದ್ಯ ಹೈದರಾಬಾದ್ನ ಜಿಮ್ಖಾನಾ ಮೈದಾನದಲ್ಲಿ ನಡೆಯಬೇಕಾಗಿತ್ತು. ಆದರೆ ಪಂದ್ಯವನ್ನು ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು. ಇದಕ್ಕೆ ಕಾರಣ ಬರೋಡಾ ತಂಡದ ಪರ ಕಣಕ್ಕಿಳಿದಿದ್ದ ಹಾರ್ದಿಕ್ ಪಾಂಡ್ಯ. ವಾಸ್ತವವಾಗಿ ಹಾರ್ದಿಕ್ ಪಾಂಡ್ಯ ಕೂಡ ಈ ಟೂರ್ನಿಯಲ್ಲಿ ಆಡುತ್ತಿದ್ದು, ಅವರನ್ನು ನೋಡಲು ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ಅಲ್ಲದೆ ಹಾರ್ದಿಕ್ ಮೈದಾನದಲ್ಲಿದ್ದಾಗ ಅಭಿಮಾನಿಗಳು ಕೂಡ ಮೈದಾನಕ್ಕೆ ಬಂದು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ಆಯೋಜಕರಿಗೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಪಂದ್ಯವನ್ನು ಸ್ಥಳಾಂತರ ಮಾಡಿದ್ದಾರೆ.
ಸಂಘಟಕರ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರನ್ನು ನೋಡುವ ಸಲುವಾಗಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಮೈದಾನಕ್ಕೆ ಬಂದಿದ್ದರು. ಆದ್ದರಿಂದ, ಭದ್ರತಾ ಕಾರಣಗಳಿಂದಾಗಿ, ಬರೋಡಾ ಹಾಗೂ ಗುಜರಾತ್ ನಡುವಿನ ಪಂದ್ಯವನ್ನು ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಸ್ಥಳಾಂತರಿಸಬೇಕಾಯಿತು. ಪಂದ್ಯದ ಸಮಯದಲ್ಲಿ ಯಾವುದೇ ತೊಂದರೆಗಳನ್ನು ತಪ್ಪಿಸಲು ಮತ್ತು ಪಂದ್ಯವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
SMAT 2025: ಹಾರ್ದಿಕ್ ಪಾಂಡ್ಯ ಅದ್ಭುತ ಬೌಲಿಂಗ್; 40 ಎಸೆತಗಳಲ್ಲಿ ಪಂದ್ಯ ಗೆದ್ದ ಬರೋಡಾ
ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಹಾರ್ದಿಕ್ ಪಾಂಡ್ಯ ಅವರ ಈ ಪ್ರದರ್ಶನದಿಂದಾಗಿ ಬರೋಡಾ, ಗುಜರಾತ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಬರೋಡಾ ಕೇವಲ 40 ಎಸೆತಗಳಲ್ಲಿ ಜಯಗಳಿಸಿತು. ಹಾರ್ದಿಕ್ ಪಾಂಡ್ಯ ನಾಲ್ಕು ಓವರ್‌ಗಳಲ್ಲಿ ಕೇವಲ 16 ರನ್‌ಗಳನ್ನು ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದ ಮೂಲಕ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ